ಬೆಳಗಾವಿ: ಎಂಇಎಸ್‌ ಹಮ್ಮಿಕೊಳ್ಳುವ ಕರಾಳ ದಿನಾಚರಣೆಯಲ್ಲಿ ಪಾಲ್ಗೊಳ್ಳುವ ಜನಪ್ರತಿನಿಧಿಗೆ ಕಪಾಳಮೋಕ್ಷ ಮಾಡುವವರಿಗೆ ನಮ್ಮ ಸಂಘಟನೆ ವತಿಯಿಂದ .25 ಸಾವಿರ ಬಹುಮಾನ ನೀಡಲಾಗುವುದು ಎಂದು ಕರ್ನಾಟಕ ನವ ನಿರ್ಮಾಣ ವೇದಿಕೆ ಅಧ್ಯಕ್ಷ ಭೀಮಾಶಂಕರ ಪಾಟೀಲ ಘೋಷಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ರಾಜ್ಯದ ಕನ್ನಡಿಗರೇ ಸಂಭ್ರಮಾಚರಣೆಯಲ್ಲಿದ್ದರೆ ಅದಕ್ಕೆ ವಿರುದ್ಧವಾಗಿ ಕರಾಳ ದಿನಾಚರಣೆಗೆ ನಮ್ಮ ಸರ್ಕಾರವೇ ಅನುಮತಿ ನೀಡುತ್ತಿರುವುದು ದುರ್ದೈವದ ಸಂಗತಿ. ಈ ಕರಾಳ ದಿನಾಚಾರಣೆಯಲ್ಲಿ ಪಾಲ್ಗೊಳ್ಳುವ ಜನಪ್ರತಿನಿಧಿಗಳಿಗೆ ಕಪಾಳಮೋಕ್ಷ ಮಾಡಿದರೆ .25 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದರು.

ನಾಡದ್ರೋಹಿಗಳಿಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಲೇಬಾರದು. ರಾಜ್ಯೋತ್ಸವ ಆಚರಣೆಗೆ ಕನ್ನಡಪರ ಸಂಘಟನೆಗಳು ಬೆಳಗಾವಿಗೆ ಆಗಮಿಸಲಿವೆ. ಸಾವಿರಾರು ಕನ್ನಡ ಕಾರ್ಯಕರ್ತರು ಸೇರಿ ರಾಜ್ಯೋತ್ಸವ ಆಚರಿಸುತ್ತಾರೆ. ಎಂಇಎಸ್‌ಗೆ ಕರಾಳ ದಿನಾಚರಣೆಗೆ ಅನುಮತಿ ನೀಡಿದರೆ ನಾವು ಮಾತ್ರ ಕರಾಳ ದಿನಾಚರಣೆಗೆ ಅವಕಾಶ ನೀಡುವುದಿಲ್ಲ ಎಂದರು.

ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ ಹಮ್ಮಿಕೊಳ್ಳುವ ಕರಾಳ ದಿನಾಚರಣೆಗೆ ಯಾವುದೇ ಕಾರಣಕ್ಕೂ ಈ ಬಾರಿ ಅನುಮತಿ ನೀಡಬಾರದು. ಒಂದು ವೇಳೆ ಅನುಮತಿ ನೀಡಿದರೆ, ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ವಿರುದ್ಧವೇ ನಮ್ಮ ವೇದಿಕೆ ಮಹಿಳಾ ಘಟಕದ ಕಾರ್ಯಕರ್ತೆಯರು ಒನಕೆ ಹಿಡಿದು ಚಳವಳಿ ಮಾಡುವರು ಎಂದೂ ಹೇಳಿದರು.