ಬಾಗಲಕೋಟೆ, [ಮಾ.08]: ಶಾಲೆಯಲ್ಲಿ ನೀಡಿದ ಮಧ್ಯಾಹ್ನದ ಬಿಸಿಯೂಟ ಸೇವಿಸಿ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಬಾಗಲಕೋಟೆಯ ಬೇವೂರ ಗ್ರಾಮದಲ್ಲಿ ನಡೆದಿದೆ.

ಬಾಗಲಕೋಟೆ ತಾಲೂಕಿನ ಬೇವೂರು ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಸ್ಟಾಕ್ ಆಹಾರ ಧಾನ್ಯ ಬಿಸಿಯೂಟ ತಯಾರಿಕೆಗೆ ಬಳಕೆ ಹಿನ್ನೆಲೆ ಫುಡ್ ಪಾಯ್ಸನ್ ಆಗಿರಬಹುದು ಎಂದು ಶಂಕಿಸಲಾಗಿದೆ.

ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಬೇವೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಈ ಪೈಕಿ ಇಬ್ಬರು ಬಾಲಕಿಯರು ತೀವ್ರ ಅಸ್ವಸ್ಥಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆ ತಿಳಿದು ಮಕ್ಕಳ ಪೋಷಕರು ಆತಂಕಗೊಂಡಿದ್ದು, ಆಸ್ಪತ್ರೆಯಲ್ಲಿ ಜಮಾಯಿಸಿದ್ದಾರೆ.