ಹೈದರಾಬಾದ್‌: 2007ರ ಹೈದರಾಬಾದ್‌ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಮೆಟ್ರೋಪಾಲಿಟನ್‌ ನ್ಯಾಯಾಲಯ ಇಂಡಿಯನ್‌ ಮುಜಾಹಿದೀನ್‌ (ಐಎಂ) ಸಂಘಟನೆಯ ಇಬ್ಬರು ಭಯೋತ್ಪಾದಕರಿಗೆ ಸೋಮವಾರ ಗಲ್ಲುಶಿಕ್ಷೆ ವಿಧಿಸಿದೆ. ಇನ್ನೊಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

2007ರ ಆಗಸ್ಟ್‌ 25ರಂದು ಗೋಕುಲ್‌ ಚಾಟ್‌ ಮತ್ತು ಲುಂಬಿನಿ ಪಾರ್ಕ್ನಲ್ಲಿ ನಡೆದ ಅವಳಿ ಬಾಂಬ್‌ ಸ್ಫೋಟದಲ್ಲಿ 44 ಮಂದಿ ಮೃತಪಟ್ಟು 68 ಮಂದಿ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೀಕ್‌ ಶಫೀಕ್‌ ಸಯೀದ್‌ ಮತ್ತು ಮೊಹಮ್ಮದ್‌ ಅಕ್ಬರ್‌ ಇಸ್ಮಾಯಿಲ್‌ ಚೌಧರಿ ಎನ್ನುವವರು ದೋಷಿಗಳು ಎಂದು ಹೆಚ್ಚುವರಿ ಮೆಟ್ರೋಪಾಲಿಟನ್‌ ಸೆಷನ್ಸ್‌ ಕೋರ್ಟ್‌ ಸೆ.4ರಂದು ಪ್ರಕಟಿಸಿತ್ತು. ಆದರೆ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಫಾರೂಖ್‌ ಸರ್ಫುದ್ದೀನ್‌ ತರ್ಕಶ್‌ ಮತ್ತು ಮೊಹಮ್ಮದ್‌ ಸಾದಿಕ್‌ ಇಶಾರ್‌ ಅಹಮದ್‌ ಶೇಕ್‌ ಎನ್ನುವವರನ್ನು ಖುಲಾಸೆಗೊಳಿಸಲಾಗಿತ್ತು. ಸಯೀದ್‌ ಮತ್ತು ಚೌಧರಿಗೆ ಉಗ್ರ ನಿಗ್ರಹ ಕಾಯ್ದೆ ಅಡಿಯಲ್ಲಿ ಮರಣದಂಡನೆ ಹಾಗೂ 10 ಸಾವಿರ ರು. ದಂಡ ವಿಧಿಸಲಾಗಿದೆ. ದುಷ್ಕರ್ಮಿಗಳಿಗೆ ಆಶ್ರಯ ನೀಡಿದ ಐದನೇ ಆರೋಪಿಯಾದ ತಹ್ರಿಕ್‌ ಅಂಜುಮ್‌ ಎಂಬಾತನಿಗೆ ಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿದೆ.

ಪ್ರಕರಣದ ಇತರ ಮೂವರು ಆರೋಪಿಗಳಾದ ಇಂಡಿಯನ್‌ ಮುಜಾಹಿದ್ದೀನ್‌ ಸ್ಥಾಪಕ ರಿಯಾಜ್‌ ಭಟ್ಕಳ್‌, ಆತನ ಸೋದರ ಇಕ್ಬಾಲ್‌ ಮತ್ತು ಅಮಿರ್‌ ರೇಜಾ ತರೆ ಮರೆಸಿಕೊಂಡಿದ್ದು, ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದಾರೆ ಎನ್ನಲಾಗಿದೆ.