ಮಾಗಡಿ (ಸೆ.18): ಬಿಲ್’ಗೆ ಸಹಿ ಹಾಕುವ ವಿಚಾರದಲ್ಲಿ ಇಂಜಿನಿಯರ್ ಒಬ್ಬರ ಕೈ ಕಡಿದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕುದೂರು ಪೊಲೀಸರು ಐದು ಮಂದಿಯನ್ನು ಬಂಧಿಸಿದ್ದಾರೆ.

ಕುಣಿಗಲ್ ಮೂಲದ ಗುತ್ತಿಗೆದಾರರಾದ ಸಿರಿಯನಪಾಳ್ಯದ ಚನ್ನಕೇಶವ, ತೆರೆದಕುಪ್ಪೆಯ ಮಂಜುನಾಥ , ಚಿಕ್ಕಹೊನ್ನೇಗೌಡನಪಾಳ್ಯದ ಲಕ್ಷ್ಮಣ , ಬಾಗೇನಹಳ್ಳಿಯ ಪುನೀತ, ಮತ್ತು ಕೆರೆಇಂಡೇಪಾಳ್ಯದ ಚಾಮಣ್ಣ ಬಂಧಿತರು.

ಉದ್ಯೋಗ ಖಾತ್ರಿ ಯೋಜನೆಯ ಬಿಲ್ ಮಂಜೂರು ಮಾಡುವ ವಿಚಾರದಲ್ಲಿ ಆರೋಪಿಗಳು ಮಾಗಡಿಯ ಕಲ್ಯಾ ಗೇಟ್ ನಿವಾಸಿಯಾಗಿರುವ ನರೇಗಾ ತಾಂತ್ರಿಕ ಸಹಾಯಕ ಅಧಿಕಾರಿ ಶ್ರೀನಿವಾಸ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.

ಕುಣಿಗಲ್ ನ ಹುತ್ತರಿದುರ್ಗದಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಶ್ರೀನಿವಾಸ್, ಹೆಚ್ಚಿನ ಬಿಲ್ ಹಾಕಿದ್ದಕ್ಕೆ ಅದನ್ನು ಮಂಜೂರು ಮಾಡಲು ನಿರಾಕರಿಸಿದ್ದರು.

ಶ್ರೀನಿವಾಸ್ ಕೆಲಸ ಮುಗಿಸಿ ರಾತ್ರಿ ಮನೆಗೆ ವಾಪಸ್ಸು ಹೋಗುತ್ತಿರುವ ವೇಳೆ ಆರೋಪಿಗಳು ಮಾಗಡಿ ತಾಲ್ಲೂಕಿನ ತಾಳೆಕೆರೆ ಹ್ಯಾಂಡ್ ಪೋಸ್ಟ್ ಬಳಿ ಹಲ್ಲೆ ನಡೆಸಿ ಕೈ ಕಡಿದಿದ್ದರು.