ಲಕ್ನೋ(ಸೆ.20): ಉತ್ತರಪ್ರದೇಶದಲ್ಲಿ ಪಾತಕಿಗಳ 'ಸಫಾಯಿ' ಮುಂದುವರೆದಿದ್ದು, ಇಂದು ಬೆಳಗ್ಗೆ ಪೊಲೀಸರು ಸಮಾಜಕ್ಕೆ ಕಂಟಕವಾಗಿದ್ದ ಮತ್ತಿಬ್ಬರು ಭೂಗತ ಪಾತಕಿಗಳನ್ನು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದ್ದಾರೆ.

ಇಲ್ಲಿನ ಅಲಿಗಡ್ ಬಳಿ ಇಂದು ಬೆಳಗಿನ ಜಾವ ಭೂಗತ ಪಾತಕಿಗಳು ಅಡಗಿದ್ದ ಸ್ಥಳದ ಮೇಲೆ ದಾಳಿ ಮಾಡಿದ ಪೊಲೀಸರು, ಶರಣಾಗುವಂತೆ ಸಲಹೆ ನೀಡಿದರು. ಆದರೆ ಪೊಲೀಸರತ್ತ ಗುಂಡು ಹಾರಿಸಲು ಪ್ರಾರಂಭಿಸಿದ ಪಾತಕಿಗಳು ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಎನ್‌ಕೌಂಟರ್ ಮಾಡಿ ಪಾತಕಿಗಳನ್ನು ಹೊಡೆದುರುಳಿಸಿದ್ದಾರೆ.

ಇನ್ನು ಈ ಎನ್‌ಕೌಂಟರ್‌ಗೂ ಮೊದಲು ಪತ್ರಕರ್ತರನ್ನು ಸ್ಥಳಕ್ಕೆ ಕರೆಸಿಕೊಂಡ ಪೊಲೀಸರು, ಎನ್‌ಕೌಂಟರ್‌ ಕುರಿತು ವಿಡಿಯೋ ಮಾಡಿಸಿದ್ದಾರೆ. ಮುಶ್ತಾಕಿಮ್ ಮತ್ತು ನೌಶಾದ್ ಎಂಬ ಪಾತಕಿಗಳ ಎನ್‌ಕೌಂಟರ್‌ನ್ನು ಪತ್ರಕರ್ತರು ನೇರ ಪ್ರಸಾರ ಮಾಡಿದರು.

ಮುಶ್ತಾಕಿಮ್ ಮತ್ತು ನೌಶಾದ್ ಇಬ್ಬರೂ ಪಾತಕಿಗಳು ಕೊಲೆ ಸೇರಿದಂತೆ ಹಲವು ಅಪರಾಧಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.