ಮುಜಫ್ಫರ್‌ಪುರ್[ಜೂ.19]: ರಾಜ್ಯದ ವಿವಿಧ ಭಾಗಗಳಲ್ಲಿ ಮೆದುಳಿನ ಉರಿಯೂತ ಸಮಸ್ಯೆಗೆ 152 ಮಕ್ಕಳು ಸಾವನ್ನಪ್ಪಿದ ಹೊರತಾಗಿಯೂ ಘಟನಾ ಸ್ಥಳಗಳಿಗೆ ಭೇಟಿ ನೀಡದೆ, ರಾಜಧಾನಿಯಲ್ಲಿಯೇ ಉಳಿದು ಟೀಕೆಗೆ ಗುರಿಯಾಗಿದ್ದ ಬಿಹಾರದ ಸಿಎಂ ನಿತೀಶ್ ಕುಮಾರ್ ಕೊನೆಗೂ ಎಚ್ಚೆತ್ತು ಕೊಂಡಿದ್ದಾರೆ.

ಮಂಗಳವಾರ ಡಿಸಿಎಂ ಸುಶೀಲ್ ಕುಮಾರ್ ಮೋದಿ, ಮತ್ತು ಆರೋಗ್ಯ ಸಚಿ ವರ ಜೊತೆಗೂಡಿದ ಸಿಎಂ, ಭಾರೀ ಪ್ರಮಾಣದಲ್ಲಿ ಮಕ್ಕಳ ಸಾವು ಸಂಭವಿಸಿದ ಮುಜಫ್ಫರ್‌ಪುರದ ಎಸ್‌ಕೆಎಂಸಿಎಚ್ ಮತ್ತು ಖಾಸಗಿ ವಲಯದ ಕೇಜ್ರಿವಾಲ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಆಸ್ಪತ್ರೆ ಮುಂಭಾಗದಲ್ಲಿ ಮಕ್ಕಳ ಪೋಷಕರು, ಗೋ ಬ್ಯಾಕ್ ಸಿಎಂ ನಿತೀಶ್ ಎಂದು ಘೋಷಣೆ ಕೂಗಿದ ಘಟನೆಯೂ ನಡೆಯಿತು.

ಆದಾಗ್ಯೂ, ಮಂಗಳವಾರ ಬೆಳಗ್ಗೆ ಎಸ್ ಕೆಎಂಸಿಎಚ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಸಿಎಂ ನಿತೀಶ್ ಕುಮಾರ್ ಬಳಿಕ, ಮಕ್ಕಳನ್ನು ದಾಖಲಿ ಸಿರುವ ವಾರ್ಡ್‌ಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಜೊತೆಗೆ ಎಲ್ಲಾ ಗ್ರಾಮೀಣ ಆರೋಗ್ಯ ಕೇಂದ್ರಗಳಲ್ಲೂ ಮಕ್ಕಳಿಗೆ ಚಿಕಿತ್ಸೆ ನೀಡಲು ಅಗತ್ಯವಾದ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.