ಬೆಂಗಳೂರು [ಜೂ.20] :  ‘ಆಪರೇಷನ್ ಕಮಲ’ ನಡೆಸುವ ಸಲುವಾಗಿ ಜೆಡಿಎಸ್ ಶಾಸಕರೊಬ್ಬರಿಗೆ ಬಿಜೆಪಿ ಮುಖಂಡರು 10 ಕೋಟಿ ರು.ಗಳ ಆಮಿಷ ಒಡ್ಡಿದ್ದಾರೆ ಎಂಬ ಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪವನ್ನು ಬಲವಾಗಿ ಅಲ್ಲಗಳೆದಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಅದಕ್ಕೆ ಸಂಬಂಧಪಟ್ಟ ವಿವರಗಳನ್ನು  ಒತ್ತಾಯಿಸಿದ್ದಾರೆ.

ಬುಧವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಹತಾಶರಾಗಿ ಆಪರೇಷನ್ ಕಮಲದ ಆರೋಪ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು. ಈ ರೀತಿ ಮನಸ್ಸಿಗೆ ಬಂದಂತೆ ಮಾತನಾಡುವ ಬದಲು ಜೆಡಿಎಸ್‌ನ ಯಾವ  ಶಾಸಕರಿಗೆ ಬಿಜೆಪಿಯ ಯಾವ ಮುಖಂಡರು ಆಮಿಷ ಒಡ್ಡಿದ್ದರು ಎಂಬುದನ್ನು ಬಹಿರಂಗಪಡಿಸಬೇಕು. ಹಾಗೆ ಮಾಡಿದರೆ ಅವರಿಗೆ ಗೌರವ ಬರುತ್ತದೆ. ಇಲ್ಲದಿದ್ದರೆ ತಮ್ಮ ಪಕ್ಷದ ಶಾಸಕರನ್ನು ತಾವೇ ಅನುಮಾನಪಟ್ಟು ಹರಾಜಿಗೆ ಇಟ್ಟಂತಾಗುತ್ತದೆ. ಅನಗತ್ಯವಾಗಿ ಯಾರೋ ಬಿಜೆಪಿಯವರು, ಯಾರೋ ಜೆಡಿಎಸ್ ಶಾಸಕರನ್ನು ಸಂಪರ್ಕಿಸಿ 10 ಕೋಟಿ ರು. ಆಮಿಷ ಒಡ್ಡಿದ್ದಾರೆ ಎಂದು ಹೇಳುವುದು ಅವರ ಸ್ಥಾನಕ್ಕೆ ಘನತೆ
ತರುವುದಿಲ್ಲ ಎಂದು ತೀಕ್ಷ್ಣವಾಗಿ ಹೇಳಿದರು.

ನಾವು ಸರ್ಕಾರವನ್ನು ಪತನಗೊಳಿಸುವ ಪ್ರಯತ್ನಕ್ಕೆ ಕೈಹಾಕುವುದಿಲ್ಲ ಎಂದು ಈಗಾಗಲೇ ಹಲವು ಬಾರಿ ಸ್ಪಷ್ಟಪಡಿಸಿದ್ದೇವೆ. ಆಡಳಿತಾರೂಢ ಪಕ್ಷದ 15ರಿಂದ 20 ಮಂದಿ  ಶಾಸಕರು ಅಸಮಾಧಾನಗೊಂಡಿದ್ದಾರೆ. ಅವರನ್ನು ಸರಿ ಮಾಡಿ ಕೊಂಡು ರಾಜ್ಯದ ಅಭಿವೃದ್ಧಿಯತ್ತ ಗಮನಹರಿಸಿ ಎಂಬ ಮಾತನ್ನು ನಾವು ಹೇಳುತ್ತಿದ್ದೇವೆ ಎಂದರು.

ಬಿಜೆಪಿ ಪ್ರತಿಪಕ್ಷವಾಗಿ ತನ್ನ ಕೆಲಸವನ್ನು ಮಾಡುತ್ತಿದೆ. ರಾಜ್ಯದ ಶೇ.80 ರಷ್ಟು ಭಾಗದಲ್ಲಿ ಮಳೆಯಾಗಿಲ್ಲ. ಬರ ಪರಿಹಾರ ಕಾಮಗಾರಿಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಮುಖ್ಯ ಮಂತ್ರಿಗಳು ಇಂಥ ಸುಳ್ಳು ಹೇಳಿಕೆಗಳನ್ನು ನೀಡುವ ಬದಲು ಬರ ಪರಿಹಾರ ಕಾಮಗಾರಿ ಕೈಗೊಳ್ಳುವುದೂ ಸೇರಿದಂತೆ ರಾಜ್ಯದ ಅಭಿವೃದ್ಧಿ ಕೆಲಸಗಳತ್ತ ಆದ್ಯತೆ ನೀಡಬೇಕಾಗಿದೆ ಎಂದು ಕಿವಿಮಾತು ಹೇಳಿದರು.