ಮನೀಲಾ(ಜ.27): ದಕ್ಷಿಣ ಫಿಲಿಪೈನ್ಸ್ ನಲ್ಲಿ ರೋಮನ್ ಕ್ಯಾಥೋಲಿಕ್ ಚರ್ಚ್ ಮೇಲೆ ಭಯೋತ್ಪಾದಕರು ಬಾಂಬ್ ದಾಳಿ ನಡೆಸಿದ್ದು, ದಾಳಿಯಲ್ಲಿ ಕನಿಷ್ಠ 17 ಮಂದಿ ಮೃತಪಟ್ಟು 42 ಜನ ಗಾಯಗೊಂಡಿದ್ದಾರೆ.

ರೋಮನ್ ಕ್ಯಾಥೋಲಿಕ್ ಕ್ಯಾಥೆಡ್ರಲ್ ಮೇಲೆ ದಾಳಿ ನಡೆದಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚುವ ಸಾಧ್ಯತೆ ಇದೆ ಎಂದು ಪೋಲೀಸರು ಹೇಳಿದ್ದಾರೆ.

ದಾಳಿಯಲ್ಲಿ ಐವರು ಸೈನಿಕರು, 12 ನಾಗರಿಕರು ಸಾವಿಗೀಡಾಗಿದ್ದು, 42 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸಶಸ್ತ್ರ ಪಡೆಗಳ ವಕ್ತಾರ ಎಡ್ವರ್ಡ್ ಅರೆವಾಲೋ ಡಿಝಡ್ ಮಾಹಿತಿ ನೀಡಿದ್ದಾರೆ. 

ಜೊಲೊ ಕ್ಯಾಥಡ್ರೆಲ್ ಬಳಿ ಮೊದಲ ಬಾಂಬ್ ಸ್ಫೋಟಗೊಂಡಿದ್ದರೆ ಎರಡನೇ ಬಾಂಬ್ ಪ್ರಾರ್ಥನಾ ಮಂದಿರದ ಒಳಗೆ ಸಿಡಿದಿದೆ. ಅಬು ಸಯಯಾಫ್ ಭಯೋತ್ಪಾದನಾ ಗುಂಪು ಈ ದಾಳಿ ನಡೆಸಿದೆ ಎಂದು ಶಂಕಿಸಲಾಗಿದೆ.