ಉಡುಪಿ(ಅ.25): ಹಳ್ಳಿಯ ಬಡ ಜನರ ಅನುಕೂಲಕ್ಕೆ ಎಲ್`ಐಸಿ ಜೀವನ ಮಧುರ ಪಾಲಿಸಿಯನ್ನು 2005ರಲ್ಲಿ ಬಿಡುಗಡೆ ಮಾಡಿತ್ತು. ಈ ಯೋಜನೆಯಲ್ಲಿ ಎನ್`ಜಿಒಗಳು ಏಜೆಂಟರಾಗಿ ಕಾರ್ಯನಿರ್ವಹಿಸುತ್ತಾರೆ, ಅವರು ಸಬ್ ಏಜೆಂಟ್ ಗಳನ್ನು ನೇಮಿಸಿ ಗ್ರಾಮೀಣ ಜನರಿಂದ ಪ್ರೀಮಿಯಂ ಹಣ ಸಂಗ್ರಹಿಸುತ್ತಾರೆ. ಅಂಗನವಾಡಿ ಕಾರ್ಯಕರ್ತೆಯರು, ಗೃಹಿಣಿಯರೇ ಹೆಚ್ಚಾಗಿ ಸಬ್ ಏಜೆಂಟರಾಗಿ ಕಾರ್ಯನಿರ್ವಹಿಸಿದ್ದಾರೆ. ಎಲ್ಲೈಸಿಯ ಪರವಾಗಿ ಪ್ರೀಮಿಯಂ ಹಣ ಸಂಗ್ರಹಿಸಿದ ಬಡ ಅಂಗನವಾಡಿ ಕಾರ್ಯಕರ್ತೆಯರು ನಿಯತ್ತಾಗಿ ಹಣವನ್ನು ಆಯಾ ಜಿಲ್ಲೆಗಳ ವಿಮಾ ಪ್ರತಿನಿಧಿ ಎನ್.ಜಿ.ಒ ಗಳಿಗೆ ಹಸ್ತಾಂತರಿಸಿದ್ದರು. ಆದರೆ, ಉಡುಪಿ ವಿಭಾಗಕ್ಕೆ ಸೇರಿದ ಮಧ್ಯವರ್ತಿ ಸಂಸ್ಥೆಗಳು ಪ್ರೀಮಿಯಂ ಹಣವನ್ನು ಲಪಟಾಯಿಸಿರುವುದು ಬೆಳಕಿಗೆ ಬಂದಿದೆ.

ಉಡುಪಿ ವಿಭಾಗದ 57 ಸಾವಿರಕ್ಕೂ ಅಧಿಕ ಪಾಲಿಸಿಗಳು ಲ್ಯಾಪ್ಸ್ ಆದರೂ ಎಲ್ಲೈಸಿ ತನಗೂ ಈ ಹಗರಣಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದೆ. ಇದರಿಂದ ಎಲ್ಲೈಸಿ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಸಬ್ ಏಜೆಂಟರುಗಳು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಟಾನದ ಮೊರೆ ಹೋಗಿದ್ದು, ತಂಡದ ಮುಖ್ಯಸ್ಥ ರವೀಂದ್ರನಾಥ್ ಶ್ಯಾನುಭೋಗ್ ಸಂತ್ರಸ್ಥರ ಬೆಂಬಲಕ್ಕೆ ನಿಂತಿದ್ದಾರೆ. ಉಡುಪಿ ವಿಭಾಗದ ಸುಮಾರು 200 ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ವಂಚನೆ ನಡೆದಿದೆ.

ಬಡ ಜನರಿಂದ ವರ್ಷಕ್ಕೆ ಕೇವಲ 600 ರೂಪಾಯಿಯಂತೆ ಪ್ರೀಮಿಯಂ ಹಣ ಸಂಗ್ರಹಿಸುವ ಸಣ್ಣ ಯೋಜನೆಯಿದು. ಇಷ್ಟಾಗಿಯೂ ವಂಚನೆಯ ಪ್ರಮಾಣ ಅಂದಾಜು 17.5 ಕೋಟಿ ಎಂದು ಅಂದಾಜಿಸಿಲಾಗಿದೆ. ಇದು ಕೇವಲ ಉಡುಪಿ ವಿಭಾಗದ ಲೆಕ್ಕಾಚಾರ ರಾಜ್ಯ ರಾಷ್ಟದ ಇತರ ಭಾಗಗಳಲ್ಲೂ ಇದೇ ಮಾದರಿಯ ಮೋಸ ನಡೆದಿದೆ. ಇಷ್ಟೆಲ್ಲಾ ನಡೆದರೂ ಮಧ್ಯವರ್ತಿ ಎನ್.ಜಿ.ಒ ಗಳ ಮೇಲೆ ಎಲ್ಲೈಸಿ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.  

ಎಲ್ಲೈಸಿ ಅಧಿಕಾರಿಗಳು ಶಾಮೀಲಾಗದೆ ಈ ವಂಚನೆ ನಡೆಯಲು ಸಾಧ್ಯವಿಲ್ಲ. ಅತ್ಯಂತ ವಿಶ್ವಾಸಾರ್ಹ ಸಂಸ್ಥೆಯೊಂದರ ಹೆಸರಲ್ಲಿ ಎನ್ಜಿಒಗಳು ನಡೆಸಿದ ಈ ಹಗರಣದ ಬಗ್ಗೆ ಸೂಕ್ತ ತನಿಖೆ ನಡೆದು ಜನರಿಗೆ ನ್ಯಾಯ ಸಿಗಬೇಕಾಗಿದೆ.