ಹೆದ್ದಾರಿ ಡಿ-ನೋಟಿಫಿಕೇಷನ್ ಕುರಿತು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ೪೫೦ ಮದ್ಯದಂಗಡಿ ಹಾಗೂ ಬಾರ್‌ಗಳು ಸೇರಿ ರಾಜ್ಯದ ನಗರ ಪ್ರದೇಶಗಳಲ್ಲಿ ಬಂದ್ ಆಗಿದ್ದ ಸುಮಾರು 1600 ಮದ್ಯದಂಗಡಿಗಳು ಪುನಾರಂಭವಾಗುವ ಸಾಧ್ಯತೆ ಇದೆ.
ಬೆಂಗಳೂರು(ಜು.12): ಹೆದ್ದಾರಿ ಡಿ-ನೋಟಿಫಿಕೇಷನ್ ಕುರಿತು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ೪೫೦ ಮದ್ಯದಂಗಡಿ ಹಾಗೂ ಬಾರ್ಗಳು ಸೇರಿ ರಾಜ್ಯದ ನಗರ ಪ್ರದೇಶಗಳಲ್ಲಿ ಬಂದ್ ಆಗಿದ್ದ ಸುಮಾರು 1600 ಮದ್ಯದಂಗಡಿಗಳು ಪುನಾರಂಭವಾಗುವ ಸಾಧ್ಯತೆ ಇದೆ.
ಹೆದ್ದಾರಿಯಿಂದ 500 ಮೀ. ವ್ಯಾಪ್ತಿಯ ಎಲ್ಲಾ ಮದ್ಯದಂಗಡಿಗಳನ್ನು ನಿಷೇಧಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದ್ದರಿಂದ ಎಲ್ಲಾ ರಾಜ್ಯಗಳು ಹೆದ್ದಾರಿ ಆಸುಪಾಸಿನ ಮದ್ಯದಂಗಡಿಗಳನ್ನು ಬಂದ್ ಮಾಡಿಸಿವೆ. ಈ ತೀರ್ಪಿನಿಂದ ತಪ್ಪಿಸಿಕೊಳ್ಳಲು ಕರ್ನಾಟಕ ಸೇರಿ ವಿವಿಧ ರಾಜ್ಯಗಳು ನಗರ, ಪಟ್ಟಣಗಳ ವ್ಯಾಪ್ತಿಯ ಹೆದ್ದಾರಿಗಳನ್ನು ಜಿಲ್ಲಾ ಹೆದ್ದಾರಿಗಳಾಗಿ ಡಿನೋಟಿಫೈ ಮಾಡಿವೆ. ಈ ವಿಚಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಈ ಬಗ್ಗೆ ತೀರ್ಪು ನೀಡಿರುವ ನ್ಯಾಯಾಲಯ ಇದರಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ. ಹಾಗೆಯೇ ನಗರ ವ್ಯಾಪ್ತಿಯ ಹೆದ್ದಾರಿಗಳನ್ನು ಡಿನೋಟಿಫೈ ತಪ್ಪಲ್ಲ ಎಂದೂ ಹೇಳಿದೆ.
ಇದರೊಂದಿಗೆ ನಗರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಗಳನ್ನು ಡಿನೋಟಿಫೈ ಮಾಡಿರುವ ಸರ್ಕಾರದ ಪ್ರಯತ್ನ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ನ ಬಾರ್ ಬಂದ್ ಆದೇಶದಿಂದ ತಪ್ಪಿಸಿಕೊಳ್ಳಲು ರಾಜ್ಯ ಸರ್ಕಾರ ಈಗಾಗಲೇ ನಗರ ಪ್ರದೇಶದಲ್ಲಿ ಬರುವ ಸುಮಾರು 858 ಕಿ.ಮೀ. ರಾಷ್ಟ್ರೀಯ ಹೆದ್ದಾರಿಯನ್ನು ಡಿನೋಟಿಫೈ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಇದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡುತ್ತಿದ್ದಂತೆ ರಾಜ್ಯದಲ್ಲಿ 1600 ಕ್ಕೂ ಹೆಚ್ಚಿನ ವಿವಿಧ ರೀತಿಯ ಮದ್ಯದಂಗಡಿಗಳು ಪುನಾರಂಭವಾಗಲಿವೆ. ಆದರೆ ನಗರ, ಪಟ್ಟಣಗಳ ವ್ಯಾಪ್ತಿಯಿಂದ ಹೊರಗಿರುವ ಹೆದ್ದಾರಿಗಳಿಂದ ಮದ್ಯದಂಗಡಿಗಳನ್ನು 500 ಮೀಟರ್ ಹೊರಗಿಡಬೇಕಾಗುತ್ತದೆ. ಈ ಮಾದರಿಯ ಸುಮಾರು 1000ಕ್ಕೂ ಹೆಚ್ಚಿನ ಮದ್ಯದಂಗಡಿಗಳು ಹೆದ್ದಾರಿಯಿಂದ ಹಿಂದೆ ಸರಿಸಬೇಕಾಗುತ್ತದೆ. ಅಂದರೆ ನಗರ ವ್ಯಾಪ್ತಿಯಿಂದ ಹೊರಗಿದ್ದು, ಮುಚ್ಚಿ ಹೋಗಿದ್ದ ಮದ್ಯದಂಗಡಿಗಳು ಕೊಂಚ ದೂರದಲ್ಲಿ ಪುನಾರಂಭವಾಗಲಿವೆ.
₹70 ಕೋಟಿ ನಷ್ಟವಾಗಿದೆ:
ರಾಜ್ಯದಲ್ಲಿ ವಿವಿಧ ನಮೂನೆಯ 10,075 ಮದ್ಯದಂಗಡಿಗಳಿದ್ದು, ಅದರಲ್ಲಿ ಸುಪ್ರೀಂಕೋರ್ಟ್ ಆದೇಶದಂತೆ ಜೂನ್ ೩೧ರಿಂದ ೩೦೧೫ ಮದ್ಯ ಅಂಗಡಿಗಳನ್ನು ಮುಚ್ಚಲಾಗಿದೆ. ಅಂದರೆ ಸುಮಾರು ೧೧ ದಿನಗಳಿಂದ ಮದ್ಯದಂಗಡಿಗಳು ಬಂದ್ ಆಗಿವೆ. ಎಲ್ಲಾ ಮದ್ಯದಂಗಡಿಗಳಿಂದ ದಿನಕ್ಕೆ ₹15 ಕೋಟಿ ಆದಾಯ ಲಭಿಸುತ್ತಿದ್ದು, ಮುಚ್ಚಿರುವ ಭಾಗಶಃ ಮದ್ಯದಂಗಡಿಗಳಿಂದ ಇಲ್ಲಿಯವರೆಗೆ ಸುಮಾರು ₹70 ಕೋಟಿವರೆಗೂ ಆದಾಯ ಕೊರತೆ ಆಗಿದೆ. ಹೆದ್ದಾರಿ ಡಿನೋಟಿಫಿಕೇಷನ್ ಕುರಿತು ಕೇಂದ್ರ ಸರ್ಕಾರ ನಿರ್ಧಾರ ಪ್ರಕಟಿಸುವವರೆಗೂ ಆದಾಯಕ್ಕೆ ಹೊಡೆತ ಬೀಳಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ತಂದು ತ್ವರಿತವಾಗಿ ಡಿನೋಟಿಫೈ ಮಾಡಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
