ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ದೇಶದ ಅತ್ಯುತ್ತಮ ಗ್ರಾಮಗಳ ಪಟ್ಟಿ ಬಿಡುಗಡೆ ಮಾಡಿದ್ದು, ಅಗ್ರ 10ರಲ್ಲಿ ರಾಜ್ಯದ ಐದು ಗ್ರಾಮಗಳು ಕಾಣಿಸಿಕೊಂಡಿವೆ.

ನವದೆಹಲಿ (ಡಿ.23): ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ದೇಶದ ಅತ್ಯುತ್ತಮ ಗ್ರಾಮಗಳ ಪಟ್ಟಿ ಬಿಡುಗಡೆ ಮಾಡಿದ್ದು, ಅಗ್ರ 10ರಲ್ಲಿ ರಾಜ್ಯದ ಐದು ಗ್ರಾಮಗಳು ಕಾಣಿಸಿಕೊಂಡಿವೆ.

100ರಲ್ಲಿ 87 ಅಂಕ ಪಡೆದ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೌಜಲಗಿ ದೇಶದಲ್ಲೇ ಐದನೇ ಸ್ಥಾನ ಪಡೆದಿದ್ದು, ೯೨ ಅಂಕ ಪಡೆದ ತೆಲಂಗಾಣದ ತೆಲ್ಲಾಪುರ ಪ್ರಥಮ ಸ್ಥಾನದಲ್ಲಿ ವಿರಾಜಮಾನವಾಗಿದೆ. ಒಟ್ಟಾರೆ ಅಗ್ರ 2ನೇ ರ‍್ಯಾಂಕ್ ಪಟ್ಟಿಯಲ್ಲಿ 45 ಗ್ರಾಮಗಳು ಕಾಣಿಸಿಕೊಂಡಿವೆ.

ಗ್ರಾಮೀಣಾಭಿವೃದ್ಧಿ ಇಲಾಖೆಯ ಅಂತ್ಯೋದಯ ಯೋಜನೆಯಡಿ ವಿವಿಧ ಮಾನದಂಡಗಳ ಅಡಿಯಲ್ಲಿ41,617 ಗ್ರಾ.ಪಂ.ಗಳ ಮಾಹಿತಿಯನ್ನು ಕ್ರೋಢೀಕರಿಸಿ ಈ ಶ್ರೇಯಾಂಕವನ್ನು ನೀಡಲಾಗಿದೆ. ಆಂಧ್ರದ ಚಿತ್ತೂರು ಜಿಲ್ಲೆಯ ಕಲಿಕಿರಿ ಜಿಲ್ಲೆಯ ಪರಪಟ್ಲಕ್ಕೆ ಎರಡನೇ ಸ್ಥಾನ, ವಿಶಾಖಪಟ್ಟಣಂನ ಚೀಡಿಕಾಡ ತಾಲೂಕಿನ ಚೀಡಿಕಾಡ ಮೂರನೇ ಸ್ಥಾನ ಮತ್ತು ನಾಲ್ಕನೇ ಸ್ಥಾನವನ್ನು ಕ್ರಮವಾಗಿ

ಅದೇ ರಾಜ್ಯದ ಮೂರು ಗ್ರಾಮಗಳಾದ ಕಾಜಲೂರು, ಉಂಗುಟುರು, ಇಗ್ವಾ ತವನಂಪಲ್ಲೆಗಳು ಪಡೆದಿವೆ. ರಾಜ್ಯದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗುಜ್ಜಾಡಿ 85 ಅಂಕಗಳೊಂದಿಗೆ 7ನೇ ಸ್ಥಾನ, ಮಂಡ್ಯದ ಮಳವಳ್ಳಿ ತಾಲೂಕಿನ ಕಿರುಗಾವಲು 8ನೇ , ಮಂಡ್ಯದ ಕೆರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ನೆಲ್ಯಾಡಿ ೯ನೇ ರ‌್ಯಾಂಕ್ ಪಡೆದು ರಾಜ್ಯಕ್ಕೆ ಹೆಮ್ಮೆ ತಂದಿವೆ.

ಅಗ್ರ 20ರೊಳಗೆ ರಾಜ್ಯದ 45 ಗ್ರಾಮಗಳಿದ್ದು ದಕ್ಷಿಣ ಕನ್ನಡದ 14, ಉಡುಪಿಯ 10 ಮತ್ತು ಮಂಡ್ಯದ 6 ಗ್ರಾಮಗಳಿವೆ. 12ನೇ ರ‍್ಯಾಂಕ್‌ನಲ್ಲಿ 80 ಅಂಕಗಳೊಂದಿಗೆ ಬಾಗಲಕೋಟೆಯ ಕಲದಗಿ ಇದೆ. ಉಡುಪಿಯ ಕೆಮ್ಮಣ್ಣು, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಮಲವೂರು ೧೩ನೇ ರ‌್ಯಾಂಕ್ ಪಡೆದಿವೆ.

ಮಂಡ್ಯದ ಮಳವಳ್ಳಿಯ ಹಲಗೂರು 14ನೇ ರ‍್ಯಾಂಕ್, ಉಡುಪಿಯ ಚೆಕ್ಕಾಡಿ, ಮೈಸೂರಿನ ನಂಜನಗೂಡು ತಾಲೂಕಿನ ಹದಿನಾರು, ಗದಗದ ಹುಲ್ಕೋಟಿ, ದಕ್ಷಿಣ ಕನ್ನಡದ ಬಂಟ್ವಾಳದ ಕೋಳ್ನಾಡು, ಇದೇ ಜಿಲ್ಲೆಯ ಮಂಗಳೂರು ತಾಲೂಕಿನ ಪಾವೂರು 15ನೇ ಸ್ಥಾನ ಪಡೆದಿವೆ.

ಮಂಡ್ಯದ ಶ್ರೀರಂಗಪಟ್ಟಣದ ಬೆಳಗೊಳ, ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಬೆಳ್ಳಾರೆ, ಇದೇ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ, ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಹರಿಹರಪುರ, ಬೆಂಗಳೂರಿನ ಎಚ್. ಗೊಲ್ಲಹಳ್ಳಿ, ಬೆಳಗಾವಿಯ ಅಥಣಿ ತಾಲೂಕಿನ ಶಿರಗುಪ್ಪಿ 16 ಅಂಕಗಳೊಂದಿಗೆ 16ನೇ ರ‍್ಯಾಂಕ್‌ನಲ್ಲಿ ಇವೆ. 17ನೇ ರ‍್ಯಾಂಕ್‌ನಲ್ಲಿ ಉಡುಪಿಯ ಬೆಳಪು,

ಮುದರಂಗಡಿ ಹಾಸನದ ಬೇಲೂರು ತಾಲೂಕಿನ ಘಟ್ಟದಹಳ್ಳಿ, ಚಾಮರಾಜನಗರದ ಯಳಂದೂರು ವಿಭಾಗದ ಹೊನ್ನೂರು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಬಕ, ಬಂಟ್ವಾಳದ ಕುರ್ನಾಡು, ಮಂಡ್ಯದ ಕೀಲಾರ ಗ್ರಾಮ ಸ್ಥಾನ ಪಡೆದಿದೆ. ಈ ಮೇಲಿನ ಎಲ್ಲ ಗ್ರಾಮಗಳು 75ಕ್ಕಿಂತ ಹೆಚ್ಚು ಅಂಕ ಪಡೆದಿವೆ.

ಉಡುಪಿಯ ಕುಂದಾಪುರ ತಾಲೂಕಿನ ಅಂಪಾರು, ಬೆಂಗಳೂರಿನ ಆನೇಕಲ್‌ನ ದೊಮ್ಮಸಂದ್ರ, ಬೀದರ್‌ನ ಬಸವಕಲ್ಯಾಣದ ಗೊರ್ತ ಬಿ, ಧಾರವಾಡದ ಹೆಬ್ಬಳ್ಳಿ, ಮೈಸೂರು ಜಿಲ್ಲೆಯ ಟಿ.ನರಸೀಪುರದ ಹೊಳೆಸಾಲು, ಉಡುಪಿಯ ಪಡುಬಿದ್ರಿ ಮತ್ತು ಪೆರ್ಡೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಎಡಪದವು 74 ಅಂಕಗಳೊಂದಿಗೆ ೧೮ನೇ ರ‌್ಯಾಂಕ್

ಹೊಂದಿವೆ. ದ.ಕನ್ನಡದ ಮಂಗಳೂರಿನ ಅಂಬ್ಲಾ ಮೊಗ್ರು, ಸುಳ್ಯದ ಸಂಪಾಜೆ, ಗದಗದ ಮುಂಡರ್ಗಿಯ ದಂಬಾಲ್, ಕಲಬುರಗಿ ಜಿಲ್ಲೆಯ ಅಫ್ಜಲಪುರ ತಾಲೂಕಿನ ಮಷಾಲ್, ಉಡುಪಿಯ ಉದ್ಯಾವರ 19ನೇ ರ‍್ಯಾಂಕ್ ಪಡೆದಿವೆ. ಮಂಡ್ಯದ ಮದ್ದೂರಿನ ಬೆಸಗರಹಳ್ಳಿ, ಉಡುಪಿಯ ಉದ್ಯಾವರ ಮತ್ತು ಕುರ್ಕಾಲು, ಕುಂದಾಪುರದ ವಂಡ್ಸೆ , ದ.ಕ ದ ಬಂಟ್ವಾಳದ ಪುದು ಮತ್ತು ರಾಯಿ, ಮಂಗಳೂರಿನ ಪೆರ್ಮುದೆ ಗ್ರಾಮಗಳು ಕೂಡ ೨೦ರ ಪಟ್ಟಿಯಲ್ಲಿವೆ.