ವಾಷಿಂಗ್ಟನ್‌: ದೇಶದ ಪ್ರತಿಯೊಬ್ಬರನ್ನೂ ಬ್ಯಾಂಕಿಂಗ್‌ ವ್ಯವಸ್ಥೆಗೆ ತರಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ‘ಜನಧನ್‌ ಯೋಜನೆ’ ಯಶಸ್ಸಿನ ಹೊರತಾಗಿಯೂ, ದೇಶದಲ್ಲಿ ಇನ್ನೂ 19 ಕೋಟಿ ವಯಸ್ಕ ನಾಗರಿಕರು ಬ್ಯಾಂಕ್‌ ಖಾತೆಯನ್ನೇ ಹೊಂದಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಅಲ್ಲದೆ, ಅತಿಹೆಚ್ಚು ಮಂದಿ ಬ್ಯಾಂಕ್‌ ಖಾತೆ ಹೊಂದಿಲ್ಲದ ರಾಷ್ಟ್ರ ಎಂಬ ಕುಖ್ಯಾತಿ ಪಡೆದ ಚೀನಾ ನಂತರದ ಸ್ಥಾನವನ್ನು ಭಾರತ ಪಡೆದುಕೊಂಡಿದೆ ಎಂದು ವಿಶ್ವ ಬ್ಯಾಂಕ್‌ ವರದಿ ತಿಳಿಸಿದೆ.

2018ರೊಳಗೆ ಹೆಚ್ಚುವರಿಯಾಗಿ 31 ಕೋಟಿ ಭಾರತೀಯರನ್ನು ಬ್ಯಾಂಕಿಂಗ್‌ ವ್ಯವಸ್ಥೆಗೆ ತಂದಿದ್ದಕ್ಕಾಗಿ ಜನಧನ್‌ ಯೋಜನೆ ಬಗ್ಗೆ ವಿಶ್ವಬ್ಯಾಂಕ್‌ ಪ್ರಶಂಸೆ ವ್ಯಕ್ತಪಡಿಸಿದೆಯಾದರೂ, ಇದರಲ್ಲಿ ಕಳೆದ ಒಂದು ವರ್ಷದಿಂದಲೂ ಅರ್ಧಕ್ಕರ್ಧ ಬ್ಯಾಂಕ್‌ ಖಾತೆಗಳು ನಿಷ್ಕ್ರೀಯವಾಗಿವೆ ಎಂದು ಹೇಳಿದೆ. ಐಎಂಎಫ್‌ ಮತ್ತು ವಿಶ್ವ ಬ್ಯಾಂಕ್‌ನ ವಾರ್ಷಿಕ ಸಭೆ ಭಾಗವಾಗಿ ವಿಶ್ವಬ್ಯಾಂಕ್‌ ಬಿಡುಗಡೆ ಮಾಡಿದ ಈ ವರದಿಯಲ್ಲಿ, ವಿಶ್ವದಲ್ಲೇ ಬ್ಯಾಂಕ್‌ ಖಾತೆ ಹೊಂದದವರ ಪೈಕಿ ಭಾರತದ ನಾಗರಿಕರು ಶೇ. 11ರಷ್ಟಿದ್ದಾರೆ ಎಂದು ಉಲ್ಲೇಖಿಸಲಾಗಿದೆ.