Asianet Suvarna News Asianet Suvarna News

ಕ್ರೆಡಿಟ್ ಕಾರ್ಡ್ ಕೈಕೊಟ್ಟಿತೇ?  ಅದರ ಹಿಂದೆ ಈ 5 ಕಾರಣಗಳಿರಬಹುದು

ನೀವು ಕ್ರೆಡಿಟ್ ಕಾರ್ಡ್ ಬಳಕೆದಾರರಾಗಿದ್ದು, ಅದರ ಮೂಲಕ ಹಣ ಪಾವತಿಸುವಾಗ ಅಥವಾ ಖರೀದಿ ಮಾಡುವಾಗ ಕಾರ್ಡ್ ಪಾವತಿ ತಿರಸ್ಕೃತವಾಯಿತೇ? ಹಾಗಾದರೆ ಅದರ ಹಿಂದೆ ಈ 5 ಕಾರಣಗಳು ಇರಬಹುದು

5 Possible Scenarios When Your Credit Card Transaction Could Get Declined

ನೀವು ಕ್ರೆಡಿಟ್ ಕಾರ್ಡ್ ಬಳಕೆದಾರರಾಗಿದ್ದು, ಅದರ ಮೂಲಕ ಹಣ ಪಾವತಿಸುವಾಗ ಅಥವಾ ಖರೀದಿ ಮಾಡುವಾಗ ಕಾರ್ಡ್ ಪಾವತಿ ತಿರಸ್ಕೃತವಾಯಿತೇ? ಹಾಗಾದರೆ ಅದರ ಹಿಂದೆ ಈ 5 ಕಾರಣಗಳು ಇರಬಹುದು

ಕ್ರೆಡಿಟ್ ಕಾರ್ಡ್’ಗಳು ‘ಹಣಕಾಸಿನ ಸ್ವಾತಂತ್ರ್ಯ’ ನೀಡಿರುವುದರಿಂದ ಅವುಗಳಿಂದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಸಾಮಾನ್ಯವಾಗಿ ನಮ್ಮ ಆದಾಯಕ್ಕೆ ಅನುಗುಣವಾಗಿ ನಾವು ಖರ್ಚು ಮಾಡುತ್ತೇವೆ. ಆದರೆ ಕ್ರೆಡಿಟ್ ಕಾರ್ಡ್’ಗಳು ನಮಗೆ ಆ ಮಿತಿಯನ್ನು ಮೀರಿ ಖರ್ಚು ಮಾಡಲು ಅನುವು ಮಾಡಿಕೊಡುತ್ತವೆ. ತುರ್ತು ಸಂದರ್ಭಗಳಲ್ಲಿ ಅಥವಾ ಅನಿರೀಕ್ಷಿತವಾಗಿ ಏನಾದರೂ ಖರೀದಿಸಬೇಕಾಗಿ ಬಂದಾಗ ಅಥವಾ ಟಿಕೆಟ್ ಕಾಯ್ದಿರಿಸುವಾಗ, ಈ ಕ್ರೆಡಿಟ್ ಕಾರ್ಡ್ ‘ಆಪತ್ಬಾಂಧವ’ವಾಗುತ್ತದೆ.  ಆದರೆ ಇಂತಹ ಒಳ್ಳೆ ಸೌಲಭ್ಯವು ಅಗತ್ಯವಿರುವ ವೇಳೆಯೇ ಕೈಕೊಟ್ಟುಬಿಟ್ಟರೆ ನಾವು ಕೇವಲ ಗಾಬರಿಪಡುವುದಷ್ಟೇ ಅಲ್ಲ, ಜೊತೆಗೆ ಮುಜುಗರಕ್ಕೊಳಗಾಗುವುದೂ ಹೌದು.

ಕುಟುಂಬಸಮೇತರಾಗಿ ರೆಸ್ಟೋರೆಂಟ್’ಗೆ ಹೋಗಿ ಡಿನ್ನರ್ ಮುಗಿಸುವ ಮಧುರ ಅನುಭವದ ಬಳಿಕ ಬಿಲ್ ಪಾವತಿಸುವಾಗ  ಕಾರ್ಡ್ ಪಾವತಿ ತಿರಸ್ಕೃತವಾಗಿಬಿಟ್ಟರೇ? ಅಥವಾ ಆತ್ಮೀಯರೊಬ್ಬರಿಗೆ ವಿಶೇಷ ಸಂದರ್ಭದಲ್ಲಿ ಆನ್’ಲೈನ್ ಮೂಲಕ ಹೂಗುಚ್ಛ ಬುಕ್ ಮಾಡುವ ಸಂದರ್ಭದಲ್ಲಿ ಕ್ರೆಡಿಟ್ ಕಾರ್ಡ್ ಬ್ಲಾಕ್ ಆಗಿ ಬಿಟ್ಟರೆ, ನಮ್ಮ ಅವಸ್ಥೆ ಹೇಗಾಗಬಹುದು ಎಂಬುವುದನ್ನು ಕೊಂಚ ಊಹಿಸಿಕೊಳ್ಳಿ.

ಓರ್ವ ಬುದ್ದಿವಂತ ಕ್ರೆಡಿಟ್ ಕಾರ್ಡ್ ಬಳಕೆದಾರರನೆಂಬ ನೆಲೆಯಲ್ಲಿ ಪ್ರತಿಯೊಬ್ಬರು ‘ಕಾರ್ಡ್ ಪಾವತಿ ತಿರಸ್ಕೃತ’ವಾಗುವುದಕ್ಕೆ ಕಾರಣಗಳು ಏನಿರಬಹುದೆಂಬುವುದನ್ನು ತಿಳಿದುಕೊಳ್ಳುವುದು ಅತ್ಯಗತ್ಯ. ಕಾರ್ಡ್ ತಿರಸ್ಕೃತವಾಗುವುದಕ್ಕೆ ಕೆಲವು ಕಾರಣಗಳು ಹೀಗಿವೆ..

ಅಂತರಾಷ್ಟ್ರೀಯ/ ವಿದೇಶದಲ್ಲಿ ಬಳಕೆ :

ವಿಶ್ವದಾದ್ಯಂತ ಕ್ರೆಡಿಟ್ ಕಾರ್ಡ್ ವಂಚನೆ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಅವುಗಳನ್ನು ತಡೆಯಲು ಬ್ಯಾಂಕುಗಳು ಕೂಡಾ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಂಡಿವೆ. ಗ್ರಾಹಕರ ಕ್ರೆಡಿಟ್ ಕಾರ್ಡ್ ವಿವರಗಳನ್ನು ಕಳವು ಮಾಡಿದ ಬಳಿಕ ತಮ್ಮ ಬಗ್ಗೆ ಸುಳಿವು ಸಿಗದಂತಾಗಲು ವಂಚಕರು ಬೇರೆ ದೇಶಗಲ್ಲಿ ಆನ್’ಲೈನ್ ಶಾಪಿಂಗ್ ನಡೆಸುತ್ತಾರೆ. ಈ ಸಂಶಯಾಸ್ಪದ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ಕ್ರಮವಾಗಿ ಬ್ಯಾಂಕುಗಳು ವಿದೇಶದಲ್ಲಿ ನಡೆಯುವ ವ್ಯವಹಾರವನ್ನು ಬ್ಲಾಕ್ ಮಾಡುತ್ತವೆ. ಇಂತಹ ಸಂದರ್ಭದಲ್ಲಿ, ತಮ್ಮ ವಿದೇಶ ಪ್ರವಾಸದ ಬಗ್ಗೆ ಕ್ರೆಡಿಟ್ ಕಾರ್ಡ್ ಕಂಪನಿಗೆ ಮುಂಚಿತವಾಗಿ  ತಿಳಿಸಿದರೆ ಉತ್ತಮ.

ತಾಂತ್ರಿಕ ಸಮಸ್ಯೆ:

ಕೆಲವೊಮ್ಮೆ ತಾತ್ಕಾಲಿಕವಾಗಿ ಕ್ರೆಡಿಟ್ ಕಾರ್ಡ್ ಬ್ಲಾಕ್ ಆಗುವುದಿದೆ; ಅದಕ್ಕೆ ಬ್ಯಾಂಕ್’ನ ತಾಂತ್ರಿಕ ಸಮಸ್ಯೆ/ತಂತ್ರಜ್ಞಾನ ಮೇಲ್ದರ್ಜೆಗೇರಿಸುವ ಕೆಲಸ ನಡೆಯುವುತ್ತಿರುವುದು ಒಂದು ಕಾರಣವಾಗಿರಬಹುದು ಅಥವಾ ಮಾರಾಟಗಾರನ  PoS ಯಂತ್ರದಲ್ಲಿ ಸಮಸ್ಯೆಯಿರಬಹುದು. ಆನ್’ಲೈನ್ ತಾಣಗಳಲ್ಲಿ ‘ಕ್ರೆಡಿಟ್ ಕಾರ್ಡ್ ಪಾವತಿ’ ತಿರಸ್ಕೃತಗೊಳ್ಳುವುದು ಕೂಡಾ ಅಷ್ಟೇ ಸಾಮಾನ್ಯ. ಆದರೆ ಇಂತಹ ತಾಂತ್ರಿಕ ತೊಂದರೆಯುಂಟಾದ ಸಂದರ್ಭದಲ್ಲಿ, ಸಮಸ್ಯೆಯು ಕ್ರೆಡಿಟ್ ಕಾರ್ಡ್’ನ ಬ್ಯಾಂಕ್ ಸರ್ವರ್’ನದ್ದೋ ಅಥವಾ ಮಾರಾಟಗಾರನ ಬ್ಯಾಂಕಿನದ್ದೋ ಎಂದು ತಿಳಿಯುವುದು ಕಷ್ಟ. ಸಾಮಾನ್ಯವಾಗಿ ಇಂತಹ ಸಮಸ್ಯೆಗಳು ಸ್ವಲ್ಪ ಸಮಯದಲ್ಲೇ ತನ್ನಿಂತಾನೇ ಪರಿಹರಿಸಲ್ಪಡುತ್ತವೆ. ನಿಮ್ಮ ಬಳಿ ಬೇರಾವುದೋ ಕಾರ್ಡ್ ಇದ್ದರೆ ಅದನ್ನು ಪ್ರಯತ್ನಿಸುವ ಮೂಲಕ, ಸಮಸ್ಯೆ ಕಾರ್ಡಿನದ್ದೋ ಅಥವಾ ತಾಂತ್ರಿಕ ಸ್ವರೂಪದ್ದೋ ಎಂದು ಕಂಡುಹಿಡಿಯಬಹುದು.

ಪರಿಷ್ಕೃತ ಶರತ್ತು ಮತ್ತು ನಿಬಂಧನೆಗಳನ್ನು ಅಂಗೀಕರಿಸದಿರುವುದು:

ಕ್ರೆಡಿಟ್ ಕಾರ್ಡ್ ಬಳಕೆಯ ಶರತ್ತು ಮತ್ತು ನಿಬಂಧನೆಗಳನ್ನು ಬ್ಯಾಂಕುಗಳು ಯಾವುದೇ ಸಂದರ್ಭದಲ್ಲಿ ಬದಲಾಯಿಸಬಹುದು.  ಸಾಮಾನ್ಯವಾಗಿ ಮೇಲ್ ಅಥವಾ ಮೆಸೇಜ್ ಮೂಲಕ ಬ್ಯಾಂಕುಗಳು ಈ ವಿಷಯವನ್ನು ಗ್ರಾಹಕರಿಗೆ ತಿಳಿಸುತ್ತವೆ.  ಒಂದು ವೇಳೆ ನೀವು ಆ ಸಂದೇಶಗಳನ್ನು ಗಮನಿಸದಿದ್ದ ಪಕ್ಷದಲ್ಲಿ ಅಥವಾ ಅದಕ್ಕೆ ಪ್ರತಿಕ್ರಿಯೆ ನೀಡದ ಸಂದರ್ಭದಲ್ಲಿ ನಿಮ್ಮ ಕಾರ್ಡ್ ಬ್ಲಾಕ್ ಆಗುವ ಸಾಧ್ಯತೆಗಳಿರುತ್ತವೆ.  ಆದುದರಿಂದ ಬ್ಯಾಂಕುಗಳಿಂದ ಬರುವ ಪ್ರತಿ ಸಂದೇಶವನ್ನು ಗಮನಿಸಿ, ಅದರಂತೆ ನಿಮ್ಮನ್ನು ಅಪ್’ಡೇಟ್ ಆಗಿಟ್ಟುಕೊಳ್ಳಿ.

ಅನಿರೀಕ್ಷಿತ ಖರೀದಿ:

ನಿಮ್ಮ ಖರೀದಿ ಪ್ರವೃತ್ತಿಯೊಂದಿಗೆ ತಾಳೆಯಾಗದ ಅನೀರೀಕ್ಷಿತ ಖರೀದಿ ಮಾಡಿದರೆ ಕೂಡಾ ಕ್ರೆಡಿಟ್ ಕಾರ್ಡ್ ಬ್ಲಾಕ್ ಆಗುವ ಸಾಧ್ಯತೆಗಳಿರುತ್ತವೆ. ಹಿಂದಿನ ಸರಾಸರಿ ಖರೀದಿ ಮೊತ್ತಕ್ಕೆ ಹೋಲಿಸಿದಾಗ ನೀವು ಯಾವುದಾದರು ಭಾರೀ ಹೆಚ್ಚಿನ ಮೊತ್ತದ ಖರೀದಿಗೆ ಮುಂದಾದರೆ, ಅಥವಾ ಅಸಹಜ ಮೊತ್ತದ ವ್ಯವಹಾರ ನಡೆಸಿದರೆ  ಕಾರ್ಡ್ ಬ್ಲಾಕ್ ಆಗುತ್ತದೆ. ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡಲು ಹಾಗೂ  ವಂಚನೆಯನ್ನು ತಡೆಯಲು ಬ್ಯಾಂಕುಗಳು ಇಂತಹ ವ್ಯವಸ್ಥೆಯನ್ನು ಮಾಡುತ್ತವೆ.

ತಪ್ಪು ಮಾಹಿತಿ:

ಕಾರ್ಡ್ ಬಳಸುವಾಗ ತಪ್ಪು ಪಿನ್ ಅಥವಾ ಕಾರ್ಡ್ ವೆರಿಫಿಕೇಶನ್ ವ್ಯಾಲ್ಯೂ (ಸಿವಿವಿ) ಸಂಖ್ಯೆಯನ್ನು ಹಾಕುವುರಿಂದಲೂ ಕಾರ್ಡ್ ಸ್ಥಗಿತಗೊಳ್ಳುತ್ತದೆ. ಆದುದರಿಂದ ಕಾರ್ಡ್ ಬಳಸುವಾಗ ಸರಿಯಾದ ಮಾಹಿತಿಯನ್ನೇ ತುಂಬಿ. ಕಾರ್ಡ್ ಬಹಳ ಹಳತಾಗಿದ್ದರೆ ಅದರ ಮೇಲಿರುವ ವಿವರಗಳು ಅಳಿಸಿಹೋಗುವ ಸಂಭವಗಳಿರುತ್ತವೆ. ಆದುದರಿಂದ ಅಂತಹ ಕಾರ್ಡ್’ಗಳನ್ನು ಬದಲಾಯಿಸಿಕೊಳ್ಳಿ.

ಕ್ರೆಡಿಟ್ ಕಾರ್ಡ್ ಪಾವತಿ ತಿರಸ್ಕೃತವಾಗಲು ಈ ರೀತಿ ಹಲವಾರು ಕಾರಣಗಳಿವೆ. ಆದುದರಿಂದ ‘ಬುದ್ದಿವಂತ’ ಕಾರ್ಡ್ ಬಳಕೆದಾರರಾಗಿರಿ. ಕಾರ್ಡ್’ನ ಸದ್ಬಳಕೆಯೊಂದಿಗೆ ಅವುಗಳು ಬ್ಲಾಕ್ ಆಗದಂತೆ ಜಾಗೃತೆವಹಿಸಿರಿ.

5 Possible Scenarios When Your Credit Card Transaction Could Get Declined

ಆಧಿಲ್ ಶೆಟ್ಟಿ, 

ಸಿಇಓ -ಬ್ಯಾಂಕ್ ಬಝಾರ್

https://www.bankbazaar.com/

[ಬ್ಯಾಂಕ್ ಬಜಾರ್ ಒಂದು ಆನ್’ಲೈನ್ ಮಾರುಕಟ್ಟೆ ತಾಣವಾಗಿದ್ದು, ಗ್ರಾಹಕರು  ಕ್ರೆಡಿಟ್ ಕಾರ್ಡ್, ವೈಯುಕ್ತಿಕ ಸಾಲ, ಗೃಹ ಸಾಲ, ವಾಹನ ಸಾಲ ಹಾಗೂ ವಿಮೆಗಳನ್ನು  ತುಲನೆ ಮಾಡಿ ನಿರ್ಧಾರ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಹಕಾರಿಯಾಗಿದೆ.]

Follow Us:
Download App:
  • android
  • ios