ಬೆಂಗಳೂರು :  ವಿಧಾನಸಭೆ ಮತ್ತು ವಿಧಾನಪರಿಷತ್‌ನ 159 ಸದಸ್ಯರು ಜೂ.30ಕ್ಕೆ ಗಡುವು ಮೀರಿದರೂ ಲೋಕಾಯುಕ್ತ ಸಂಸ್ಥೆಗೆ 2018 - -19ನೇ ಸಾಲಿನ ಆಸ್ತಿ ವಿವರ ಸಲ್ಲಿಕೆ ಮಾಡಿಲ್ಲ. ವಿಧಾನಸಭೆಯ 113 ಸದಸ್ಯರು ಮತ್ತು ವಿಧಾನಪರಿಷತ್‌ 46 ಸದಸ್ಯರು ಆಸ್ತಿ ವಿವರ ಸಲ್ಲಿಸದ ಪಟ್ಟಿಯಲ್ಲಿದ್ದಾರೆ.

ವಿಧಾನಸಭೆ ಮತ್ತು ವಿಧಾನಪರಿಷತ್‌ಗೆ ಹೊಸ ಸದಸ್ಯರು ಆಯ್ಕೆಯಾಗಿ ಬಂದಿರುವ ಹಿನ್ನೆಲೆಯಲ್ಲಿ ಬಹುತೇಕರು ಸಲ್ಲಿಕೆ ಮಾಡಿಲ್ಲ ಎನ್ನಲಾಗಿದೆ. ವಿಧಾನಸಭೆಯ 224 ಸದಸ್ಯರು ಪೈಕಿ 111 ಮತ್ತು ವಿಧಾನಪರಿಷತ್‌ನ 75 ಸದಸ್ಯರಲ್ಲಿ 29 ಸದಸ್ಯರು ಮಾತ್ರ ಆಸ್ತಿ ವಿವರ ಸಲ್ಲಿಕೆ ಮಾಡಿದ್ದಾರೆ. ಆಸ್ತಿ ವಿವರ ಸಲ್ಲಿಕೆ ಮಾಡದ ಸದಸ್ಯರಿಗೆ ಸೋಮವಾರದಿಂದ ಲೋಕಾಯುಕ್ತ ಸಂಸ್ಥೆಯು ನೊಟೀಸ್‌ ಜಾರಿಗೊಳಿಸಲಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಜೂ.30 ಆಸ್ತಿ ವಿವರ ಸಲ್ಲಿಕೆಗೆ ಕೊನೆ ದಿನವಾದರೂ ಎರಡು ತಿಂಗಳ ಕಾಲ ಹೆಚ್ಚುವರಿ ಕಾಲಾವಕಾಶ ನೀಡಲಾಗುತ್ತದೆ. ಆ.31ರವರೆಗೆ ಆಸ್ತಿ ವಿವರ ಸಲ್ಲಿಕೆ ಮಾಡಬಹುದಾಗಿದೆ. ಹೀಗಾಗಿ ಆಸ್ತಿ ವಿವರ ಸಲ್ಲಿಕೆ ಮಾಡದ ಸದಸ್ಯರ ಹೆಸರನ್ನು ಬಿಡುಗಡೆಗೊಳಿಸಲು ಲೋಕಾಯುಕ್ತ ಸಂಸ್ಥೆಯು ನಿರಾಕರಿಸಿದೆ. ಆ.31ರ ನಂತರವೂ ಸಲ್ಲಿಕೆ ಮಾಡದಿದ್ದರೆ ಲೋಕಾಯುಕ್ತ ಸಂಸ್ಥೆಯು ರಾಜ್ಯಪಾಲರಿಗೆ ಸದಸ್ಯರ ಹೆಸರನ್ನು ರವಾನಿಸಲಿದೆ. ಅಲ್ಲದೇ, ಮಾಧ್ಯಮಗಳ ಮೂಲಕ ಆಸ್ತಿ ವಿವರ ಮಾಹಿತಿ ನೀಡಿದ ಶಾಸಕರ ಹೆಸರನ್ನು ಬಹಿರಂಗಪಡಿಸಲಾಗುತ್ತದೆ.

ಲೋಕಾಯುಕ್ತ ಕಾಯ್ದೆಯ ಸೆಕ್ಷನ್‌ 22(1)(2)ರ ಪ್ರಕಾರ ಜೂ.30ರೊಳಗೆ ಆಯಾ ಆರ್ಥಿಕ ಸಾಲಿನ ಆಸ್ತಿವಿವರನ್ನು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಬೇಕು. ಅಲ್ಲದೇ, ಎರಡು ತಿಂಗಳ ಕಾಲ ಹೆಚ್ಚುವರಿ ಅವಕಾಶ ನೀಡಲಾಗುತ್ತದೆ. ಹೆಚ್ಚುವರಿ ಅವಧಿಯಲ್ಲಿ ಸಲ್ಲಿಸದಿರುವ ಶಾಸಕರ ಬಗ್ಗೆ ಲೋಕಾಯುಕ್ತ ರಾಜ್ಯಪಾಲರಿಗೆ ವರದಿ ನೀಡಲಿದ್ದು, ಸಂಬಂಧಪಟ್ಟ ಶಾಸಕರ ವೇತನ, ಭತ್ಯೆ ಸ್ಥಗಿತಗೊಳಿಸಬೇಕು ಎಂದು ಶಿಫಾರಸು ಮಾಡಲು ಅಧಿಕಾರ ಇದೆ.