ದೇಶದ ಐದು ರಾಜ್ಯಗಳ ವಿಧಾನಸಭೆಗೆ ಚುನಾವಣಾ ದಿನಾಂಕ ಪ್ರಕಟಗೊಂಡ ಬೆನ್ನಲ್ಲೇ, ಸಮೀಕ್ಷೆಯೊಂದು ಪ್ರಕಟಗೊಂಡಿದ್ದು, ಆಡಳಿತರೂಢ ಬಿಜೆಪಿ, 3 ರಾಜ್ಯಗಳ ಪೈಕಿ ಎರಡರಲ್ಲಿ ಗೆಲುವು ಸಾಧಿಸಿ, ಒಂದರಲ್ಲಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಹೇಳಿದೆ. 

ನವದೆಹಲಿ: ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನ ವಿಧಾನಸಭೆಗೆ ಚುನಾವಣಾ ದಿನಾಂಕ ಪ್ರಕಟಗೊಂಡ ಬೆನ್ನಲ್ಲೇ, ಸಮೀಕ್ಷೆಯೊಂದು ಪ್ರಕಟಗೊಂಡಿದ್ದು, ಆಡಳಿತರೂಢ ಬಿಜೆಪಿ, 3 ರಾಜ್ಯಗಳ ಪೈಕಿ ಎರಡರಲ್ಲಿ ಗೆಲುವು ಸಾಧಿಸಿ, ಒಂದರಲ್ಲಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಹೇಳಿದೆ. ಎರಡು ದಿನಗಳ ಹಿಂದಷ್ಟೇ ಪ್ರಕಟಗೊಂಡಿದ್ದ ಎಬಿಪಿ ನ್ಯೂಸ್‌, ಸಿ ವೋಟರ್‌ ಸಮೀಕ್ಷೆಯು, ಮೂರೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದ್ದು, ಕಾಂಗ್ರೆಸ್‌ ಮರಳಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿತ್ತು.

ಸೋಮವಾರ ಟೈಮ್ಸ್‌ ನೌ ಸುದ್ದಿವಾಹಿನಿಯು ವಾರ್‌ರೂಂ ಸ್ಟ್ರಾಟಜೀಸ್‌ ಜೊತೆಗೂಡಿ ಸಮೀಕ್ಷೆ ನಡೆಸಿದ್ದು, ಅದರನ್ವಯ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದರೆ, ರಾಜಸ್ಥಾನದಲ್ಲಿ ಬಿಜೆಪಿ ಹೀನಾಯ ಸೋಲುಕಂಡು, ಕಾಂಗ್ರೆಸ್‌ ಅಧಿಕಾರದ ಗದ್ದುಗೆಗೆ ಏರಲಿದೆ ಎಂದು ಹೇಳಿದೆ.

ಮಧ್ಯಪ್ರದೇಶ: 

ಒಟ್ಟು 200 ಸ್ಥಾನಗಳನ್ನು ಹೊಂದಿರುವ ಮಧ್ಯಪ್ರದೇಶ ವಿಧಾನಸಭೆಗೆ ತಕ್ಷಣವೇ ಚುನಾವಣೆ ನಡೆದರೆ ಬಿಜೆಪಿ 142, ಕಾಂಗ್ರೆಸ್‌ 77 ಮತ್ತು ಇತರರು 11 ಸ್ಥಾನ ಗೆಲ್ಲಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಈ ಹಿಂದಿನ ಚುನಾವಣೆಗೆ ಹೋಲಿಸಿದರೆ ಈ ಫಲಿತಾಂಶವು, ಬಿಜೆಪಿ ಪಾಲಿಗೆ 23 ಸ್ಥಾನ ನಷ್ಟ, ಕಾಂಗ್ರೆಸ್‌ ಪಾಲಿಗೆ 20 ಹೆಚ್ಚುವರಿ ಸೀಟು ತಂದುಕೊಡಲಿದೆ.

ಛತ್ತೀಸ್‌ಗಢ:

90 ಸ್ಥಾನಗಳನ್ನು ಹೊಂದಿರುವ ಛತ್ತೀಸ್‌ಗಢದಲ್ಲಿ ಮುಖ್ಯಮಂತ್ರಿ ರಮಣ್‌ಸಿಂಗ್‌ ನೇತೃತ್ವದ ಬಿಜೆಪಿ ಸರ್ಕಾರ 47 ಸ್ಥಾನ ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಏರಲಿದೆ. ವಿಪಕ್ಷದ ಕಾಂಗ್ರೆಸ್‌ ಕಳೆದ ಬಾರಿಗಿಂತ 6 ಸ್ಥಾನ ಕಳೆದುಕೊಂಡು 33 ಸ್ಥಾನಕ್ಕೆ ತೃಪ್ತಿಪಡಬೇಕಾಗಿ ಬರಲಿದೆ. ಇತರರು 10 ಸ್ಥಾನ ಗೆಲ್ಲಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ರಾಜಸ್ಥಾನ:

ವಸುಂಧರಾ ರಾಜೇ ಮುಖ್ಯಮಂತ್ರಿಯಾಗಿರುವ ರಾಜಸ್ಥಾನದಲ್ಲಿ ಈ ಬಾರಿ ಬಿಜೆಪಿ ಹೀನಾಯ ಸೋಲಿನ ಮೂಲಕ ಅಧಿಕಾರ ಕಳೆದುಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ. ಇದೀಗ ಚುನಾವಣೆ ನಡೆದರೆ ಬಿಜೆಪಿ ಕೇವಲ 75, ಕಾಂಗ್ರೆಸ್‌ 115 ಮತ್ತು ಇತರರು 10 ಸ್ಥಾನ ಗೆಲ್ಲಲಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಬಿಜೆಪಿ ಈ ಬರಿ 88 ಸ್ಥಾನಗಳ ನಷ್ಟಅನುಭವಿಸಲಿದ್ದರೆ, ಕಾಂಗ್ರೆಸ್‌ಗೆ ಹೆಚ್ಚುವರಿಯಾಗಿ 94 ಸ್ಥಾನ ಲಭ್ಯವಾಗಲಿದೆ ಎಂದು ಸಮೀಕ್ಷೆ ಹೇಳಿದೆ.

ಮಧ್ಯಪ್ರದೇಶ

ಒಟ್ಟು 230

ಬಹುಮತಕ್ಕೆ 116

ಬಿಜೆಪಿ 142

ಕಾಂಗ್ರೆಸ್‌ 77

ಛತ್ತೀಸ್‌ಗಢ

ಒಟ್ಟು 90

ಬಹುಮತಕ್ಕೆ 46

ಬಿಜೆಪಿ 47

ಕಾಂಗ್ರೆಸ್‌ 33

ರಾಜಸ್ಥಾನ

ಒಟ್ಟು 200

ಬಹುಮತಕ್ಕೆ 101

ಕಾಂಗ್ರೆಸ್‌ 115

ಬಿಜೆಪಿ 75

ಮಧ್ಯಪ್ರದೇಶ

ಒಟ್ಟು ಸ್ಥಾನ 230

ಪಕ್ಷ 2014 ಈಗ ಲಾಭ/ನಷ್ಟ

ಬಿಜೆಪಿ 165 142 -23

ಕಾಂಗ್ರೆಸ್‌ 57 77 +20

ಇತರರು 7 11 +4

ಛತ್ತೀಸ್‌ಗಢ

 ಒಟ್ಟು ಸ್ಥಾನ 90

ಪಕ್ಷ 2014 ಈಗ ಲಾಭ/ನಷ್ಟ

ಬಿಜೆಪಿ 45 47 +2

ಕಾಂಗ್ರೆಸ್‌ 39 33 -6

ಇತರರು 2 10 +8

ರಾಜಸ್ಥಾನ

 ಒಟ್ಟು ಸ್ಥಾನ 200

ಪಕ್ಷ 2014 ಈಗ ಲಾಭ/ನಷ್ಟ

ಬಿಜೆಪಿ 163 75 -88

ಕಾಂಗ್ರೆಸ್‌ 21 115 +94

ಇತರರು 10 4 - 6