ಪ್ರತಿ ತಿಂಗಳೂ ಟಾಪ್ 500 ಪಟ್ಟಿಯಲ್ಲಿರುತ್ತಿದ್ದ ವಾಹನಗಳ ಸಂಖ್ಯೆ ದಿನೇ ದಿನೇ ಕುಸಿಯುತ್ತಿದ್ದು, ಇದೀಗ ಈ ಪಟ್ಟಿ 100ಕ್ಕೆ ಇಳಿದಿದೆ. ಅಲ್ಲದೇ 22,335 ವಾಹನಗಳ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ 24 ಲಕ್ಷ ರು. ವಸೂಲಿ ಮಾಡಲಾಗಿದೆ.

ಬೆಂಗಳೂರು(ಡಿ.4): ಹತ್ತಾರು ಬಾರಿ ನಿಯಮ ಉಲ್ಲಂಘಿಸಿ ದಂಡ ಕಟ್ಟದೆ ಸಂಚರಿಸುತ್ತಿದ್ದ ವಾಹನ ಸವಾರರಿಗೆ ನಗರ ಸಂಚಾರ ಪೊಲೀಸರು `ಮನೆ ಬಾಗಿಲಿಗೆ ತೆರಳಿ ದಂಡ ಸಂಗ್ರಹಿಸುವ' ಯೋಜನೆ ಸಹಸ್ರಾರು ವಾಹನ ಸವಾರರಿಗೆ ಚುರುಕು ಮುಟ್ಟಿಸಿದೆ. ಇದರಿಂದ ಹೆಚ್ಚು ದಂಡ ಕಟ್ಟಬೇಕಿದ್ದ, ಪ್ರತಿ ತಿಂಗಳೂ ಟಾಪ್ 500 ಪಟ್ಟಿಯಲ್ಲಿರುತ್ತಿದ್ದ ವಾಹನಗಳ ಸಂಖ್ಯೆ ದಿನೇ ದಿನೇ ಕುಸಿಯುತ್ತಿದ್ದು, ಇದೀಗ ಈ ಪಟ್ಟಿ 100ಕ್ಕೆ ಇಳಿದಿದೆ. ಅಲ್ಲದೇ 22,335 ವಾಹನಗಳ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ 24 ಲಕ್ಷ ರು. ವಸೂಲಿ ಮಾಡಲಾಗಿದೆ.

ಸಂಚಾರಿ ಪೊಲೀಸರಿಂದ ಮನೆಗೆ ರಸೀದಿ ಬಂದರೂ ನಿರ್ಲಕ್ಷ್ಯ ತೋರುತ್ತಿದ್ದ ಸವಾರರ ಆಟಕ್ಕೆ ಕಡಿವಾಣ ಹಾಕಲಾಗುತ್ತಿದ್ದು, ಕಳೆದ ಹತ್ತು ತಿಂಗಳಲ್ಲಿ ಸಂಚಾರಿ ಪೊಲೀಸರು ಸವಾರರ ಮನೆ ಬಾಗಿಲಿಗೆ ತೆರಳಿ ಸುಮಾರು 24 ಲಕ್ಷ ದಂಡ ಸಂಗ್ರಹಿಸಿದ್ದಾರೆ. ಇಷ್ಟಾದರೂ ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಮಾತ್ರ ಹೆಚ್ಚುತ್ತಲೇ ಇವೆ. ವಿಶೇಷವೆಂದರೆ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಪೈಕಿ ಆಟೋ ರಿಕ್ಷಾಗಳು ಪ್ರಥಮ ಸ್ಥಾನದಲ್ಲಿದೆ. ಪದೇ-ಪದೇ ಸಂಚಾರ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ವಾಹನಗಳು ಓಡಾಡುತ್ತಿದ್ದವು. ಇಂತಹ ವಾಹನ ಸವಾರರಿಗೆ ದಂಡ ಪಾವತಿಸುವಂತೆ ನೋಟಿಸ್ ನೀಡಲಾಗುತ್ತಿತ್ತು. ಆದರೂ ಸವಾರರು ದಂಡ ಪಾವತಿಸದೆ ನಿರ್ಲಕ್ಷ್ಯ ಮನೋಭಾವ ತೋರುತ್ತಿದ್ದರು.

ಇದರಿಂದಾಗಿ ಒಂದೇ ವಾಹನದ ಮೇಲೆ ನೂರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದವು. ಹೀಗಾಗಿ ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಆರ್.ಹಿತೇಂದ್ರ ಅವರು ಸವಾರರ ಮನೆ ಬಾಗಿಲಿಗೆ ತೆರಳಿ ದಂಡ ವಸೂಲಿ ಮಾಡಿಸಲು ಮುಂದಾದರು. ಅದರಂತೆ, ಜನವರಿಯಿಂದ ಅಕ್ಟೋಬರ್ ತಿಂಗಳಾಂತ್ಯಕ್ಕೆ 22,335 ವಾಹನಗಳಿಂದ 23,84,400 ದಂಡ ಸಂಗ್ರಹಿಸಲಾಗಿದೆ. ಒಂದೇ ವಾಹನದ ವಿರುದ್ಧ ಹೆಚ್ಚು ಪ್ರಕರಣಗಳಿದ್ದರೆ, ಅಂತಹವರು ಮನವಿ ಮೇರೆಗೆ ಕೆಲ ಪ್ರಕರಣಗಳಿಗೆ ದಂಡ ಕಟ್ಟಿ, ಉಳಿದ ಪ್ರಕರಣಗಳಿಗೆ ಹಂತ-ಹಂತವಾಗಿ ದಂಡ ಕಟ್ಟುತ್ತಿದ್ದಾರೆ ಎಂದು ಸಂಚಾರ ನಿರ್ವಹಣಾ ಕೇಂದ್ರ ಕಚೇರಿಯಲ್ಲಿರುವ ಇನ್’ಸ್ಪೆಕ್ಟರ್ ಡಾ.ಅನಿಲ್ ಗ್ರಾಮ ಪುರೋಹಿತ್ ತಿಳಿಸಿದರು.

ಪತ್ತೆ ಹೇಗೆ: ಸಂಚಾರ ನಿರ್ವಹಣಾ ಕೇಂದ್ರ ಕಚೇರಿಯಲ್ಲಿರುವ ಒಂದು ತಂಡ ನಗರದಲ್ಲಿ ಅತಿ ಹೆಚ್ಚು ಸಂಚಾರ ನಿಯಮ ಉಲ್ಲಂಘಿಸಿ ದಂಡ ಪಾವತಿಸದೇ ಇರುವ ಟಾಪ್ 500 ವಾಹನಗಳ ಕಪ್ಪು ಪಟ್ಟಿಯನ್ನು ಪ್ರತಿ ತಿಂಗಳು ತಯಾರಿಸುತ್ತಿದೆ. ಅಂತಹ 500 ಮಾಲೀಕರ ವಿಳಾಸವನ್ನು ಪ್ರಾದೇಶಿಕ ಸಾರಿಗೆ ಇಲಾಖೆಗೆ ಕಳುಹಿಸಿ, ಆಯಾ ವ್ಯಾಪ್ತಿಯ ಸಂಚಾರ ಠಾಣೆ ಪೊಲೀಸರಿಗೆ ಮಾಹಿತಿ ಕೊಟ್ಟು ಮಾಲೀಕರ ವಿಳಾಸ ಅಥವಾ ವಾಹನ ಜಪ್ತಿ ಮಾಡಲಾಗುವುದು ಎಂದು ಅಕಾರಿಗಳು ತಿಳಿಸಿದ್ದಾರೆ.

ಟಾಪ್ 100ಗೆ ಇಳಿದ ಪಟ್ಟಿ: ಕಳೆದ ಹತ್ತು ತಿಂಗಳಿಂದ ಪ್ರತಿ ತಿಂಗಳು ಪದೇ-ಪದೇ ಸಂಚಾರ ನಿಯಮ ಉಲ್ಲಂಸಿದ ವಾಹನಗಳ ಟಾಪ್ 500 ಪಟ್ಟಿ ತಯಾರಿಸಲಾಗುತ್ತಿತ್ತು. ಇದೀಗ ಅದರ ಸಂಖ್ಯೆ ಟಾಪ್ 100ಕ್ಕೆ ಇಳಿದಿದೆ. ಪ್ರತಿ ತಿಂಗಳು ಟಾಪ್ 100 ವಾಹನಗಳ ಪಟ್ಟಿ ತಯಾರಿಸಲಾಗುತ್ತಿದೆ. ಈ ಸಂಖ್ಯೆ ಇನ್ನು ಕಡಿಮೆಯಾಗಲಿದೆ ಎಂದು ಅಧಿಕಾರಿ ಹೇಳಿದರು.