Asianet Suvarna News Asianet Suvarna News

ಶೋಭಾ ಪತ್ರ ರಿಯಾಲಿಟಿ ಚೆಕ್: 23 ಸಾವು..! ಸುಳ್ಳೆಷ್ಟು..? ನಿಜವೆಷ್ಟು..? ಇಲ್ಲಿದೆ ಸಂಪೂರ್ಣ ವಿವರ

ಶೋಭಾ ಕರಂದ್ಲಾಜೆ ಕೇಂದ್ರಕ್ಕೆ ಪತ್ರದ ಜೊತೆ ಕೋಮು ದ್ವೇಷಕ್ಕೆ ಬಲಿಯಾಗಿರುವವರ ಒಂದು ಪಟ್ಟಿಯನ್ನೂ ನೀಡಿದ್ದಾರೆ. ಇದರಲ್ಲಿ ಒಟ್ಟು 23 ಮಂದಿಯ ಹೆಸರುಗಳಿವೆ ಎಂದು ಇದನ್ನು ಸಂಸದೆಯ ಕಚೇರಿ ಮೂಲಗಳು ಹಾಗೂ ಲಭ್ಯವಾದ ದಾಖಲೆಗಳಿಂದ ಸ್ಪಷ್ಟವಾಗಿದೆ. ಸಂಸದೆ ನೀಡಿರುವ 'ಕೊಲೆಗೀಡಾದ 23 ಮಂದಿಯಲ್ಲಿ' ಮೂಡಬಿದ್ರೆಯ ಅಶೋಕ್ ಪೂಜಾರಿ ಎಂಬ ವ್ಯಕ್ತಿಯ ಹೆಸರು ಉಲ್ಲೇಖ ಮಾಡಲಾಗಿದೆ. ಆದರೆ, ಅಶೋಕ್ ಪೂಜಾರಿ ಇನ್ನೂ ಬದುಕಿದ್ದಾರೆ. ಅಲ್ಲದೆ ಹಲ್ಲೆಯಾದವರ, ವೈಯುಕ್ತಿಕ ಸಂಘರ್ಷದಿಂದಾಗಿ ಬಲಿಯಾದವರ ಮತ್ತು ಅಪಘಾತದಲ್ಲಿ ಮೃತಪಟ್ಟವರ ಹೆಸರನ್ನೂ ಕೋಮು ದ್ವೇಷಕ್ಕೆ ಬಲಿಯಾದವರ ಪಟ್ಟಿಯಲ್ಲಿ ಸೇರಿಸಲಾಗಿದೆ. ಶೋಭಾ ಸಲ್ಲಿಸಿರುವ ಪಟ್ಟಿಯಲ್ಲಿರುವ 23 ಹೆಸರುಗಳು ಹಾಗೂ ಅವರ ಹತ್ಯೆಯ ಹಿಂದಿನ ಕಾರಣಗಳ ಸಂಪೂರ್ಣ ವಿವರ ಇಲ್ಲಿದೆ

23 names submitted by shobha karandlaje to central govt and the real reason for their death

ನವದೆಹಲಿ(ಜು.19): ರಾಜ್ಯದಲ್ಲಿ ಕೋಮು ಗಲಭೆಯನ್ನು ಪ್ರಸ್ತಾಪಿಸುವ ಭರದಲ್ಲಿ ಸಂಸದೆ ಬಿಜೆಪಿ ಯಡವಟ್ಟು ಮಾಡಿಕೊಂಡಿದ್ದಾರೆ. ಕೇಂದ್ರವನ್ನು ಓಲೈಸುವ ಭರದಲ್ಲಿಯೋ ಅಥವಾ ಕಾಂಗ್ರೆಸ್ ಸರಕಾರವನ್ನು ಹಣಿಯುವ ಭರದಲ್ಲೋ ಯಾವುದೇ ಪರಿಶೀಲನೆ ಮಾಡದೆ ಅನೌಪಚಾರಿಕವಾಗಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್'ಗೆ ಬರೆದ ಪತ್ರದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಯಡವಟ್ಟು ಸ್ಪಷ್ಟವಾಗಿ ಕಂಡು ಬಂದಿದೆ. ಬಿಜೆಪಿಯ ಈ ಯಡವಟ್ಟು ಮತ್ತಷ್ಟು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಶೋಭಾ ಕರಂದ್ಲಾಜೆ ಕೇಂದ್ರಕ್ಕೆ ಪತ್ರದ ಜೊತೆ ಕೋಮು ದ್ವೇಷಕ್ಕೆ ಬಲಿಯಾಗಿರುವವರ ಒಂದು ಪಟ್ಟಿಯನ್ನೂ ನೀಡಿದ್ದಾರೆ. ಇದರಲ್ಲಿ ಒಟ್ಟು 23 ಮಂದಿಯ ಹೆಸರುಗಳಿವೆ ಎಂದು ಇದನ್ನು ಸಂಸದೆಯ ಕಚೇರಿ ಮೂಲಗಳು ಹಾಗೂ ಲಭ್ಯವಾದ ದಾಖಲೆಗಳಿಂದ ಸ್ಪಷ್ಟವಾಗಿದೆ. ಸಂಸದೆ ನೀಡಿರುವ 'ಕೊಲೆಗೀಡಾದ 23 ಮಂದಿಯಲ್ಲಿ' ಮೂಡಬಿದ್ರೆಯ ಅಶೋಕ್ ಪೂಜಾರಿ ಎಂಬ ವ್ಯಕ್ತಿಯ ಹೆಸರು ಉಲ್ಲೇಖ ಮಾಡಲಾಗಿದೆ. ಆದರೆ, ಅಶೋಕ್ ಪೂಜಾರಿ ಇನ್ನೂ ಬದುಕಿದ್ದಾರೆ. ಅಲ್ಲದೆ ಹಲ್ಲೆಯಾದವರ, ವೈಯುಕ್ತಿಕ ಸಂಘರ್ಷದಿಂದಾಗಿ ಬಲಿಯಾದವರ ಮತ್ತು ಅಪಘಾತದಲ್ಲಿ ಮೃತಪಟ್ಟವರ ಹೆಸರನ್ನೂ ಕೋಮು ದ್ವೇಷಕ್ಕೆ ಬಲಿಯಾದವರ ಪಟ್ಟಿಯಲ್ಲಿ ಸೇರಿಸಲಾಗಿದೆ.

ಶೋಭಾ ಸಲ್ಲಿಸಿರುವ ಪಟ್ಟಿಯಲ್ಲಿರುವ 23 ಹೆಸರುಗಳು ಹಾಗೂ ಅವರ ಹತ್ಯೆಯ ಹಿಂದಿನ ಕಾರಣಗಳ ಸಂಪೂರ್ಣ ವಿವರ ಇಲ್ಲಿದೆ

1 ಅಶೋಕ್ ಪೂಜಾರಿ:

ಮೂಡಬಿದರೆಯ ಅಶೋಕ್ ಪೂಜಾರಿಯವರ ಮೇಲೆ 2015ರ ಸೆಪ್ಟಂಬರ್ 20ರಂದು ತಂಡವೊಂದು ಮೂಡಬಿದ್ರೆಯ ಹಂಡೇಲ್ ನಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು. ಗಂಭೀರ ಗಾಯಗೊಂಡಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರು ಚೇತರಿಸಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ಅಶೋಕ್ ಪೂಜಾರಿ ಅವರ ಮೇಲಿನ ಹಲ್ಲೆಯ ವರದಿಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಇವರ ಹತ್ಯೆಯಾಗಿಲ್ಲ, ಆದರೆ ಶೋಭಾ ಬರೆದ ಪತ್ರದಲ್ಲಿ ಕೊಲೆಗೀಡಾದವರ ಪಟ್ಟಿಯಲ್ಲಿ ಮೊದಲ ಹೆಸರು ಇವರದ್ದೇ ಆಗಿದೆ.

2.ವಾಮನ ಪೂಜಾರಿ

ಈ ಪಟ್ಟಿಯಲ್ಲಿ ಮೂಡಬಿದ್ರೆಯ ವಾಮನ ಪೂಜಾರಿ ಎಂಬವರ ಹೆಸರು ಇದೆ. ಆದರೆ, ವಾಮನ ಪೂಜಾರಿಯ ಹತ್ಯೆಯಾಗಿಲ್ಲ. 2015ರ ಅಕ್ಟೋಬರ್ 15ರಂದು ಅವರು ಮೂಡಬಿದ್ರೆಯ ಬನ್ನಡ್ಕದಲ್ಲಿರುವ ತನ್ನ ಮಗಳ ಮನೆಯ ಶೆಡ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಮೂಡಬಿದ್ರೆ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

3. ಪ್ರಶಾಂತ್​ ಪೂಜಾರಿ:

2014ರ ಅಕ್ಟೋಬರ್ 9 ರಂದು ಬೆಳಿಗ್ಗೆ ಹೂವಿನ ಅಂಗಡಿಗೆ ಹೋಗುತ್ತಿದ್ದ ಮೂಡಬಿದ್ರೆಯ ಪ್ರಶಾಂತ್​ ಪೂಜಾರಿಯನ್ನು ಆರು ಮಂದಿಯ ತಂಡ ಮೂರು ಬೈಕ್‌ನಲ್ಲಿ ಬಂದು ತಲೆ ಕಡಿದು ಕೊಲೆ ಮಾಡಿ ಪರಾರಿಯಾಗಿತ್ತು. ಈ ಕೊಲೆ ಹತ್ಯೆ ನಡೆದಿತ್ತು. ಇವರನ್ನು ಕೋಮು ವೈಷಮ್ಯದಿಂದ ಮಾಡಲಾಗಿತ್ತು.

4. ಡಿ. ಕೆ. ಕುಟ್ಟಪ್ಪ :

ಮಡಿಕೇರಿಯಲ್ಲಿ ಟಿಪ್ಪು ಜಯಂತಿ ಸಂದರ್ಭದಲ್ಲಿ ಉಂಟಾದ ಕಲ್ಲು ತೂರಾಟದ ಸಂದರ್ಭದಲ್ಲಿ ಪೊಲೀಸರು ಲಾಠೀ ಚಾರ್ಚಜ್ ನಡೆಸಿದ್ದರು. ಈ ವೇಳೆ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದ ಕುಟ್ಟಪ್ಪ ಆಯತಪ್ಪಿ ಎತ್ತರದಿಂದ ಬಿದ್ದು ಸಾವಿಗೀಡಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿದೆ.

5. ರಾಜು:

2015ರ ನ.10ರಂದು ಮಡಿಕೇರಿಯಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಉಂಟಾದ ಹಿಂಸಾಚಾರದ ಸಂದರ್ಭದಲ್ಲಿ ಗಲಭೆ ನೋಡಲು ಬಂದ ಇವರು ಎತ್ತರ ಪ್ರದೇಶದಿಂದ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದರು. ಈ ವಿಷಯವನ್ನು ಆಗಿನ ಜಿಲ್ಲಾ ಪೊಲೀಸ್ ಅಧಿಕಾರಿಗಳೂ ಸ್ಪಷ್ಟಪಡಿಸಿದ್ದರು. ಆದರೆ ಪಟ್ಟಿಯಲ್ಲಿ ಇವರು 'ಕೋಮು ಗಲಭೆ'ಯಿಂದ ಸಾವಿಗೀಡಾದವರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ

6. ಕೆ. ರಾಜು:

2016ರ ಮಾರ್ಚ್ 13ರಂದು ಸಂಜೆ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಶ್ವಹಿಂದೂಪರಿಷತ್, ಬಿಜೆಪಿ ಕಾರ್ಯಕರ್ತ ರಾಜು ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಇದು ಕೋಮು ವೈಷಮ್ಯದಿಂದ ಮಾಡಿದ ಕೊಲೆಯಾಗಿತ್ತು.

7. ರಾಜೇಶ್​ ಕೋಟ್ಯಾನ್​

2016ಎಪ್ರಿಲ್ 5ರಂದು ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿ ಮೀನುಗಾರ ರಾಜು ಕೋಟ್ಯಾನ್ ಅವರನ್ನು ದುಷ್ಕರ್ಮಿಗಳು ಕಲ್ಲಿನಿಂದ ಜಜ್ಜಿ ಹತ್ಯೆಗೈದಿದ್ದರು. ಈ ಕೊಲೆ ಕೂಡಾ ಕೋಮು ವೈಷಮ್ಯದಿಂದ ನಡೆದಿತ್ತು.

8. ಅಶ್ವತ್ಥ್​

ಶೋಭಾ ಕರಂದ್ಲಾಜೆ ಬರೆದ ಪತ್ರದಲ್ಲಿರುವ ಪಟ್ಟಿಯಲ್ಲಿ ಅತ್ತಿಬೆಲೆಯ ಅಶ್ವತ್ಥ್ ಎಂಬುವವರ ಹೆಸರನ್ನೂ ನಮೂದಿಸಲಾಗಿದೆ. ಆದರೆ ಈ ಕೊಲೆ ಕೋಮು ವೈಷಮ್ಯದಿಂದ ನಡೆದಿದ್ದಾಗಿರಲಿಲ್ಲ. ಬದಲಾಗಿ ಈ ಕೊಲೆ ಕೌಟುಂಬಿಕ ರಾಜಕೀಯ ವೈಷಮ್ಯದಿಂದ ನಡೆಯಲಾಗಿತ್ತು ಎಂದು ತನಿಖೆಯಿಂದ ಬಹಿರಂಗಗೊಂಡಿತ್ತು.

9. ಯೋಗೀಶ್​ ಗೌಡರ್

ಸಂಸದೆ ಶೋಭಾ ನೀಡಿರುವ ಪಟ್ಟಿಯಲ್ಲಿ ಹುಬ್ಬಳ್ಳಿಯ ಯೋಗೀಶ್ ಗೌಡರ್ ಹೆಸರು ಕೂಡಾ ಉಲ್ಲೇಕಿಸಲಾಗಿದೆ. ಆದರೆ ಇವರ ಕೊಲೆ ಆಸ್ತಿ ವಿವಾದದ ಹುನ್ನೆಲೆಯಲ್ಲಿ ನಡೆದಿತ್ತು. ಕೋಮು ದ್ವೇಷದಿಂದ ನಡೆದ ಕೊಲೆ ಇದಾಗಿರಲಿಲ್ಲ ೆಂದು ತನಿಖೆಯಿಂದ ಬಯಲಾಗಿತ್ತು.

10. ಸಿ. ಎನ್​. ಶ್ರೀನಿವಾಸ್

ಬೆಂಗಳೂರಿನ ಸಿ. ಎನ್ ಶ್ರೀನಿವಾಸ ಎಂಬವರ ಹೆಸರೂ ಶೋಭಾ ಕೇಂದ್ರಕ್ಕೆ ಸಲ್ಲಿಸಿರುವ ಪಟ್ಟಿಯಲ್ಲಿ ಉಲ್ಲೇಖವಾಗಿದೆ. ಆದರೆ ಈ ಕೊಲೆ ರಾಜಕೀಯ ವೈಷಮ್ಯದಿಂದ ನಡೆದಿತ್ತೇ ಹೊರತು ಕೋಮು ದ್ವೇಷದಿಂದ ನಡೆದದ್ದಲ್ಲ.

11. ಪ್ರವೀಣ್​ ಪೂಜಾರಿ

2016ರ ಆಗಸ್ಟ್ 14 ರಂದು ಕುಶಾಲನಗರದ ಆಟೋ ಚಾಲಕ ಪ್ರವೀಣ್‌ ಪೂಜಾರಿಯನ್ನು ಕೊಲೆಗೈಯ್ಯಲಾಗಿತ್ತು. ತನಿಖೆಯಿಂದ ಇದು ಕೋಮು ವೈಷಮ್ಯದಿಂದ ನಡೆದ ಹತ್ಯೆ ಎಂದು ಸಾಬೀತಾಗಿತ್ತು.

12. ಚರಣ್​ ಪೂಜಾರಿ

2016ರ ಆಗಸ್ಟ್'ನಲ್ಲಿ ಬಜರಂಗದಳದ ಕಾರ್ಯಕರ್ತ ಚರಣ್ ಪೂಜಾರಿಯಲ್ಲಿ ಮಂಗಳೂರಿನ ವಾಮಂಜೂರು ಬಳಿ ತನ್ನ ಹೆಂಡತಿ ಹಾಗೂ ಮಕ್ಕಳೊಂದಿಗೆ ರಿಕ್ಷಾದಲ್ಲಿ ಹೋಗುತ್ತಿದ್ದಾಗ ಬೊಲೆರೋದಲ್ಲಿ ಬಂದ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಗಂಭೀರ ಗಾಯಾಳುವಾಗಿದ್ದ ಇವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು ಈ ಕೊಲೆ ಕೋಮು ವೈಷಮ್ಯದಿಂದ ನಡೆಸಲಾಗಿತ್ತು.

13. ವೆಂಕಟೇಶ್​

ಶಿವಮೊಗ್ಗದ ರೌಡಿಶೀಟರ್ ವೆಂಕಟೇಶ್ ರೌಡಿಗಳಿಂದಲೇ ಹತ್ಯೆಗೀಡಾಗಿದ್ದರು. ಆದರೆ ಶೋಭಾ ಸಲ್ಲಿಸಿರುವ ಪಟ್ಟಿಯಲ್ಲಿ ಇವರು ಕೋಮು ದ್ವೇಷಕ್ಕೆ ಬಲಿಯಾಗಿದ್ದರು ಎಂದು ನಮೂದಿಸಲಾಗಿದೆ.

14. ರುದ್ರೇಶ್​

2016ರ ಅಕ್ಟೋಬರ್ 16ರಂದು ಪಥಸಂಚಲನ ಮುಗಿಸಿ ಮನೆಗೆ ಮರಳುತ್ತಿದ್ದ RSS ಕಾರ್ಯಕರ್ತ ರುದ್ರೇಶ್'ನ್ನು ಶಿವಾಜಿನಗರದ ಕಮರ್ಷಿಯಲ್ ಸ್ಟ್ರೀಟ್ ಬಳಿ ಹಾಡಹಗಲೇ ದುಷ್ಕರ್ಮಿಗಳು ಕೊಲೆಗೈದಿದ್ದರು. ಈ ಕೊಲೆ ಕೋಮು ವೈಷಮ್ಯದಿಂದ ಈ ಹತ್ಯೆ ನಡೆದಿತ್ತು.

15. ಕಾರ್ತೀಕ್ ರಾಜ್​

2016ರ ಅಕ್ಟೋಬರ್ 22ರಂದು ನಡೆದ ಕಾರ್ತಿಕ್ ರಾಜ್ ಕೊಲೆ ಜಿಲ್ಲೆಯನ್ನು ದಂಗುಬಡಿಸಿತ್ತು. ಈ ಕೊಲೆಯ ಹಿಂದಿರುವ ಅಪರಾಧಿಗಳನ್ನು ಬಂಧಿಸದಿದ್ದರೆ ಜಿಲ್ಲೆಗೆ ಬೆಂಕಿ ಹಚ್ಚುವ ಬೆದರಿಕೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಹಾಕಿದ್ದರು. ಈ ಹೇಳಿಕೆ ನೀಡಿದ ಕೆಲವೇ ದಿನಗಳ ಬಳಿಕ ಜಿಲ್ಲೆಗೆ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಕೊಲೆಯಲ್ಲಿ ಕೇರಳ ಮೂಲದ ಸಂಘಟನೆಯ ಕೈವಾಡವಿದೆ ಎಂದು ಆರೋಪಿಸಿದ್ದರು. ಆದರೆ, ಈ ಕೊಲೆಯ ರೂವಾರಿ ಕಾರ್ತಿಕ್ ರಾಜ್ ಸಹೋದರಿಯೇ ಎಂಬುದು ಪೊಲೀಸರು ತನಿಖೆಯಲ್ಲಿ ಬಹಿರಂಗವಾಗಿ ಆಕೆಯನ್ನು ಬಂಧಿಸಲಾಗಿತ್ತು.

16. ರವಿ ಮಾಗಳಿ

ಪಿರಿಯಾಪಟ್ಟಣದ ರವಿ ರಸ್ತೆ ಅಪಘಾತದಲ್ಲಿ ಸಾವು ಪ್ರಾಣ ಕಳೆದುಕೊಂಡಿದ್ದರು. ಈ ಕೊಲೆ ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿದೆ. ಆದರೂ ಈ ಸಾವನ್ನು ಕೋಮು ವೈಷಮ್ಯದಿಂದ ಸಂಭವಿಸಿದ ಪಟ್ಟಿಗೆ ಸೇರಿಸಿದ್ದಾರೆ ಸಂಸದೆ ಶೋಭಾ ಕರಂದ್ಲಾಜೆ.

17. ಚಿಕ್ಕತಿಮ್ಮೇಗೌಡ

ಹೆಗ್ಗನಹಳ್ಳಿಯ ಚಿಕ್ಕತಿಮ್ಮೇಗೌಡ ಎಂಬವರ ಹೆಸರು ಕೂಡಾ ಸಂಸದೆ ಸಲ್ಲಿಸಿರುವ ಪಟ್ಟಿಯಲ್ಲಿ ಉಲ್ಲೆಕಿಸಲಾಗಿದೆ. ಆದರೆ ಇವರ ಕೊಲೆ ಹಣಕಾಸು ವ್ಯವಹಾರದಲ್ಲಿ ಉಂಟಾದ ದ್ವೇಷದಿಂದ ನಡೆಸಲಾಗಿತ್ತು ಎಂದು ತನಿಖೆಯಲ್ಲಿ ಬಯಲಾಗಿತ್ತು.

18. ಶ್ರೀನಿವಾಸ ಪ್ರಸಾದ್​ (ವಾಸು)

ಕೆಂದ್ರಕ್ಕೆ ಸಲ್ಲಿಸಿರುವ ಪಟ್ಟಿಯಲ್ಲಿ ಬೊಮ್ಮನಹಳ್ಳಿಯ ಶ್ರೀನಿವಾಸ ಪ್ರಸಾದ್(ವಾಸು) ಎಂಬವರ ಹೆಸರೂ ನಮೂದಾಗಿದೆ. ಆದರೆ ಅವರ ಕೊಲೆಗೆ ಕೋಮು ದ್ವೇಷ ಕಾರಣವಾಗಿರಲಿಲ್ಲ. ಬದಲಾಗಿ ಅಧಿಕಾರಕ್ಕಾಗಿ ಮಹಿಳಾ ಕೌನ್ಸಿಲರ್ ಈ ಹತ್ಯೆಗೆ ಸುಪಾರಿ ನೀಡಿದ್ದರು ಎಂಬ ವಿಚಾರ ಬೆಳಕಿಗೆ ಬಂದಿತ್ತು.

19. ಹರೀಶ್​

ಆನೇಕಲ್ ನಿವಾಸಿ ಹರೀಶ್ ಹೆಸರು ಕೂಡಾ ಈ ಶೋಭಾ ಸಲ್ಲಿಸಿರುವ ಪಟ್ಟಿಯಲ್ಲಿ ಸೇರಿಕೊಂಡಿದೆ. ಹರೀಶ್ ಟೆಂಡರ್​ ವಿಚಾರದಲ್ಲಿ ತಮ್ಮ ಕುಟುಂಬ ಸದಸ್ಯರಿಂದಲೇ ಹತ್ಯೆಗೀಡಾಗಿದ್ದರೆಂಬ ವಿಚಾರ ತನಿಖೆಯಲ್ಲಿ ಬಯಲಾಗಿತ್ತು.

20. ಶರತ್​ ಮಡಿವಾಳ

ಜುಲೈ 4ರಂದು ಬಂಟ್ವಾಳದ ಬಿ. ಸಿ ರೋಡ್'ನಲ್ಲಿ ಬೈಕ್‌ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು RSS ಕಾರ್ಯಕರ್ತ ಶರತ್ ಮಡಿವಾಳರ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದರು. ಗಂಭೀರ ಗಾಯಾಳುವಾಗಿದ್ದ ಇವರನ್ನು ಆಸ್ಪತ್ರೆಗೆ ದಾಖಲಾಯಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಇವರ ಕೊಲೆ ಪ್ರಕರಣ ದೇಶಾದ್ಯಂತ ಸದ್ದು ಮಾಡಿತ್ತು. ಇವರ ಹತ್ಯೆ  ಕೋಮು ವೈಷಮ್ಯದಿಂದ ನಡೆದಿದ್ದು ಎಂಬ ಆರೋಪ ಕೇಳಿ ಬಂದಿದೆ. ಕೊಲೆ ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿದೆ.

21. ಮಹದೇವ್​ ಕಾಳೆ

ಕಲಬುರಗಿಯ ಮಹದೇವ್ ಕಾಳೆ ಹೆಸರು ಕೂಡಾ ಶೋಭಾ ಕರಂದ್ಲಾಜೆ ಕೇಂದ್ರಕ್ಕೆ ಸಲ್ಲಿಸಿರುವ ಕೋಮು ದ್ವೇಷದಿಂದ ುಂಟಾದ ಕೊಲೆ ಪಟ್ಟಿಯಲ್ಲಿ ಉಲ್ಲೇಕವಾಗಿದೆ. ಈ ಕೊಲೆ ಕೋಮು ವೈಷಮ್ಯದಿಂದ ಸಂಭವಿಸಿರಲಿಲ್ಲ. ಬದಲಾಗಿ ದಾಯಾದಿ ಕಲಹದಿಂದ ಸಮಭವಿಸಿದ್ದು ಎಂಬ ವಿಚಾರ ತನಿಖೆಯಿಂದ ಬಯಲಾಗಿತ್ತು.

22. ತಿಪ್ಪೇಶ್​

ತಿಪಟೂರಿನ ತಿಪಟೂರು ಹೆಸರು ಕೂಡಾ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಈ ಕೊಲೆಯ ಹಿಂದಿನ ಕಾರಣ ಇನ್ನೂ ತಿಳಿದು ಬಂದಿಲ್ಲ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಅಲ್ಲದೆ ಇದಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

23. ರಮೇಶ್​ ಬಂಡಿ

ಶೋಭಾ ಕರಂದ್ಲಾಜೆ ಸಲ್ಲಿಸಿರು 23 ಮಂದಿಯ ಪಟ್ಟಿಯಲ್ಲಿರುವ ಕೊನೆಯ ಹೆಸರು ಬಳ್ಳಾರಿಯ ರಮೇಶ್ ಬಂಡಿ. ಆದರೆ ಈ ಕೊಲೆ ಕೂಡಾ ಕೋಮು ವೈಷಮ್ಯದಿಂದಾದ ಕೊಲೆಯಾಗಿರದೆ, ರಾಜಕೀಯ ದ್ವೇಷದಿಂದ ಸಂಭವಿಸಿದ ಕೊಲೆಯಾಗಿತ್ತು.

ಇನ್ನು ಈ ಯಡವಟ್ಟಿನ ಕುರಿತಾಗಿ ಪ್ರತಿಕ್ರಿಸಿರುವ ಸಂಸದೆ ಶೋಭಾ ಇದು ಕೈ ತಪ್ಪಿನಿಂದಾದ ಯಡವಟ್ಟು ಎಂಬ ಉತ್ತರ ನೀಡಿದ್ದಾರೆ. ಆದರೂ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದೆ ಯಾವುದೇ ಪರಿಶೀಲನೆ ನಡೆಸದೆ ಇಂತಹ ಸೂಕ್ಷ್ಮ ವಿಚಾರದ ಕುರಿತಾಗಿ ಕೇಂದ್ರಕ್ಕೆ ಇಂತಹ ಅಅನೌಪಚಾರಿಕ ಪತ್ರ ಬರೆದಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಮೂಡುತ್ತದೆ.

Follow Us:
Download App:
  • android
  • ios