Asianet Suvarna News Asianet Suvarna News

ನಾಲ್ಕೇ ವರ್ಷದಲ್ಲಿ ಕನ್ನಡಿಗರಿಗೆ 3200 ಕೋಟಿ ಮೋಸ! ಸಿನಿಮಾ ತಾರೆಯರ ಮೂಲಕ ಜಾಹೀರಾತು

ವಂಚಕ ಕಂಪನಿಗಳು ಸಿನಿಮಾ ತಾರೆಯರು, ಇನ್ನಿತರ ವ್ಯಕ್ತಿಗಳನ್ನು ಬಳಸಿಕೊಂಡು ಮಾಧ್ಯಮ ಮತ್ತು ಅಂತರ್ಜಾಲಗಳಲ್ಲಿ ಕಡಿಮೆ ಮೊತ್ತಕ್ಕೆ ನಿವೇಶನ, ತಾವು ತೊಡಗಿಸುವ ಹಣಕ್ಕೆ ಹೆಚ್ಚು ಬಡ್ಡಿ ನೀಡುವ ಆಕರ್ಷಣೀಯ ಜಾಹೀರಾತು ನೀಡುತ್ತಿದ್ದವು. ಈ ಆಮಿಷಕ್ಕೆ ಒಳಗಾಗುತ್ತಿದ್ದ ಸಾರ್ವಜನಿಕರು ತಮ್ಮ ಬಳಿಯಿದ್ದ ಉಳಿತಾಯ ಇನ್ನಿತರ ಹಣವನ್ನು ಸಂಸ್ಥೆಗಳಲ್ಲಿ ತೊಡಗಿಸುತ್ತಿದ್ದರು.

3200 crore cheat to Kannada People

ಬೆಂಗಳೂರು(ಜು.30): ನೀವು ನೀಡುವ ಹಣಕ್ಕೆ ಹೆಚ್ಚು ಬಡ್ಡಿ ನೀಡುವ ಮತ್ತು ಅತ್ಯಂತ ಕಡಿಮೆ ಮೊತ್ತಕ್ಕೆ ನಿವೇಶನ ನೀಡುವಂತಹ ಆಮಿಷವೊಡ್ಡುವ ಮೂಲಕ ಅಗ್ರಿಗೋಲ್ಡ್, ಟಿಜಿಎಸ್ ಸೇರಿದಂತೆ10 ಕಂಪನಿಗಳು ಕಳೆದ ನಾಲ್ಕು ವರ್ಷಗಳಲ್ಲಿ ಸಾರ್ವಜನಿಕರಿಗೆ ಬರೋಬ್ಬರಿ 3271 ಕೋಟಿ ರೂ.ಯನ್ನು ವಂಚಿಸಿವೆ. ಈ ಕಂಪನಿಗಳ ಸ್ಥಿರಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಪ್ರಕರಣಗಳು ತನಿಖೆಯಲ್ಲಿವೆ ಎಂದು ಸಿಐಡಿ ಡಿಜಿಪಿ ಕಿಶೋರ್ ಚಂದ್ರ ಹೇಳಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 2013 ರಿಂದ 2016 ರವರೆಗೆ 10 ಸಂಸ್ಥೆಗಳ ವಿರುದ್ಧ 422 ಪ್ರಕರಣಗಳು ದಾಖಲಾಗಿವೆ. ತನಿಖೆ ವೇಳೆ 17,93,480 ಸಾರ್ವಜನಿಕರು 3,273  ಕೋಟಿಗಿಂತ ಹೆಚ್ಚು ಹಣ ತೊಡಗಿಸಿ ವಂಚನೆಗೆ ಒಳಗಾಗಿದ್ದಾರೆ ಎಂದು ತಿಳಿಸಿದರು.

ಸಿನಿಮಾ ತಾರೆಯರ ಮೂಲಕ ಜಾಹೀರಾತು:

ವಂಚಕ ಕಂಪನಿಗಳು ಸಿನಿಮಾ ತಾರೆಯರು, ಇನ್ನಿತರ ವ್ಯಕ್ತಿಗಳನ್ನು ಬಳಸಿಕೊಂಡು ಮಾಧ್ಯಮ ಮತ್ತು ಅಂತರ್ಜಾಲಗಳಲ್ಲಿ ಕಡಿಮೆ ಮೊತ್ತಕ್ಕೆ ನಿವೇಶನ, ತಾವು ತೊಡಗಿಸುವ ಹಣಕ್ಕೆ ಹೆಚ್ಚು ಬಡ್ಡಿ ನೀಡುವ ಆಕರ್ಷಣೀಯ ಜಾಹೀರಾತು ನೀಡುತ್ತಿದ್ದವು. ಈ ಆಮಿಷಕ್ಕೆ ಒಳಗಾಗುತ್ತಿದ್ದ ಸಾರ್ವಜನಿಕರು ತಮ್ಮ ಬಳಿಯಿದ್ದ ಉಳಿತಾಯ ಇನ್ನಿತರ ಹಣವನ್ನು ಸಂಸ್ಥೆಗಳಲ್ಲಿ ತೊಡಗಿಸುತ್ತಿದ್ದರು. ಈ ರೀತಿಯಾಗಿ ಸರ್ಕಾರಿ ನೌಕರರು, ನಿವೃತ್ತ ಸರ್ಕಾರಿ ನೌಕರರು, ಮಿಲಿಟರಿ ಅಧಿಕಾರಿಗಳು, ನಿವೃತ್ತ ನ್ಯಾಯಾಧೀಶರು, ವೈದ್ಯರು, ಸಾಫ್ಟ್‌ವೇರ್ ಎಂಜಿಯರ್‌ಗಳು, ರೈತರು ಹಾಗೂ ಕೂಲಿ ಕಾರ್ಮಿಕರು, ಗೃಹಿಣಿಯರು ಹಾಗೂ ವಿದ್ಯಾರ್ಥಿಗಳು ವಂಚಕ ಕಂಪನಿಗಳಲ್ಲಿ ಹಣ ತೊಡಗಿಸಿದ್ದರು. ಪ್ರಾರಂಭದಲ್ಲಿ ಕಂಪನಿಗಳು ಸಾರ್ವಜನಿಕರಿಗೆ ಹೆಚ್ಚಿನ ಬಡ್ಡಿ ನೀಡುತ್ತಿದ್ದವು. ಇದನ್ನು ನೋಡಿದ ಇತರೆ ಸಾರ್ವಜನಿಕರು ಕಂಪನಿಗಳಲ್ಲಿ ಹಣ ತೊಡಗಿಸುತ್ತಿದ್ದರು. ಬಳಿಕ ಹಣವನ್ನೆಲ್ಲಾ ಪಡೆದು ತಮ್ಮ ವ್ಯವಹಾರ ಸ್ಥಗಿತಗೊಳಿಸಿ ಪಲಾಯನ ಮಾಡುತ್ತಿದ್ದರು ಎಂದು ವಿವರಿಸಿದರು.

ಹೂಡಿಕೆದಾರರು ಯಾವುದೇ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡುವ ಮುನ್ನ ಈ ರೀತಿಯ ಠೇವಣಿಗಳು ಅಧಿಕೃತವೇ ಅಥವಾ ಅನಧಿಕೃತವೇ ಎಂಬ ವಿಷಯವನ್ನು ಖಚಿತ ಪಡಿಸಿಕೊಳ್ಳುವುದರ ಜೊತೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಸೆಕ್ಯುರಿಟಿ ಎಕ್ಸ್‌ಚೆಂಜ್ ಬೋರ್ಡ್ ಆಫ್ ಇಂಡಿಯಾ, ರಿಜಿಸ್ಟ್ರಾರ್ ಆಫ್ ಕಂಪನಿಸ್ ಮತ್ತು ರಿಜಿಸ್ಟ್ರಾರ್ ಆಫ್ ಕೋ-ಆಪರೇಟಿವ್ ಸೊಸೈಟಿಯಿಂದ ಅನುಮತಿ ಪಡೆದುಕೊಳ್ಳಲಾಗಿದೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕು. ಯಾವುದೇ ರೀತಿಯ ಸಂಶಯ ಬಂದಲ್ಲಿ ಸರ್ಕಾರಕ್ಕೆ ದೂರು ನೀಡಬಹುದು ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಯಾರ್ಯಾರಿಂದ ವಂಚನೆ?:

ಅಗ್ರಿಗೋಲ್ಡ್ ಕಂಪನಿಯ ಅವ್ಟಾ ವೆಂಕಟ ರಾಮರಾವ್ 1640 ಕೋಟಿ, ಹಿಂದೂಸ್ಥಾನ್ ಇನ್‌ಫ್ರಾಕಾನ್ ಕಂಪನಿಯ ಆರೋಪಿ ಲಕ್ಷ್ಮೀನಾರಾಯಣ ಮತ್ತು ಇತರರು 386 ಕೋಟಿ, ಮೈತ್ರೀ ಪ್ಲಾಂಟೇಷನ್ ಮತ್ತು ಹಾರ್ಟಿಕಲ್ಚರ್‌ನ ಕೊಂಡರೆಡ್ಡಿ 982ಕೋಟಿ, ಗ್ರೀನ್ ಬಡ್ಸ್ ಆಗ್ರೋ ಫಾರಂ ಕಂಪನಿಯ ಬಿ.ಎಲ್. ರವೀಂದ್ರನಾಥ 53.88 ಕೋಟಿ, ಹರ್ಷ ಎಂಟರ್‌ಟೈನ್‌ಮೆಂಟ್ ಸಂಸ್ಥೆಯ ಸುಬೋಧ್ (ಖಾಸನೀಸ್ ಸಹೋದರರು) 136 ಕೋಟಿ, ಡ್ರೀಮ್ಸ್ ಇನ್‌ಫ್ರಾ ಕಂಪನಿಯ ಸಚಿನ್ ನಾಯಕ್ ಈತನ ಪತ್ನಿ ದಿಶಾ ಚೌಧರಿ ೫೭೩ ಕೋಟಿ, ಟಿಜಿಎಸ್ ಕಂಪನಿಯ ಸಚಿನ್ ನಾಯಕ್ ಮತ್ತು ಮನದೀಪ್‌ಕೌರ್ 260ಕೋಟಿ, ಗೃಹ ಕಲ್ಯಾಣ ಕಂಪನಿಯ ಸಚಿನ್ ನಾಯಕ್ ಮತ್ತು ಮಜುಂದಾರ್ ಶತಪರ್ಣಿ 277 ಕೋಟಿ, ಸೆವನ್ ಹಿಲ್ಸ್ ಕಂಪನಿಯ ಜಿ.ನಾರಾಯಣಪ್ಪ 81 ಕೋಟಿ, ವೃಕ್ಷ ಬಿಜಿನಸ್ ಸಲ್ಯೂಶನ್‌ನ ಕಂಪನಿಯ ಜೀವರಾಜ್ ಪುರಾಣಿಕ್ ಮತ್ತು ಇತರರು ಸಾರ್ವಜನಿಕರಿಂದ 31ಕೋಟಿ ಹಣ ಪಡೆದು ವಂಚಿಸಿದ್ದಾರೆ.

ಸಿನಿಮಾ ನಿರ್ಮಾಣ, ಐಷಾರಾಮಿ ಜೀವನಕ್ಕೆ ಹೂಡಿಕೆ

ಸಾರ್ವಜನಿಕರಿಂದ ಹೂಡಿಕೆ ಮಾಡಿಕೊಳ್ಳಲಾದ ಹಣವನ್ನು ವಂಚಕ ಕಂಪನಿಗಳು ಜಮೀನು ಕೊಳ್ಳಲು, ಸಿನಿಮಾ ನಿರ್ಮಾಣ ಮತ್ತು ದುಬಾರಿ ಮನೆಗಳನ್ನು ಕೊಳ್ಳುವ ಮೂಲಕ ಐಷಾರಾಮಿ ಜೀವನಕ್ಕೆ ಉಪಯೋಗಿಸಿಕೊಂಡಿರುವುದು ತನಿಖೆ ವೇಳೆ ತಿಳಿದುಬಂದಿದೆ. ಅಗ್ರಿಗೋಲ್ಡ್‌ನ 430 ಎಕರೆ ಜಮೀನು, ಮೈತ್ರೀ ಪ್ಲಾಟೆಂಷನ್ ಆ್ಯಂಡ್ ಹಾರ್ಟಿಕಲ್ಚರ್‌ನ 382 ಎಕರೆ ಮತ್ತು ಗ್ರೀನ್ ಬಡ್ಸ್ ಆಗ್ರೋ ಫಾರಂನ 205 ಎಕರೆ ಜಮೀನು ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ತಿಳಿಸಿದರು.

ವಂಚನೆಗೆ ಒಳಗಾಗಿದ್ದರೆ ಸಿಐಡಿಗೆ ದೂರು ಕೊಡಿ

ವಂಚನೆಗೆ ಒಳಗಾದ ಹೂಡಿಕೆದಾರರು ಸಿಐಡಿ ಕಚೇರಿ ನೇರವಾಗಿ ಬಂದು ಅಥವಾ ಸಿಐಡಿ ಕಚೇರಿ 080-22942444 ಗೆ ದೂರು ದಾಖಲಿಸಬಹುದು. ಇತರೆ ಕಂಪನಿಗಳಿಂದ ಏನಾದರೂ ವಂಚನೆಗೆ ಒಳಗಾಗಿದ್ದರೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬಹುದು.

ಆಸ್ತಿ ಹರಾಜು ಹಾಕಿ ಹಣ ವಾಪಸ್

ಶೇ.5ರಿಂದ 20ರಷ್ಟು ಬಡ್ಡಿ ನೀಡುವುದಾಗಿ ಹಾಗೂ ಕಡಿಮೆ ಬೆಲೆಗೆ ನಿವೇಶನ ನೀಡುವುದಾಗಿ ಜಾಹೀರಾತು ನೀಡಿ ಸಾರ್ವಜನಿಕರಿಗೆ ವಂಚಿಸಿರುವ 10 ಪ್ರತಿಷ್ಠಿತ ಕಂಪನಿಗಳ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಹರಾಜು ಪ್ರಕ್ರಿಯೆ ನಡೆಸಿ ಹೂಡಿಕೆದಾರರಿಗೆ ಹಣ ಹಿಂದಿರುಗಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.

- ಕಿಶೋರ್‌ಚಂದ್ರ, ಸಿಐಡಿ, ಡಿಜಿಪಿ

Follow Us:
Download App:
  • android
  • ios