ಇಂದು ಮೃತಪಟ್ಟ ವಾಸೀಂ ಶಾ ಕಾಶ್ಮೀರದಲ್ಲಿ ಸಕ್ರಿಯವಾಗಿರುವ ಅಪಾಯಕಾರಿ ಉಗ್ರ ನಾಯಕರಲ್ಲೊಬ್ಬನೆನಿಸಿದ್ದ. 23 ವರ್ಷದ ವಾಸೀಂನನ್ನು ಉಗ್ರ ಸಹಚರರು ಅಬು ಒಸಾಮಾ ಭಾಯ್ ಎಂದೇ ಕರೆಯುತ್ತಾರೆ. ಈಗ ಶೋಪಿಯನ್ ಜಿಲ್ಲೆಯಲ್ಲಿ ಹೆಫ್ ಕೀ ಡಾನ್ ಎಂದೇ ಖ್ಯಾತನಾಗಿದ್ದ.
ಶ್ರೀನಗರ(ಅ. 14): ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ಮಧ್ಯೆ ಇಂದು ಶನಿವಾರ ಬೆಳಗ್ಗೆ ನಡೆದ ಗುಂಡಿನ ಕಾಳಗದಲ್ಲಿ ಲಷ್ಕರೆ ತೊಯಿಬಾದ ಟಾಪ್ ಕಮಾಂಡರ್ ವಾಸೀಮ್ ಶಾ ಸೇರಿದಂತೆ ಇಬ್ಬರು ಉಗ್ರರು ಹತರಾಗಿದ್ದಾರೆ. ವಾಸೀಮ್ ಶಾ ಜೊತೆ ಹತ್ಯೆಯಾದ ಮತ್ತೊಬ್ಬ ಉಗ್ರನನ್ನು ನಿಸಾರ್ ಅಹ್ಮದ್ ಎಂದು ಪೊಲೀಸರು ಗುರುತಿಸಿದ್ದಾರೆ. ಈತ ವಾಸೀಮ್ ಶಾನ ಬಾಡಿಗಾರ್ಡ್ ಎನ್ನಲಾಗಿದೆ.
ಪುಲ್ವಾಮಾದ ಲಿತ್ತರ್ ಎಂಬಲ್ಲಿ ಉಗ್ರಗಾಮಿಗಳಿದ್ದಾರೆಂಬ ಮಾಹಿತಿಯನ್ನಾಧರಿಸಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ್ದವು. ಈ ವೇಳೆ, ಭದ್ರತಾ ಪಡೆಗಳ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಲು ಯತ್ನಿಸಿದರು. ಭದ್ರತಾಪಡೆಗಳು ಪ್ರತಿದಾಳಿ ನಡೆಸಿದಾಗ ಇಬ್ಬರು ಉಗ್ರರು ಹತರಾದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಲಿತ್ತರ್ ಪ್ರದೇಶವು ಭಯೋತ್ಪಾದಕರ ಅಡಗುದಾಣವೆಂಬ ಕುಖ್ಯಾತಿ ಹೊಂದಿದೆ.
ಹೆಫ್ ಕೀ ಡಾನ್:
ಇಂದು ಮೃತಪಟ್ಟ ವಾಸೀಂ ಶಾ ಕಾಶ್ಮೀರದಲ್ಲಿ ಸಕ್ರಿಯವಾಗಿರುವ ಅಪಾಯಕಾರಿ ಉಗ್ರ ನಾಯಕರಲ್ಲೊಬ್ಬನೆನಿಸಿದ್ದ. 23 ವರ್ಷದ ವಾಸೀಂನನ್ನು ಉಗ್ರ ಸಹಚರರು ಅಬು ಒಸಾಮಾ ಭಾಯ್ ಎಂದೇ ಕರೆಯುತ್ತಾರೆ. ಈಗ ಶೋಪಿಯನ್ ಜಿಲ್ಲೆಯಲ್ಲಿ ಹೆಫ್ ಕೀ ಡಾನ್ ಎಂದೇ ಖ್ಯಾತನಾಗಿದ್ದ. ಶಾಲಾ ದಿನಗಳಿಂದಲೂ ಲಷ್ಕರೆ ಸಂಘಟನೆಯ ಬೆಂಬಲಿಗನಾಗಿದ್ದ ಈತ ಕಾಲೇಜು ಶಿಕ್ಷಣವನ್ನು ಅರ್ಧಕ್ಕೇ ಬಿಟ್ಟು 2014ರಲ್ಲಿ ಉಗ್ರ ಸಂಘಟನೆ ಸೇರಿಕೊಂಡಿದ್ದನೆನ್ನಲಾಗಿದೆ. ದಕ್ಷಿಣ ಕಾಶ್ಮೀರದಲ್ಲಿ ಕೇಂದ್ರದ ವಿರುದ್ಧ ಜನರು ದಂಗೆ ಏಳಲು ಹಾಗೂ ಕಲ್ಲು ತೂರಾಟ ನಡೆಸಲು ಷಡ್ಯಂತ ರೂಪಿಸಿದವರಲ್ಲಿ ವಾಸೀಂ ಶಾ ಪ್ರಮುಖನಾಗಿದ್ದ. ಈತನ ತಲೆಗೆ 10 ಲಕ್ಷ ರೂ ಘೋಷಣೆ ಮಾಡಲಾಗಿತ್ತು.
ಕೆಲ ದಿನಗಳ ಹಿಂದಷ್ಟೇ ಜೈಷೇ ಮೊಹಮ್ಮದ್ ಸಂಘಟನೆಯ ಕಾಶ್ಮೀರ ಕಮಾಂಡರ್-ಇನ್-ಚೀಫ್ ಖಾಲಿದ್'ನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದರು. ಕೆಲ ತಿಂಗಳ ಹಿಂದೆ ಲಷ್ಕರೆ ತೈಬಾದ ಕಮಾಂಡರ್'ಗಳಾದ ಬಷೀರ್ ಅಹ್ಮದ್ ವಾನಿ, ಅಬು ದುಜಾನಾ, ಅಬು ಇಸ್ಮೇಲ್ ಹಾಗೂ ಹಿಜ್ಬುಲ್ ಮುಜಾಹಿದೀನ್'ನ ಕಮಾಂಡರ್ ಸಬ್ಜಾರ್ ಭಟ್ ಅವರನ್ನು ಭದ್ರತಾ ಪಡೆಗಳು ಕೊಂದುಹಾಕಿವೆ.
ಬದುಕಿರುವ ಉಗ್ರರು:
ಕಾಶ್ಮೀರದಲ್ಲಿ ಇನ್ನೂ ಹಲವು ಅಪಾಯಕಾರಿ ಉಗ್ರಗಾಮಿಗಳು ಉಳಿದುಕೊಂಡಿದ್ದಾರೆ. ಈ ಪೈಕಿ ಅಲ್'ಖೈದಾದ ಜಾಕಿರ್ ಮೂಸಾ, ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಮುಖ್ಯ ಕಮಾಂಡರ್ ರಿಯಾಜ್ ನಾಯ್ಕೂ, ಸದ್ದಾಮ್ ಪಾದ್ದೆರ್ ಹಾಗೂ ಲಷ್ಕರೆ ಸಂಘಟನೆಯ ಜೀನತ್-ಉಲ್-ಇಸ್ಲಾಮ್ ಅವರು ಮೋಸ್ಟ್ ವಾಂಟೆಡ್ ಉಗ್ರ ಮುಖಂಡರೆನಿಸಿದ್ದಾರೆ.
