ಲಕ್ನೋ[ಜು.30]: ತನ್ನ ಸ್ನೇಹಿತರೊಂದಿಗೆ ಕಣ್ಣು ಮುಚ್ಚಾಲೆಯಾಡುತ್ತಿದ್ದ 5 ವರ್ಷದ ನರ್ಸರಿ ಬಾಲಕ ಐಸ್ ಕ್ರೀಂ ಟ್ರೋಲಿಯೊಳಗೆ ಅವತು ಕುಳಿತುಕೊಂಡಿದ್ದಾನೆ. ಮಗು ಡಬ್ಬದೊಳಗೆ ಕುಳಿತುಕೊಳ್ಳುತ್ತಿದ್ದಂತೆಯೇ ಮುಚ್ಚಳ ಹೊರಗಿನಿಂದ ಮುಚ್ಚಿಕೊಂಡಿದೆ. ಹೀಗಾಗಿ ಹೊರ ಬರಲಾರದ ಮಗು ಉಸಿರುಗಟ್ಟಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಮಾದೋಟಾಂಡಾ ಪೊಲೀಸ್ ಠಾಣೆಯ ಅಧಿಕಾರಿಗಳು ನೀಡಿರುವ ಮಾಹಿತಿ ಅನ್ವಯ ಈ ಘಟನೆ ಸೋಮವಾರ ಕಲೀನಗರದಲ್ಲಿ ನಡೆದಿದೆ. ಸ್ನೇಹಿತರೊಮದಿಗೆ ಆಟವಾಡಲು ತೆರಳಿದ್ದ ಅಥರ್ವ ಗುಪ್ತಾ ಬಹಳ ಸಮಯವಾದರೂ ಮರಳದಿದ್ದಾಗ ಆತಂಕಗೊಂಡ ಪೋಷಕರು ಹುಡು ಕಾಟ ಆರಂಭಿಸಿದ್ದಾರೆ. ಎಷ್ಟೇ ಹುಡುಕಾಟ ನಡೆಸಿದರೂ ಮಗು ಪತ್ತೆಯಾಗದಾಗ ಹೆತ್ತವರು ಆತಂಕಗೊಂಡಿದ್ದಾರೆ.

ಹೀಗಿರುವಾಗ ಆಕಸ್ಮಿಕವಾಗಿ ಕುಟುಂಬ ಸದಸ್ಯರೊಬ್ಬರು ಮನೆ ಹೊರಗೆ ನಿಲ್ಲಿಸಲಾಗಿದ್ದ ಐಸ್ಸ್‌ಕ್ರೀಂ ಟ್ರೋಲಿಯ ಛೇಂಬರ್ ಮುಚ್ಚಳ ತೆಗೆದಿದ್ದಾರೆ. ಈ ವೇಳೆ ಮಗು ಸಾವನ್ನಪ್ಪಿರುವ ವಿಚಾರ ಬಯಲಾಗಿದೆ. ಭಾನುವಾರದಂದು ಮಗನಿಗೆ ಸ್ವಲ್ಪ ಗಾಯವಾಗಿತ್ತು ಹೀಗಾಗಿ ಆತನನ್ನು ಸೋಮವಾರ ಶಾಲೆಗೆ ಕಳುಹಿಸಿರಲಿಲ್ಲ ಎಂದು ಅಥರ್ವ ತಂದೆ ತಿಳಿಸಿದ್ದಾರೆ. 

SHO ಉಮೆಶ್ ಸಿಂಗ್ ಘಟನೆಯ ಮಾಹಿತಿ ನೀಡಿದ್ದು, 'ಮಗು ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿತ್ತು' ಎಂದಿದ್ದಾರೆ. ಘಟನೆ ಸಂಬಂಧ ಪೊಲೀಸರು FIR ದಾಖಲಿಸಿಲ್ಲ, ಅಲ್ಲದೇ ಶವದ ಪೋಸ್ಟ್ ಮಾರ್ಟಂ ಕೂಡಾ ಮಾಡಸಿಲ್ಲ ಎಂಬುವುದು ಉಲ್ಲೇಖನೀಯ.