ಬೆಂಗಳೂರು : ಮೇಲ್ಮೈಸುಳಿಗಾಳಿ ಹಾಗೂ ಫನಿ ಚಂಡಮಾರುತ  ಪ್ರಭಾವದಿಂದ ಬೆಂಗಳೂರು ನಗರದಲ್ಲಿ ಬುಧವಾರ ಮೋಡ ಕವಿದ ವಾತಾವರಣ ಉಂಟಾದ ಹಿನ್ನೆಲೆ ಯಲ್ಲಿ 3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಕಡಿಮೆಯಾಗಿದೆ. ಮಂಗಳವಾರ ಸಂಜೆ ನಗರದಲ್ಲಿ ಗುಡುಗು, ಮಿಂಚು, ಸಹಿತ ಮಳೆ ಸುರಿದ ಹಿನ್ನೆಲೆಯಲ್ಲಿ ಸ್ವಲ್ಪ ಭೂಮಿ ತಂಪಾಗಿದೆ. 

ಜತೆಗೆ ಬುಧವಾರ ಇಡೀ ದಿನ ಮೋಡ ಕವಿದ ಪರಿಣಾಮ ಉಷ್ಣಾಂಶದಲ್ಲಿ ಇಳಿಕೆಯಾಗಿದೆ. ಮಂಗಳವಾರ ನಗರದಲ್ಲಿ 35 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿತ್ತು. ಆದರೆ, ಬುಧವಾರ 32 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆ ಆಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ. 

ಗುರುವಾರ ಫನಿ ಚಂಡಮಾರುತದ ಪ್ರಭಾವ ಕಡಿಮೆ ಆಗುವ ಸಾಧ್ಯತೆ ಇದೆ. ಸ್ವಲ್ಪ ಪ್ರಮಾಣ ಮೋಡ ಇರುವುದರಿಂದ ಉಷ್ಣಾಂಶದ ಪ್ರಮಾಣವೂ ಕಡಿಮೆ ಇರಲಿದೆ. ಶುಕ್ರವಾರದಿಂದ ಉಷ್ಣಾಂಶ ಮತ್ತೆ ಯಥಾಸ್ಥಿತಿಗೆ ಮರಳಲಿದೆ ಎಂದು ಕೆಎಸ್‌ಎನ್ ಡಿಎಂಸಿ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ತಿಳಿಸಿದರು.