ಹುಷಾರಾಗಿರಿ.... ವಿ ಚಾಟ್, ಟ್ರೂಕಾಲರ್, ವಿಯೆಬೊ ಬಗ್ಗೆ ಎಚ್ಚರದಿಂದಿರಿ ಚೀನಾ ಆ್ಯಪ್ ಡಿಲೀಟ್: ಯೋಧರಿಗೆ ಗುಪ್ತದಳ ಸೂಚನೆ

ನವದೆಹಲಿ: ಚೀನಾ ತನ್ನ ಜನಪ್ರಿಯ ಮೊಬೈಲ್ ಆ್ಯಪ್‌ಗಳ ಮೂಲಕ ಭದ್ರತಾ ಸಂಸ್ಥೆಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ಕಲೆ ಹಾಕುವ ಸಾಧ್ಯತೆ ಇದೆ ಎಂದು ಅಂತಾರಾಷ್ಟ್ರೀಯ ಗಡಿಯಲ್ಲಿ ನಿಯೋಜನೆಗೊಂಡಿರುವ ಸೇನಾಪಡೆಗಳಿಗೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ಹೀಗಾಗಿ ಅಂತಾರಾಷ್ಟ್ರೀಯ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಧರಿಗೆ ತಮ್ಮ ಸ್ಮಾರ್ಟ್ ಫೋನ್‌ಗಳಲ್ಲಿ ಇರುವ ಕೆಲವೊಂದು ಆ್ಯಪ್‌ಗಳನ್ನು ಡಿಲೀಟ್ ಮಾಡುವಂತೆ ಇಲ್ಲವೆ ಮೊಬೈಲ್‌ಗಳನ್ನು ರೀಫಾರ್ಮೇಟ್ ಮಾಡು ವಂತೆ ಡಿಐಜಿ (ಗುಪ್ತಚರ) ಸಲಹೆ ನೀಡಿದೆ.

ವಿ ಚಾಟ್, ಟ್ರೂಕಾಲರ್, ವಿಯೆಬೊ, ಯುಸಿ ಬ್ರೌಸರ್ ಮತ್ತು ಯುಸಿ ನ್ಯೂಸ್ ಸೇರಿ ದಂತೆ 42 ಜನಪ್ರಿಯ ಆ್ಯಪ್‌ಗಳನ್ನು ಗುಪ್ತಚರ ಇಲಾಖೆ ಪಟ್ಟಿಮಾಡಿದೆ.

ಈ ಆ್ಯಪ್‌ಗಳು ಸೂಕ್ಷ್ಮ ವೈಯಕ್ತಿಕ ಮಾಹಿತಿಗಳನ್ನು ಚೀನಾದ ಅಧಿಕಾರಿಗಳಿಗೆ ರವಾನಿಸುವ ಸಾಧ್ಯತೆ ಇದ್ದು, ಭಾರೀ ಮಟ್ಟದ ಭದ್ರತಾ ವೈಫಲ್ಯಕ್ಕೆ ಕಾರಣಬಹುದು ಎಂದು ಸಲಹೆಯಲ್ಲಿ ತಿಳಿಸಲಾಗಿದೆ.

ಡೋಕ್ಲಾಮ್ ಬಿಕ್ಕಟ್ಟಿನ ಬಳಿಕ ಭಾರತ ಮತ್ತು ಚೀನಾ ಪಡೆಗಳು ಗಡಿಯಲ್ಲಿ ಕಟ್ಟೆಚ್ಚರ ವಹಿಸಿರುವ ಸಂದರ್ಭದಲ್ಲೇ ಗುಪ್ತಚರ ಇಲಾಖೆಯಿಂದ ಎಚ್ಚರಿಕೆ ಹೊರಬಿದ್ದಿದೆ.

ಈ ಮುನ್ನ ಭಾರತೀಯ ವಾಯು ಪಡೆ ಚೀನಾದ ಶ್ಯೋಮಿ ಸ್ಮಾರ್ಟ್‌ಫೋನ್ ಮತ್ತು ನೋಟ್‌ಬುಕ್‌ಗಳನ್ನು ಬಳಸದಂತೆ ತನ್ನ ಅಧಿಕಾರಿಗಳು, ವಾಯುಪಡೆ ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ಸೂಚಿಸಿತ್ತು.