ಬೆಂಗಳೂರು :  ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಘಿ ಜ್ವರ ಪ್ರಕರಣಗಳು ವ್ಯಾಪಕವಾಗಿ ಹರಡುತ್ತಿದ್ದು, ಜನವರಿಯಿಂದ ಬರೋಬ್ಬರಿ 254 ಪ್ರಕರಣ ದೃಢಪಟ್ಟಿವೆ. ಇದೀಗ ಮಳೆ ಶುರುವಾಗಿರುವುದರಿಂದ ಡೆಂಘಿ ಪ್ರಕರಣಗಳು ಹೆಚ್ಚಾಗುವ ಸಂಭವವಿದ್ದು, ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯಾಧಿಕಾರಿಗಳು ಎಚ್ಚರಿಸಿದ್ದಾರೆ. ಆರೋಗ್ಯ ಇಲಾಖೆ ವರದಿ ಪ್ರಕಾರ ಜನವರಿ 1ರಿಂದ ಏ.21ರವರೆಗೆ ರಾಜ್ಯದಲ್ಲಿ 622 ಡೆಂಘಿ ಪ್ರಕರಣ ಧೃಡಪಟ್ಟಿವೆ. ಇವುಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲೇ 254 ಪ್ರಕರಣ ಪತ್ತೆಯಾಗಿದೆ.

ಸಾವಿರಾರು ಪ್ರಕರಣ ವರದಿ ಆತಂಕ!

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಆರೋಗ್ಯಾಧಿಕಾರಿ ಡಾ.ಶಿವಕುಮಾರ್‌, ಬೆಂಗಳೂರಿನಲ್ಲಿ 254 ಡೆಂಘಿ ಪ್ರಕರಣಗಳು ದೃಢಪಟ್ಟಿರುವುದು ಕಡಿಮೆ ಎಂದೇ ಹೇಳಬೇಕು. ಇದೀಗ ಮಳೆ ಶುರುವಾಗುತ್ತಿದೆ. ಮಳೆಗಾಲದಲ್ಲಿ ನಿಲ್ಲುವ ನೀರು, ವಾತಾವರಣದಲ್ಲಿ ತೇವಾಂಶ ಹೆಚ್ಚಳವಾಗುವುದರಿಂದ ಸೊಳ್ಳೆಗಳ ಉತ್ಪಾದನೆಯೂ ಹೆಚ್ಚಾಗುತ್ತಿದೆ. ಹೀಗಾಗಿ ಮಳೆಗಾಲದಲ್ಲಿ ಸಾವಿರಾರು ಡೆಂಘಿ ಪ್ರಕರಣಗಳು ವರದಿಯಾಗುವ ಆತಂಕ ಇದೆ. ಹೀಗಾಗಿ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.

ಡೆಂಘಿ ಜ್ವರಕ್ಕೆ ಸೊಳ್ಳೆಗಳೇ ಮೂಲಕ ಕಾರಣ. ಹೀಗಾಗಿ ಸೊಳ್ಳೆ ಉತ್ಪಾದನೆಗೆ ಅವಕಾಶ ನೀಡದಂತೆ ಮನೆಗಳ ಸುತ್ತಮುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆಯಲ್ಲಿ ತುಂಬಾ ದಿನ ನೀರು ಶೇಖರಿಸಿಟ್ಟಿಕೊಳ್ಳಬಾರದು. ಬಿಬಿಎಂಪಿಯಿಂದ ಫಾಗಿಂಗ್‌, ಲಾರ್ವ ನಾಶ ಪಡಿಸುವುದು ಸೇರಿದಂತೆ ಎಲ್ಲಾ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದರು.

ರಾಜ್ಯದಲ್ಲಿ 368 ಪ್ರಕರಣ ದೃಢ:

ಬೆಂಗಳೂರಿನಲ್ಲಿ ಜನವರಿ 1ರಿಂದ ಈವರೆಗೆ 254 ಪ್ರಕರಣ ದೃಢಪಟ್ಟಿದ್ದು, ರಾಜ್ಯದ ಇತರೆಡೆ 368 ಪ್ರಕರಣ ದೃಢಪಟ್ಟಿದೆ. ಬಿಬಿಎಂಪಿ ವ್ಯಾಪ್ತಿ ಹೊರತುಪಡಿಸಿ ಹೊರತುಪಡಿಸಿ ಶಿವಮೊಗ್ಗದಲ್ಲಿ ಅತ್ಯಧಿಕ ಪ್ರಕರಣ ವರದಿಯಾಗಿದ್ದು, 512 ಮಾದರಿ ಪರೀಕ್ಷೆಯಲ್ಲಿ 69 ಮಂದಿಗೆ ಡೆಂಘಿ ಇರುವುದು ಖಚಿತಪಟ್ಟಿದೆ. ಯಾದಗಿರಿ 44, ಉಡುಪಿ 42, ಕಲಬುರ್ಗಿ 41, ದಕ್ಷಿಣ ಕನ್ನಡ 32 ಪ್ರಕರಣಗಳೊಂದಿಗೆ ನಂತರದ ಸ್ಥಾನದಲ್ಲಿವೆ. ರಾಜ್ಯದಲ್ಲಿ ಒಟ್ಟು 5,655 ಪ್ರಕರಣ ಪರಿಶೀಲಿಸಿದ್ದು, 4297 ಮಂದಿಯ ರಕ್ತದ ಮಾದರಿ ಪರೀಕ್ಷಿಸಲಾಗಿತ್ತು. ಇದರಲ್ಲಿ 622 ಪ್ರಕರಣ ದೃಢಪಟ್ಟಿವೆ.

301 ಚಿಕುನ್‌ಗುನ್ಯಾ ಪ್ರಕರಣ

ಇದಲ್ಲದೆ ಏ.21ರವರೆಗೆ ರಾಜ್ಯದಲ್ಲಿ 301 ಚಿಕುನ್‌ಗುನ್ಯಾ ಪ್ರಕರಣ ದೃಢಪಟ್ಟಿದೆ. ಅದೃಷ್ಟವಶಾತ್‌ ಡೆಂಘಿ ಹಾಗೂ ಚಿಕುನ್‌ಗುನ್ಯಾದಿಂದ ಈ ವರ್ಷ ಇನ್ನೂ ಯಾವುದೇ ಸಾವು ವರದಿಯಾಗಿಲ್ಲ . ಹೀಗಿದ್ದರೂ ಸೊಳ್ಳೆಗಳ ಕಡಿತದಿಂದ ಪಾರಾಗಲು ಸೂಕ್ತ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಉದ್ದ ತೋಳಿನ ಬಟ್ಟೆತೊಡುವುದು, ಸೊಳ್ಳೆ ಪರದೆ ಬಳಕೆ ಮಾಡುವುದು ಹಾಗೂ ಬೆಳಗ್ಗೆ, ಸಂಜೆ ಹೊತ್ತು ಕಡಿಯುವ ಸೊಳ್ಳೆಯಿಂದ ಎಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಸಲಹೆ ನೀಡಿದೆ.