ಬೆಂಗಳೂರು :  ರಾಜ್ಯ ಸರ್ಕಾರವು ಬರಿದಾಗಿರುವ ಬೊಕ್ಕಸ ತುಂಬಿಸುವುದನ್ನೇ ಗುರಿಯಾಗಿಸಿಕೊಂಡು ರಾಜ್ಯಾದ್ಯಂತ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆಗೆ ಮುಂದಾಗಿದ್ದು, ಸ್ಥಿರಾಸ್ತಿಗಳ ಮಾರ್ಗಸೂಚಿ ದರವನ್ನು ಸರಾಸರಿ ಶೇ.30 ರಷ್ಟು ಹೆಚ್ಚಳ ಮಾಡಿ ಡಿ.10 ರಂದು ಸೋಮವಾರ ವಿಶೇಷ ರಾಜ್ಯಪತ್ರದ ಮೂಲಕ ಪ್ರಕಟಿಸಲಿದೆ. ಇದರಿಂದ ನಿವೇಶನಗಳ ದರ ಮತ್ತಷ್ಟು ತುಟ್ಟಿಯಾಗಲಿದೆ.

ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆಗೆ ಆದಾಯ ಸಂಗ್ರಹಣೆಯನ್ನೇ ಪ್ರಮುಖ ಮಾನದಂಡ ಮಾಡಿಕೊಳ್ಳಲಾಗಿದೆ. ಹೀಗಾಗಿ ರಿಯಲ್‌ಎಸ್ಟೇಟ್‌ ವ್ಯವಹಾರ ಜೋರಾಗಿರುವ ಹಾಗೂ ಕಳೆದ ಎರಡು ವರ್ಷದಲ್ಲಿ ಹೆಚ್ಚು ಖರೀದಿ ಹಾಗೂ ಮಾರಾಟ ವಹಿವಾಟು ನಡೆದಿರುವ ಆಸ್ತಿಗಳ ಮಾರ್ಗಸೂಚಿ ದರವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದೆ. ಈ ಮೂಲಕ ನೋಂದಣಿ ಮತ್ತು ಮುದ್ರಾಂಕ ಶುಲ್ಕದ ಮೂಲಕ ಸಾವಿರಾರು ಕೋಟಿ ರು. ಹೆಚ್ಚುವರಿ ಹಣವನ್ನು ಸರ್ಕಾರದ ಖಜಾನೆಗೆ ತುಂಬಿಸಿಕೊಳ್ಳಲು ಮುಂದಾಗಿದೆ.

ಡಿ.12 ರಿಂದಲೇ ನೂತನ ದರ ಅನ್ವಯ:

ಹೊಸ ಮಾರ್ಗಸೂಚಿ ದರಗಳು ಡಿ. 12ರಿಂದಲೇ ಅನ್ವಯವಾಗುವಂತೆ ರಾಜ್ಯಪತ್ರದಲ್ಲಿ ಆದೇಶಿಸಲಾಗುತ್ತದೆ. ಹೀಗಾಗಿ ಎಲ್ಲಾ ಜಿಲ್ಲಾ ನೋಂದಣಾಧಿಕಾರಿಗಳು ಹಾಗೂ ಉಪ ನೋಂದಣಾಧಿಕಾರಿಗಳು ಪ್ರತಿ ಆಸ್ತಿ ಪರಿಷ್ಕೃತ ದರವನ್ನೂ ಸೂಕ್ಷ್ಮವಾಗಿ ಪರಿಶೀಲಿಸಿ ದೃಢೀಕರಿಸಬೇಕು. ವಿಶೇಷ ರಾಜ್ಯಪತ್ರದಲ್ಲಿ ಕೇಂದ್ರ ಮೌಲ್ಯಮಾಪನ ಸಮಿತಿ ಅನುಮೋದಿಸದ ಆಸ್ತಿಗಳನ್ನು ಪರಿಗಣಿಸುವಂತಿಲ್ಲ. ಪರಿಷ್ಕೃತ ಮಾರ್ಗಸೂಚಿ ದರದ ಆಧಾರದ ಮೇಲೆ ಆಸ್ತಿಗಳ ನೋಂದಣಿ ಪ್ರಕ್ರಿಯೆ ಮಾಡಲು ಸಿದ್ಧವಿರಬೇಕು ಎಂದು ಎಲ್ಲಾ ಜಿಲ್ಲಾ ನೋಂದಣಾಧಿಕಾರಿಗಳು ಹಾಗೂ ಉಪ ನೋಂದಣಾಧಿಕಾರಿಗಳಿಗೆ ಈಗಾಗಲೇ ಸುತ್ತೋಲೆ ರವಾನಿಸಲಾಗಿದೆ.

 ಮಾರುಕಟ್ಟೆಗೆ ಬೆಲೆಗೆ ತಕ್ಕಂತೆ ನಿಗದಿ

ಪ್ರತಿ ಪ್ರದೇಶದಲ್ಲೂ ಖಾಲಿ ನಿವೇಶನ, ವಸತಿ ಕಟ್ಟಡ, ವಾಣಿಜ್ಯ ಕಟ್ಟಡ, ಅಪಾರ್ಟ್‌ಮೆಂಟ್‌ಗಳ ಸರಾಸರಿ ಮಾರಾಟ ವಹಿವಾಟು ಹಾಗೂ ಕ್ರಯಪತ್ರದಲ್ಲಿನ ದರದ ಆಧಾರದ ಮೇಲೆ ಮಾರ್ಗಸೂಚಿ ಪರಿಷ್ಕರಣೆ ಮಾಡಲಾಗುತ್ತಿದೆ. ಹಿಂದಿನ ರೀತಿಯಲ್ಲಿ ಒಂದು ಪ್ರದೇಶಕ್ಕೆ ಒಂದು ಮಾರ್ಗಸೂಚಿ ದರ ಎಂದು ಮಾಡಲಾಗುತ್ತಿಲ್ಲ. ಹೀಗಾಗಿ ಮಾರುಕಟ್ಟೆಬೆಲೆಗೆ ಹತ್ತಿರವಿರುವಂತೆ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ತ್ರಿಲೋಕಚಂದ್ರ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ. ಮೂಲಗಳ ಪ್ರಕಾರ ಸರ್ಕಾರ ಅಳವಡಿಸಿಕೊಂಡಿರುವ ಈ ಮಾರ್ಗಸೂಚಿಯಿಂದಾಗಿ ಕೆಲವು ಕಡೆ ಶೇ. 40ಕ್ಕೂ ಹೆಚ್ಚು ಪ್ರಮಾಣದಲ್ಲಿ ಮಾರ್ಗಸೂಚಿ ದರ ಪರಿಷ್ಕರಣೆ ಆಗಲಿದೆ.

ಕೊಡಗಲ್ಲಿ ಇಲ್ಲ:

ಇದೇ ವೇಳೆ ಇತ್ತೀಚೆಗೆ ತೀವ್ರ ನೆರೆಗೆ ತುತ್ತಾಗಿರುವ ಕೊಡಗು ಜಿಲ್ಲೆ ಹಾಗೂ ವ್ಯಾಪಾರ ವಹಿವಾಟು ಕಡಿಮೆ ಇರುವ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕು, ವಿಜಯಪುರ ಜಿಲ್ಲೆ ವಿಜಯಪುರ ತಾಲೂಕು ವ್ಯಾಪ್ತಿಯಲ್ಲಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡದಿರಲು ನಿರ್ಧರಿಸಲಾಗಿದೆ.

ಕಳೆದ ವರ್ಷವೂ ಶೇ.10 ರಿಂದ 40 ರಷ್ಟುಹೆಚ್ಚಳ:

ಕಳೆದ ವರ್ಷ (2017) ಮಾರ್ಚ್ ತಿಂಗಳಲ್ಲಿ ಶೇ.10 ರಿಂದ 40 ರಷ್ಟುಮಾರ್ಗಸೂಚಿ ದರವನ್ನು ಹೆಚ್ಚಳ ಮಾಡಲಾಗಿತ್ತು. ಇದೀಗ ಮತ್ತೆ ಮಾರ್ಗಸೂಚಿ ದರ ಪರಿಷ್ಕರಣೆಗೆ ಮುಂದಾಗಿದ್ದು, ಸೆಪ್ಟೆಂಬರ್‌ ಮೊದಲ ವಾರದಲ್ಲಿ ಅಧಿಸೂಚನೆ ಹೊರಡಿಸಿ ಆಕ್ಷೇಪಣೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಕಳೆದ ವರ್ಷ ಬಜೆಟ್‌ನಲ್ಲಿ ಇಲಾಖೆಗೆ ನೀಡಿರುವ ಗುರಿ ಹಾಗೂ ರಾಜಸ್ವ ಸಂಗ್ರಹದ ನಡುವೆ ಶೇ.15 ರಷ್ಟು ವ್ಯತ್ಯಾಸ ಬಂದಿತ್ತು. ಜತೆಗೆ ಮಾರುಕಟ್ಟೆದರ ಹಾಗೂ ಮಾರ್ಗಸೂಚಿ ದರದ ನಡುವಿನ ವ್ಯತ್ಯಾಸದ ಅಂತರ ಕಡಿಮೆ ಮಾಡುವ ಉದ್ದೇಶದಿಂದ ದರ ಪರಿಷ್ಕರಣೆಗೆ ಮುಂದಾಗಿರುವುದಾಗಿ ತಿಳಿದುಬಂದಿದೆ.

ಪ್ರಸ್ತುತ ಇರುವ ಸ್ಥಿರಾಸ್ತಿ ಮಾರ್ಗ ಸೂಚಿ ದರ, ಮಾರುಕಟ್ಟೆದರ, ಆಸ್ತಿಗೆ ಇರುವ ಸಂಪರ್ಕ ರಸ್ತೆಗಳು, ಆಸ್ತಿ ಇರುವ ಪ್ರದೇಶದ ಸುತ್ತಲಿನ ವಾಣಿಜ್ಯ ಚಟುವಟಿಕೆಗಳು, ನಗರ ಮತ್ತು ಗ್ರಾಮಿಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಹಾಗೂ ಭೂಪರಿವರ್ತನೆ ಆಧರಿಸಿ ದರ ಪರಿಷ್ಕರಣೆ ನಡೆಯಲಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯಾದ್ಯಂತ ಶೇ.5 ರಿಂದ ಶೇ. 30 ರಷ್ಟುಸರಾಸರಿ ಪ್ರಮಾಣದಲ್ಲಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಲಾಗುತ್ತಿದೆ. ಈ ಬಾರಿ ಆಸ್ತಿಗಳ ಮಾರಾಟ ವಹಿವಾಟು ಆಧಾರದ ಮೇಲೆ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಲಾಗುತ್ತಿದೆ. ಸರ್ಕಾರವು ಸ್ವಾಧೀನಕ್ಕೆ ಗುರುತಿಸಿರುವ ಜಾಗಗಳಲ್ಲಿ ಇತ್ತೀಚೆಗೆ ಯಾವುದೇ ಮಾರಾಟ ವಹಿವಾಟು ನಡೆದಿರುವುದಿಲ್ಲ. ಹೀಗಾಗಿ ಇದನ್ನೇ ಆಧಾರವಾಗಿಟ್ಟುಕೊಂಡು ಸ್ವಾಧೀನಕ್ಕೆ ಗುರುತಿಸಿರುವ ಸ್ಥಳಗಳ ಮಾರ್ಗಸೂಚಿ ದರ ಪರಿಷ್ಕರಣೆ ಮಾಡದಿರಲು ನಿರ್ಧರಿಸಲಾಗಿದೆ. ಇದರಿಂದ ಸರ್ಕಾರವೂ ಹೆಚ್ಚು ಪರಿಹಾರ ನೀಡುವುದು ತಪ್ಪುತ್ತದೆ.

- ಕೆ.ವಿ. ತ್ರಿಲೋಕ್‌ ಚಂದ್ರ, ಆಯುಕ್ತರು, ನೋಂದಣಿ ಮತ್ತು ಮುದ್ರಾಂಕ ಇಲಾಖೆ.

ಬಡವರ ಭೂಮಿಗೆ ಬೆಲೆ ಇಲ್ಲ: ಆರೋಪ

ಇದೇ ವೇಳೆ, ಸರ್ಕಾರವು ವಿವಿಧ ಯೋಜನೆಗಳಿಗೆ ಸ್ವಾಧೀನಪಡಿಸಿಕೊಂಡು ತನ್ನ ಬೊಕ್ಕಸದಿಂದ ಪರಿಹಾರ ನೀಡಬೇಕಿರುವ ಹತ್ತಾರು ಸಾವಿರ ಎಕರೆ ಜಮೀನು ಹಾಗೂ ಕಟ್ಟಡಗಳ ಮಾರ್ಗಸೂಚಿ ದರವನ್ನು ಪರಿಷ್ಕರಣೆ ಪಟ್ಟಿಯಿಂದ ಕೈ ಬಿಟ್ಟಿದೆ. ಇದು ಟೀಕೆಗೆ ಗುರಿಯಾಗಿದೆ.

‘ಕಳೆದ ಹಲವು ವರ್ಷಗಳ ಹಿಂದೆ ಭೂಸ್ವಾಧೀನಕ್ಕೆ ಗುರುತಿಸಿರುವ ಜಮೀನಿಗೆ ಹಳೆಯ ಮಾರ್ಗಸೂಚಿ ದರದಂತೆಯೇ ಪರಿಹಾರ ನೀಡಬೇಕು. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಲಾಭ ಮಾಡಿಕೊಟ್ಟು ಫಲಾನುಭವಿಗಳಿಗೆ ಅನ್ಯಾಯ ಮಾಡುವ ಸಲುವಾಗಿ ಅಂತಹ ಎಲ್ಲಾ ಸ್ಥಿರಾಸ್ತಿಗಳನ್ನೂ ಮಾರ್ಗಸೂಚಿ ದರ ಪರಿಷ್ಕರಣೆಯಿಂದ ಹೊರಗಿಡಲಾಗಿದೆ.ಅಲ್ಲದೆ, ಭೂ ಸ್ವಾಧೀನಕ್ಕೆ ಉದ್ದೇಶಿಸಿರುವ ಜಾಗದ ಮಾರ್ಗಸೂಚಿ ದರವನ್ನೂ ಪರಿಷ್ಕರಣೆ ಮಾಡಲಾಗಿಲ್ಲ. ಈ ಮೂಲಕ ಬಡ ರೈತರು, ಮಧ್ಯಮವರ್ಗದ ಕುಟುಂಬಗಳ ಆಸ್ತಿಗಳಿಗೆ ಬೆಲೆ ಇಲ್ಲದಂತೆ ಮಾಡಲಾಗಿದೆ’ ಎಂಬ ಆರೋಪ ಕೇಳಿ ಬಂದಿದೆ.