ಭೋಪಾಲ್‌ [ಜು.26]: ಅಪರಾಧ ಮಸೂದೆ ತಿದ್ದುಪಡಿ ಮಸೂದೆ ಮೇಲಿನ ಮತದಾನ ಪ್ರಕ್ರಿಯೆಯಲ್ಲಿ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಇಬ್ಬರು ಬಿಜೆಪಿ ಶಾಸಕರು ಕಾಂಗ್ರೆಸ್‌ ಸರ್ಕಾರ ಬೆಂಬಲಿಸಿದ ಬೆನ್ನಲ್ಲೇ, ರಾಜ್ಯದ ಇನ್ನೂ ನಾಲ್ವರು ಬಿಜೆಪಿ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಸ್ವಯಂ ಘೋಷಿತ ದೇವಮಾನವ ಹಾಗೂ ಕಂಪ್ಯೂಟರ್‌ ಬಾಬಾ ಖ್ಯಾತಿಯ ನಾಮ್‌ದೇವ್‌ ತ್ಯಾಗಿ ಹೊಸ ಬಾಂಬ್‌ ಹಾಕಿದ್ದಾರೆ. ಆದರೆ, ಅವರ ಹೆಸರುಗಳು ಸೇರಿದಂತೆ ಇನ್ನಿತರ ಯಾವುದೇ ಮಾಹಿತಿಗಳನ್ನು ತ್ಯಾಗಿ ಬಹಿರಂಗಪಡಿಸಲಿಲ್ಲ.

ಮಧ್ಯಪ್ರದೇಶ ಬಿಜೆಪಿ ನಾಯಕತ್ವದ ವಿರುದ್ಧ ಹಲವು ಶಾಸಕರು ಅಸಮಾಧಾನ ಹೊಂದಿದ್ದು, ಅವರೆಲ್ಲರೂ ತಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ಮುಖ್ಯಮಂತ್ರಿ ಕಮಲ್‌ನಾಥ್‌ ಭೇಟಿ ಬಳಿಕ ತಮ್ಮ ಜೊತೆ ಸಂಪರ್ಕದಲ್ಲಿರುವ ಬಿಜೆಪಿ ಶಾಸಕರ ಹೆಸರುಗಳನ್ನು ಬಹಿರಂಗಪಡಿಸುವುದಾಗಿ ಹೇಳಿದರು. ಆದರೆ, ರಾಜ್ಯ ಬಿಜೆಪಿ ಒಗ್ಗಟ್ಟಾಗಿದ್ದು, ಯಾವುದೇ ಗುಂಪುಗಾರಿಕೆಯಿಲ್ಲ. ಎಲ್ಲವೂ ನಮ್ಮ ನಿಯಂತ್ರಣದಲ್ಲೇ ಇದೆ. ಏನೂ ಆಗಿಯೇ ಇಲ್ಲ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ರಾಕೇಶ್‌ ಸಿಂಗ್‌ ಸ್ಪಷ್ಟನೆ ನೀಡಿದ್ದಾರೆ.

ಈ ಹಿಂದೆ ಶಿವರಾಜ್‌ ಸಿಂಗ್‌ ಚೌಹಾಣ್‌ ಸರ್ಕಾರದಲ್ಲಿ ಸಚಿವರಾಗಿದ್ದ ತ್ಯಾಗಿ ಅವರನ್ನು ಇದೀಗ ಕಮಲ್‌ನಾಥ್‌ ಸರ್ಕಾರ, ಮಾ ನರ್ಮದಾ, ಮಾ ಕ್ಷಿಪ್ರ ಹಾಗೂ ಮಾ ಮಂದಾಕಿನಿ ನದಿ ಟ್ರಸ್ಟ್‌ನ ಅಧ್ಯಕ್ಷರನ್ನಾಗಿ ನೇಮಿಸಿದೆ.