Asianet Suvarna News Asianet Suvarna News

ಓಟೆ ಹುಳು ಇಲ್ಲದ 25 ಟನ್‌ ಮಾವು ರಫ್ತು!

ಸರ್ಕಾರಿ ಸ್ವಾಮ್ಯದಲ್ಲಿ ಪ್ರಾರಂಭವಾಗಿರುವ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸುಸಜ್ಜಿತ ‘ಮಾವು ಸಂಸ್ಕರಣಾ ಘಟಕ’ ಮೊದಲ ವರ್ಷವೇ 25 ಟನ್‌ ಮಾವಿನ ಹಣ್ಣು ಸಂಸ್ಕರಿಸಿ ವಿದೇಶಗಳಿಗೆ ರಫ್ತು ಮಾಡಿದೆ.

25 ton Mango Exports To Foreign From Karnataka
Author
Bengaluru, First Published Jul 23, 2019, 8:43 AM IST

ರಮೇಶ್‌ ಬನ್ನಿಕುಪ್ಪೆ

ಬೆಂಗಳೂರು[ಜು.23]: ರಾಜ್ಯದಲ್ಲಿ ಇದೇ ಮೊದಲ ಬಾರಿ ಸರ್ಕಾರಿ ಸ್ವಾಮ್ಯದಲ್ಲಿ ಪ್ರಾರಂಭವಾಗಿರುವ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸುಸಜ್ಜಿತ ‘ಮಾವು ಸಂಸ್ಕರಣಾ ಘಟಕ’ ಮೊದಲ ವರ್ಷವೇ 25 ಟನ್‌ ಮಾವಿನ ಹಣ್ಣು ಸಂಸ್ಕರಿಸಿ ವಿವಿಧ ದೇಶಗಳಿಗೆ ರಫ್ತು ಮಾಡಿದೆ.

ರಾಜ್ಯ ಮಾವು ಅಭಿವೃದ್ಧಿ ಮಂಡಳಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಮಾಡಿಕೆರೆಯಲ್ಲಿ ಸುಮಾರು 1.10 ಕೋಟಿ ರು. ವೆಚ್ಚದಲ್ಲಿ ಪ್ರಾರಂಭಿಸಿರುವ ಸಂಸ್ಕರಣಾ ಘಟಕವು ಫರೀದಾಬಾದ್‌ನ ರಾಷ್ಟ್ರೀಯ ಸಸ್ಯ ಉತ್ಪನ್ನ ಮತ್ತು ಸಂಸ್ಕರಣ ಕೇಂದ್ರ, ರಾಜ್ಯದ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದಿಂದ ಮಾನ್ಯತೆ ಪಡೆದುಕೊಂಡಿದೆ.

ರಾಜ್ಯದ ಮಾವಿನ ಓಟೆಯಲ್ಲಿ ಹುಳ ಕಂಡು ಬರುತ್ತಿತ್ತು. ಇದೇ ಕಾರಣದಿಂದಾಗಿ ಭಾರತದಲ್ಲಿ ಬೆಳೆಯುತ್ತಿರುವ ಮಾವಿನ ಹಣ್ಣುಗಳಿಗೆ ಹೊರ ರಾಷ್ಟ್ರಗಳು ನಿಷೇಧ ಹೇರಿದ್ದವು. ಇದರಿಂದ ಮಾವಿನ ರಫ್ತಿನ ಮೇಲೆ ಪರಿಣಾಮ ಬೀರಿತ್ತು. ಹಾಗಾಗಿ ವಿದೇಶಗಳಿಗೆ ಗುಣಮಟ್ಟದ ಮಾವು ರಫ್ತು ಮಾಡಲು ಸಂಸ್ಕರಣಾ ಘಟಕ ಪ್ರಾರಂಭಿಸಲಾಗಿದೆ. ಈ ಘಟಕದಿಂದ ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಮಾವು ಬೆಳೆಗಾರರು ತಮ್ಮ ಉತ್ಪನ್ನಗಳ ಸಂಸ್ಕರಣೆ ಮಾಡಿ ರಫ್ತು ಮಾಡಲು ನೆರವಾಗಲಿದೆ ಎಂದು ಮಾವು ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಲವು ದೇಶಗಳಿಗೆ ರಫ್ತು:  ಮಾಡಿಕೆರೆಯಲ್ಲಿ ಪ್ರಸಕ್ತ ಅವಧಿಯಿಂದ ಮಾವು ಸಂಸ್ಕರಣೆ ಮತ್ತು ಕೊಯ್ಲೊತ್ತರ ನಂತರದ ನಿರ್ವಹಣೆ ಕುರಿತು ಸ್ಥಳೀಯ ರೈತರಿಗೆ ತರಬೇತಿ ನೀಡಲಾಗುತ್ತಿದೆ. ಈ ಘಟಕದಲ್ಲಿ ಸಂಸ್ಕರಣೆ ಮಾಡಿರುವ ಮಾವಿನ ಹಣ್ಣನ್ನು ಇಂಗ್ಲೆಂಡ್‌, ಲಂಡನ್‌, ಜರ್ಮನಿ ಮತ್ತು ಸ್ವಿಜರ್ಲೆಂಡ್‌ ದೇಶಗಳಿಗೆ ರಫ್ತು ಮಾಡಲಾಗಿದೆ ಎಂದು ಮಾವು ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಸಿ.ಜೆ.ನಾಗರಾಜ್‌ ಮಾಹಿತಿ ನೀಡಿದರು.

ಸಂಸ್ಕರಣೆ ಹೇಗೆ?

ಈ ಕೇಂದ್ರದಲ್ಲಿ ವಿದೇಶಗಳಿಗೆ ರಫ್ತಾಗುವ ಮಾವಿನ ಹಣ್ಣನ್ನು ‘ಹಾಟ್‌ ವಾಟರ್‌ ಡಿಪ್‌’ ತಂತ್ರಜ್ಞಾನದ ಮೂಲಕ ಸಂಸ್ಕರಣೆ ಮಾಡಲಾಗುತ್ತಿದೆ. ಸುಮಾರು 48 ಡಿಗ್ರಿಗಳಷ್ಟುಉಷ್ಣಾಂಶ ಇರುವ ನೀರಿನಲ್ಲಿ ಮಾವಿನ ಕಾಯಿಗಳನ್ನು ಹಾಕಿ, ಸುಮಾರು ಒಂದು ಗಂಟೆ ಕಾಲ ನೀರಿನಲ್ಲಿ ನೆನೆಸಲಾಗುತ್ತದೆ. ಅದಾದ ಬಳಿಕ ತೇವಾಂಶವಿಲ್ಲದಂತೆ ಒರೆಸಲಾಗುತ್ತದೆ. ಬಿಸಿ ನೀರಿನ ಸಂಸ್ಕರಣೆ ವಿಧಾನದಿಂದಾಗಿ ಮಾವಿನ ಕಾಯಿಯ ಮೇಲ್ಪದರಲ್ಲಿರುವ ಕೊಳೆ, ಸೂಕ್ಷ್ಮ ಜೀವಿಗಳು ನಾಶವಾಗುತ್ತವೆ. ಜತೆಗೆ ಹಣ್ಣಿನಲ್ಲಿ ಇರಬಹುದಾದ ನೊಣದ ಮೊಟ್ಟೆಜೀವ ಕಳೆದುಕೊಳ್ಳುತ್ತದೆ. ನಂತರ ಹಲವು ದಿನಗಳ ಬಳಿಕವೂ ಹಣ್ಣು ತಿನ್ನಲು ಯೋಗ್ಯವಾಗಿರುತ್ತದೆ.

Follow Us:
Download App:
  • android
  • ios