ಬೆಂಗಳೂರು (ಜೂ. 23): ಷೇರು ಮಾರುಕಟ್ಟೆಯಿಂದ ಉಂಟಾದ ನಷ್ಟದ ಸಾಲ ತೀರಿಸಲು ಬರೋಬ್ಬರಿ 18 ಕೋಟಿ ರು. ಮೌಲ್ಯದ 500 ವರ್ಷಗಳ ಪುರಾತನ ವಜ್ರಖಚಿತ ನೆಕ್ಲೇಸ್‌ ದರೋಡೆ ಮಾಡಲೆಂದು ಅದರ ಮಾಲೀಕನನ್ನು ಕೊಲೆಗೈದ ಆರು ಅಪರಾಧಿಗಳಿಗೆ ಜೀವಾವಧಿ ಜೈಲು ಶಿಕ್ಷೆಯಾಗಿದೆ.

ರಾಜ್ಯದಲ್ಲಿ 2014ರಲ್ಲಿ ಸಂಚಲನ ಸೃಷ್ಟಿಸಿದ್ದ ಪ್ರಕರಣವಿದು. ವಜ್ರದ ನೆಕ್ಲೇಸ್‌ ಮಾಲೀಕರಾಗಿದ್ದ ನಿವೃತ್ತ ಬ್ಯಾಂಕ್‌ ಮ್ಯಾನೇಜರ್‌ ಉದಯ್‌ ರಾಜ್‌ ಸಿಂಗ್‌ ಅವರನ್ನು ಅಭಿಷೇಕ್‌, ಕಿರಣ್‌, ಸತೀಶ್‌, ದಿಲೀಪ್‌ ಕುಮಾರ್‌, ಶ್ರೀಧರ್‌ ಮತ್ತು ಅಮಿತ್‌ ಕುಮಾರ್‌ ಕೊಲೆಗೈದಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಕೆಲ ದಿನಗಳ ಹಿಂದೆ ಇವರೆಲ್ಲರಿಗೂ ಜೀವಾವಧಿ ಶಿಕ್ಷೆ ನೀಡಿ ಆದೇಶಿಸಿದೆ.

ಇನ್ನು, ಜಾಮೀನಿನ ಮೇಲೆ ಬಿಡುಗಡೆಯಾಗಿ ತಲೆಮರೆಸಿಕೊಂಡಿರುವ ಪ್ರಕರಣದ ಎರಡನೇ ಆರೋಪಿ ಮಧುಸೂದನ್‌ ವಿರುದ್ಧದ ಆರೋಪಗಳ ಕುರಿತು ಪ್ರತ್ಯೇಕವಾಗಿ ವಿಚಾರಣೆ ನಡೆಸಲು ನ್ಯಾಯಾಲಯ ನಿರ್ಧರಿಸಿದೆ.

ಎಲ್ಲಾ ಆರೋಪಿಗಳಿಗೂ ಕ್ರಿಮಿನಲ್‌ ಒಳಸಂಚು ಪ್ರಕರಣದಡಿ 6 ತಿಂಗಳ ಕಠಿಣ ಸಜೆ ಹಾಗೂ 5 ಸಾವಿರ ರು. ದಂಡ, ಸಾಕ್ಷ್ಯನಾಶ ಪ್ರಕರಣದಡಿ 1 ವರ್ಷ ಕಠಿಣ ಸಜೆ ಹಾಗೂ 5 ಸಾವಿರ ರು. ದಂಡ, ದರೋಡೆ ಪ್ರಕರಣದಡಿ 10 ವರ್ಷ ಕಠಿಣ ಸಜೆ ಹಾಗೂ 10 ಸಾವಿರ ರು. ದಂಡ, ಕೊಲೆ ಪ್ರಕರಣದಡಿ ಜೀವಾವಧಿ ಶಿಕ್ಷೆ ಮತ್ತು 1 ಲಕ್ಷ ರು. ದಂಡವನ್ನು ನ್ಯಾಯಾಲಯ ವಿಧಿಸಿದೆ.

ವಿವಿಧ ಪ್ರಕರಣಗಳಡಿ ವಿಧಿಸಿದ ಜೈಲು ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸಬೇಕು ಹಾಗೂ ದಂಡ ಪಾವತಿಸಲು ವಿಫಲವಾದರೆ ಮತ್ತೆ ಗರಿಷ್ಠ ಮೂರು ವರ್ಷ ಜೈಲು ವಾಸ ಅನುಭವಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಖರೀದಿಗೆ ಹೋಗಿ ಮಾಲೀಕನ ಕೊಲೆ:

ಮೈಸೂರಿನ ಮಧುಸೂದನ್‌ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಕಂಪನಿಯೊಂದನ್ನು ತೆರೆದಿದ್ದ. ಆ ಕಂಪನಿಯ ಮೂಲಕ ಕೋಟ್ಯಂತರ ರುಪಾಯಿ ಹೂಡಿಕೆ ಮಾಡಿ ಸಾಲದ ಸುಳಿಯಲ್ಲಿ ಸಿಲುಕಿದ್ದ. ಆತನಿಗೆ ಉದಯ್‌ ರಾಜ್‌ ಸಿಂಗ್‌ ಬಳಿ ವಜ್ರಖಚಿತ ಚಿನ್ನದ ನೆಕ್ಲೇಸ್‌ ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು.

ಆ ನೆಕ್ಲೇಸ್‌ ದೋಚಿ ಮುಂಬೈನಲ್ಲಿ ಮಾರಾಟ ಮಾಡಿದರೆ, ಅದರಿಂದ ಬಂದ ಹಣದಿಂದ ಸಾಲ ತೀರಿಸಿ ಜೀವನದಲ್ಲಿ ಸೆಟ್‌್ಲ ಆಗಬಹುದು ಎಂದು ಮಧು ಯೋಜಿಸಿದ್ದ. ಆ ಬಗ್ಗೆ ಸ್ನೇಹಿತರಾದ ಅಭಿಷೇಕ್‌, ಕಿರಣ್‌, ಸತೀಶ್‌,ದಿಲೀಪ್‌ ಕುಮಾರ್‌, ಶ್ರೀಧರ್‌ ಮತ್ತು ಅಮಿತ್‌ ಕುಮಾರ್‌ಗೆ ತಿಳಿಸಿದ್ದ. ಅದಕ್ಕೆ ಎಲ್ಲರೂ ಒಪ್ಪಿದ್ದರು.

ಯೋಜನೆಯಂತೆ ಉದಯ್‌ ರಾಜ್‌ ಸಿಂಗ್‌ ಅವರನ್ನು ಸಂಪರ್ಕಿಸಿದ್ದ ಮಧುಸೂದನ್‌ ಹಾಗೂ ಅಭಿಷೇಕ್‌, ನಿಮ್ಮ ಬಳಿಯಿರುವ ಡೈಮಂಡ್‌ ನೆಕ್ಲೇಸನ್ನು ಒಳ್ಳೆಯ ಬೆಲೆಗೆ ಮಾರಾಟ ಮಾಡಿಸುವುದಾಗಿ ನಂಬಿಸಿದ್ದರು.

2014 ರ ಮಾಚ್‌ರ್‍ 25ರಂದು ಮಧ್ಯಾಹ್ನ 2.30ಕ್ಕೆ ಅಪರಾಧಿಗಳು ವಿಲ್ಸನ್‌ ಗಾರ್ಡ್‌ನ ಉದಯ್‌ ರಾಜ್‌ ಸಿಂಗ್‌ ಮನೆಗೆ ಹೋಗಿ ನೆಕ್ಲೇಸ್‌ಗೆ 15 ಕೋಟಿ ರು. ನೀಡುವುದಾಗಿ ಮಾತುಕತೆ ನಡೆಸುತ್ತಿದ್ದರು. ಈ ಹಂತದಲ್ಲಿ ಮನೆಯ ಬೀರುವಿನಲ್ಲಿಟ್ಟಿದ್ದ ನೆಕ್ಲೇಸನ್ನು ತಂದು ಉದಯ್‌ ರಾಜ್‌ ಸಿಂಗ್‌ ತೋರಿಸುತ್ತಿದ್ದಂತೆ ಅದನ್ನು ಕಿತ್ತುಕೊಂಡು, ಸಿಂಗ್‌ ಅವರ ಕೈಕಾಲು ಕಟ್ಟಿ, ಬಾಯಿ ಹಿಡಿದುಕೊಂಡು ಸರ್ಜಿಕಲ್‌ ಬ್ಲೇಡ್‌ನಿಂದ ಕತ್ತು ಕೊಯ್ದಿದ್ದರು.

ಘಟನೆ ನೋಡಿದ್ದ ಉದಯ್‌ ಸಿಂಗ್‌ ಪತ್ನಿ ಸುಶೀಲಾ ಜೋರಾಗಿ ಕಿರುಚಾಡುತ್ತಿದ್ದಂತೆಯೇ, ಆಕೆಯ ಕುತ್ತಿಗೆಗೂ ಚಾಕುವಿನಿಂದ ಚುಚ್ಚಿ ಕೋಣೆಗೆ ಎಳೆದೊಯ್ದು ಕೂಡಿಹಾಕಿದ್ದರು. ಸುಶೀಲಾರ ಚೀರಾಟ ಕೇಳಿ ಪಕ್ಕದ ಮನೆಯವರು ನೀಡಿದ್ದ ಮಾಹಿತಿ ಮೇರೆಗೆ ಆಡುಗೋಡಿ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು.

ಅವರು ನೆಕ್ಲೇಸ್‌, ಒಂದು ಡೈಮಂಡ್‌ ಹರಳು, ಸುಶೀಲಾ ಅವರ ಮಾಂಗಲ್ಯ ಸರ, ಚಿನ್ನದ ಕೈ ಬಳೆಗಳು, ಉಂಗುರ ಮತ್ತು ಮನೆಯಲ್ಲಿದ್ದ ಎರಡೂವರೆ ಲಕ್ಷ ನಗದನ್ನು ದರೋಡೆ ಮಾಡಿ ಪರಾರಿಯಾಗುತ್ತಿದ್ದ ಅಭಿಷೇಕ್‌, ಮಧುಸೂದನ್‌ ಹಾಗೂ ಕಿರಣ್‌ನನ್ನು ಬಂಧಿಸಿದ್ದರು. ಮರುದಿನ ಸತೀಶ್‌, ದಿಲೀಪ್‌ ಕುಮಾರ್‌, ಶ್ರೀಧರ್‌ ಹಾಗೂ ಅಮಿತ್‌ ಕುಮಾರ್‌ನನ್ನು ಬಂಧಿಸಿದ್ದರು.

ಅನಾಥಾಶ್ರಮ ಆರಂಭಿಸುವ ಆಸೆ:

ಉದಯ್‌ ರಾಜ್‌ ಸಿಂಗ್‌ಗೆ ಅವರ ತಾಯಿ 500 ವರ್ಷಗಳ ಪುರಾತನ ವಜ್ರಖಚಿತ ಚಿನ್ನದ ನೆಕ್ಲೇಸ್‌ ಕೊಟ್ಟಿದ್ದರು. ಅದು ಅವರ ಪಿತ್ರಾರ್ಜಿತ ಆಸ್ತಿಯಾಗಿತ್ತು. 2014ರ ವೇಳೆಗೆ ಆ ನೆಕ್ಲೇಸ್‌ 18 ಕೋಟಿ ರು. ಬೆಲೆಬಾಳುತ್ತಿತ್ತು. ತಮಗೆ ಮಕ್ಕಳಿಲ್ಲದ ಕಾರಣ ನೆಕ್ಲೇಸ್‌ ಅನ್ನು ಮಾರಾಟ ಮಾಡಿ, ಬಂದ ಹಣದಿಂದ ಅನಾಥಾಶ್ರಮ ಹಾಗೂ ಚೌಲ್ಟಿ್ರ ಆರಂಭಿಸಲು ಉದಯ ಸಿಂಗ್‌ ದಂಪತಿ ತೀರ್ಮಾನಿಸಿತ್ತು. ಅದೇ ವಿಚಾರವನ್ನು ಕೆಲವರಿಗೆ ತಿಳಿಸಿದ್ದರು. ನೆಕ್ಲೇಸನ್ನು ಬ್ಯಾಂಕ್‌ ಲಾಕರ್‌ನಲ್ಲಿ ಇಡುತ್ತಿದ್ದ ದಂಪತಿ, ಅದನ್ನು ಖರೀದಿಸಲು ಬಂದ ಜನರಿಗೆ ತೋರಿಸಲು ಬ್ಯಾಂಕ್‌ ಲಾಕರ್‌ನಿಂದ ತರುತ್ತಿದ್ದರು. ಈ ಕುರಿತು ಖುದ್ದು ಸುಶೀಲಾ ಕೋರ್ಟ್‌ನಲ್ಲಿ ಸಾಕ್ಷ್ಯ ನುಡಿದಿದ್ದಾರೆ.

ಸಂಗ್ರಾಂ ಸಿಂಗ್‌ ಸಂಬಂಧಿ

ಉದಯ್‌ ರಾಜ್‌ ಸಿಂಗ್‌ ಅವರು ನಿವೃತ್ತ ಎಸಿಪಿ ಸಂಗ್ರಾಮ್‌ ಸಿಂಗ್‌ರ ಸಂಬಂಧಿ. 2016ರಲ್ಲಿ ಬೆಂಗಳೂರಿನ ಗ್ಯಾಲೆಕ್ಸಿ ಚಿತ್ರಮಂದಿರದ ಬಳಿ ನೆಕ್ಲೇಸನ್ನು ಖರೀದಿಸುವ ನೆಪದಲ್ಲಿ ಉದಯ್‌ ರಾಜ್‌ ಸಿಂಗ್‌ ಜೊತೆಗೆ ಚರ್ಚಿಸುತ್ತಿದ್ದ ಇಬ್ಬರು ದುಷ್ಕರ್ಮಿಗಳನ್ನು ಅಂದಿನ ಹಲಸೂರ್‌ ಗೇಟ್‌ ಎಸಿಪಿ ಬಿ.ಬಿ. ಅಶೋಕ್‌ ಕುಮಾರ್‌ ಬಂದಿದ್ದರು.

ಈ ವೇಳೆ ನೆಕ್ಲೇಸನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಸೂಕ್ತವಲ್ಲ. ಬ್ಯಾಂಕ್‌ ಲಾಕರ್‌ನಲ್ಲಿಡಿ ಅಥವಾ ಚಿನ್ನಾಭರಣ ಮಳಿಗೆಗೆ ಮಾರಾಟ ಮಾಡಿ ಎಂದು ಸಂಗ್ರಾಮ್‌ ಸಿಂಗ್‌ ಹಾಗೂ ಅಶೋಕ್‌ ಕುಮಾರ್‌ ಅವರು ಉದಯ್‌ ಸಿಂಗ್‌ಗೆ ಸಲಹೆ ನೀಡಿದ್ದರು ಎನ್ನಲಾಗಿದೆ.

- ವೆಂಕಟೇಶ್ವರ ಕಲಿಪಿ