ಬೆಂಗಳೂರು :  ರಾಜ್ಯಾದ್ಯಂತ ಹಿಂಗಾರು ಹಂಗಾಮಿನಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದ್ದು, ರಾಜ್ಯದ 227 ತಾಲೂಕುಗಳ ಪೈಕಿ 156 ತಾಲೂಕುಗಳಲ್ಲಿ ಬರ ತಾಂಡವವಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇಷ್ಟೂತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದೆ ಎಂದು ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದ್ದಾರೆ.

ಬುಧವಾರ ಬೆಳಗ್ಗೆ ವಿಧಾನಸೌಧದಲ್ಲಿ ಬರ ನಿರ್ವಹಣೆ ಕುರಿತ ಅಧಿಕಾರಿಗಳ ಸಭೆ ನಡೆಸಿ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಮುಂಗಾರು ಅವಧಿಯಲ್ಲಿ 100 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಇದೀಗ ಸಚಿವ ಸಂಪುಟ ಉಪಸಮಿತಿಯ ಶಿಫಾರಸಿನ ಮೇರೆಗೆ ತೀವ್ರ ಮಳೆ ಕೊರತೆ ಎದುರಿಸುತ್ತಿರುವ 156 ತಾಲೂಕುಗಳನ್ನು ಹಿಂಗಾರು ಹಂಗಾಮಿನ ಬರಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದೆ. ಇಂತಹ ತಾಲೂಕುಗಳಿಗೆ 1 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗುವುದು. ಈಗಾಗಲೇ ಮೊದಲ ಹಂತದಲ್ಲಿ 50 ಲಕ್ಷ ರು. ಬಿಡುಗಡೆ ಮಾಡಿದ್ದು, ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಗುಳೆ ಹೋಗುವವರನ್ನು ತಡೆಯಲು ಉದ್ಯೋಗ ಸೃಷ್ಟಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಹಿಂಗಾರು ಹಂಗಾಮಿನಲ್ಲಿ ಅಕ್ಟೋಬರ್‌ 1ರಿಂದ ಡಿ.26ರವರೆಗೆ ರಾಜ್ಯದಲ್ಲಿ ಶೇ.49ರಷ್ಟುಮಳೆ ಕೊರತೆ ಉಂಟಾಗಿದೆ. ರಾಜ್ಯದಲ್ಲಿ ಬೆಳೆಯಲಾಗುವ ಹಿಂಗಾರು ಬೆಳೆಗಳ (ಜೋಳ, ಕಡಲೆ, ಗೋಧಿ ಹಾಗೂ ಇತರೆ) ಪೈಕಿ ಶೇ.90ರಷ್ಟುಬಿತ್ತನೆ ಆಗುವ ಉತ್ತರ ಕರ್ನಾಟಕದ ಒಳನಾಡಿನಲ್ಲಿ ಶೇ.66 ರಷ್ಟುಮಳೆ ಕೊರತೆ ಉಂಟಾಗಿದೆ. ಹೀಗಾಗಿ 2016ರ ಬರ ನಿರ್ವಹಣೆ ಮಾರ್ಗಸೂಚಿ ಪ್ರಕಾರ 156 ಬರಪೀಡಿತ ತಾಲೂಕು ಗುರುತಿಸಲಾಗಿದೆ. ತಾಲೂಕುಗಳಲ್ಲಿ ಬೆಳೆ ಹಾನಿ ಹಾಗೂ ಕ್ಷೇತ್ರ ತಪಾಸಣೆ ಕೈಗೊಂಡು ತೀವ್ರ ಹಾಗೂ ಸಾಧಾರಣ ಬರಪೀಡಿತ ಪ್ರದೇಶ ಎಂದು ಪ್ರತ್ಯೇಕಿಸಲಾಗಿದೆ ಎಂದು ಹೇಳಿದರು.

ಬರ ಪರಿಹಾರಕ್ಕೆ ಕ್ರಮ:

ಬರದ ತಾಲೂಕುಗಳಿಗೆ 1 ಕೋಟಿ ರು. ಅನುದಾನ ನೀಡಿ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಈಗಾಗಲೇ ಈ ಪೈಕಿ 50 ಲಕ್ಷ ರು. ಬಿಡುಗಡೆ ಮಾಡಲಾಗಿದೆ. ಮೇವು ಖರೀದಿಗೆ ಟೆಂಡರ್‌ ಕರೆಯಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜತೆಗೆ ಜನರು ಗುಳೆ ಹೋಗುವುದನ್ನು ತಪ್ಪಿಸಲು 8.5 ಕೋಟಿ ಉದ್ಯೋಗ ಸೃಜನೆಗೆ ಕ್ರಮ ವಹಿಸಲಾಗಿದೆ. ಪ್ರತಿಯೊಬ್ಬರಿಗೂ 100 ದಿನದ ಬದಲಿಗೆ 150 ಮಾನವ ದಿನಗಳಷ್ಟುಉದ್ಯೋಗ ಖಾತ್ರಿ ನೀಡಲು ಆದೇಶಿಸಲಾಗಿದೆ. ಬರ ತಾಲೂಕಿನಲ್ಲಿ ಅನಿಮಲ್‌ ಕಿಟ್‌ ಖರೀದಿಗೆ 10 ಕೋಟಿ ರು. ಬಿಡುಗಡೆ ಮಾಡಲಾಗಿದೆ.  283 ಗ್ರಾಮಗಳಿಗೆ 574 ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ ಎಂದು ಆರ್‌.ವಿ. ದೇಶಪಾಂಡೆ ಹೇಳಿದರು.

ಇದಲ್ಲದೆ, ಬೆಳೆ ನಷ್ಟಕ್ಕೆ ಪರಿಹಾರ ನೀಡುವ ಸಲುವಾಗಿ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಬೆಳೆ ನಷ್ಟಕುರಿತು ಜಂಟಿ ಸಮೀಕ್ಷೆ ನಡೆಸಲು ಎಲ್ಲಾ ಜಿಲ್ಲಾಧಿಕಾರಿಗಳಿಗೂ ಸೂಚಿಸಲಾಗಿದೆ.

ಶೇ.33ಕ್ಕಿಂತ ಹೆಚ್ಚು ಬೆಳೆಹಾನಿಯಾದರೆ ಪರಿಹಾರ:

ಮಳೆ ಕೊರತೆಯಿಂದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನಷ್ಟವಾಗಲಿದ್ದು, ಸಾಧಾರಣ ಬರಪೀಡಿತ ತಾಲೂಕುಗಳ ರೈತರಿಗೆ ಯಾವ ಪರಿಹಾರವೂ ಸಿಗುವುದಿಲ್ಲ. ಬದಲಿಗೆ ಕುಡಿಯುವ ನೀರು ಮತ್ತಿತರ ಬಳಕೆಗೆ 1 ಕೋಟಿ ರು. ಒದಗಿಸಲಾಗುವುದು. ಶೇ.33ಕ್ಕಿಂತ ಹೆಚ್ಚು ಬೆಳೆ ಹಾನಿ ಆಗಿರುವ ತಾಲೂಕುಗಳಿಗೆ ಮಾತ್ರ ಪರಿಹಾರ ಕಲ್ಪಿಸಲಾಗುವುದು. ಇಂತಹ ತಾಲೂಕುಗಳ ಬೆಳೆಗಳ ಮಾಹಿತಿ ಸಂಗ್ರಹಿಸಲಾಗಿದೆ. ರಾಜ್ಯದಲ್ಲಿ ಹಿಂಗಾರು ಹಂಗಾಮಿನಲ್ಲಿ 31.80 ಲಕ್ಷ ಹೆಕ್ಟೇರ್‌ ಪ್ರದೇಶ ಬಿತ್ತನೆಯಾಗಬೇಕಿದ್ದು, ಡಿ.21ರವರೆಗೆ 26.03 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ (ಶೇ.81.89) ಬಿತ್ತನೆಯಾಗಿದೆ. ಕಳೆದ ಸಾಲಿನ 29.09 ಲಕ್ಷ ಹೆಕ್ಟೇರ್‌ಗೆ ಹೋಲಿಸಿದರೆ ಈ ಬಾರಿ ಇನ್ನೂ ಕಡಿಮೆಯಾಗಿದೆ. ಬಿತ್ತನೆಯಾಗಿರುವ ಬೆಳೆಗಳ ಹಾನಿಗೂ ಪರಿಹಾರ ಒದಗಿಸಲಾಗುವುದು ಎಂದರು.

ಪ್ರವಾಹ ಪೀಡಿತರಿಗೆ ಪರಿಹಾರ:

ಪ್ರವಾಹ ಪರಿಸ್ಥಿತಿಯಿಂದಾಗಿ ಉಂಟಾಗಿರುವ ಹಾನಿಗೆ ಕೇಂದ್ರ ಸರ್ಕಾರವು 560 ಕೋಟಿ ರು. ಪರಿಹಾರ ಒದಗಿಸಿದೆ. ಈ ಹಣದಿಂದ ಬೆಳೆ ಹಾನಿಯಾಗಿರುವ ಎಂಟು ಜಿಲ್ಲೆಗಳ 45 ತಾಲೂಕುಗಳ ಸಂತ್ರಸ್ತ ರೈತರಿಗೆ ಪರಿಹಾರ ತಂತ್ರಾಂಶದ ಮೂಲಕ ಇನ್‌ಪುಟ್‌ ಸಬ್ಸಿಡಿ (ಬೆಳೆ ಪರಿಹಾರ) ವಿತರಿಸಲಾಗುವುದು. ಈಗಾಗಲೇ 1.53 ಲಕ್ಷ ದಾಖಲೆಗಳನ್ನು ಪರಿಹಾರ ತಂತ್ರಾಂಶದಲ್ಲಿ ಅಳವಡಿಸಲಾಗಿದೆ. 6,343 ಬಾಧಿತ ರೈತರಿಗೆ ಪರಿಹಾರ ತಂತ್ರಾಂಶದ ಮೂಲಕ 6.5 ಕೋಟಿ ರು. ಇನ್‌ಪುಟ್‌ ಸಬ್ಸಿಡಿಯನ್ನು ನೇರವಾಗಿ ರೈತರ ಬ್ಯಾಂಕ್‌ಗೆ ಜಮಾ ಮಾಡಲಾಗಿದೆ. ಇದಲ್ಲದೆ ಮಳೆಯಿಂದ ಹಾನಿಯಾಗಿರುವ ಮೂಲ ಸೌಕರ್ಯಗಳನ್ನು ಒದಗಿಸಲು 214.03 ಕೋಟಿ ರು.ಗಳನ್ನು ಜಿಲ್ಲಾವಾರು ಬಿಡುಗಡೆ ಮಾಡಲಾಗುವುದು ಎಂದರು.

ನಿಯಮ ಬದಲಿಸದಂತೆ ಕೇಂದ್ರಕ್ಕೆ ಮನವಿ:

2016ರ ಬರ ನಿರ್ವಹಣೆ ನಿಯಮಗಳ ಪ್ರಕಾರ ಬರಪೀಡಿತ ಪ್ರದೇಶಗಳನ್ನು ತೀವ್ರ ಮತ್ತು ಸಾಧಾರಣ ಎಂದು ವರ್ಗೀಕರಿಸುವುದು ಕಡ್ಡಾಯ. ಶೇ.33ರಿಂದ ಶೇ.50ರವರೆಗೆ ಬೆಳೆ ನಷ್ಟಉಂಟಾಗಿದ್ದರೂ ಸಾಧಾರಣ ಎಂದು ಪರಿಗಣಿಸಿ ಬರಪೀಡಿತ ತಾಲೂಕಾಗಿ ಘೋಷಿಸಬಹುದು. ಅದಕ್ಕಿಂತ ಹೆಚ್ಚು ನಷ್ಟಉಂಟಾಗಿದ್ದರೆ ತೀವ್ರ ಬರಪೀಡಿತ ತಾಲೂಕು ಎಂದು ಘೋಷಿಸಲಾಗುವುದು. ಆದರೆ, ಕೇಂದ್ರ ಸರ್ಕಾರವು ಪ್ರಸಕ್ತ ಸಾಲಿನಿಂದ ಶೇ.50ರಷ್ಟುನಷ್ಟಉಂಟಾಗಿದ್ದರೆ ಮಾತ್ರ ಪರಿಹಾರ ನೀಡುವುದಾಗಿ ಹೇಳಿದೆ. ಇದರ ವಿರುದ್ಧ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸುತ್ತಿದ್ದೇವೆ ಎಂದು ಆರ್‌.ವಿ. ದೇಶಪಾಂಡೆ ಮಾಹಿತಿ ನೀಡಿದರು.

ಬರಪೀಡಿತ 156 ತಾಲೂಕುಗಳು

ಬೆಂಗಳೂರು ನಗರ ಜಿಲ್ಲೆ:

ಆನೇಕಲ್‌ (ತೀವ್ರ ಬರ), ಬೆಂಗಳೂರು ಪೂರ್ವ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ

ಬೆಂಗಳೂರು ಗ್ರಾಮೀಣ:

ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ

ರಾಮನಗರ ಜಿಲ್ಲೆ:

ಕನಕಪುರ, ಮಾಗಡಿ, ರಾಮನಗರ

ಕೋಲಾರ ಜಿಲ್ಲೆ:

ಬಂಗಾರಪೇಟೆ, ಕೋಲಾರ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ

ಚಿಕ್ಕಬಳ್ಳಾಪುರ:

ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು, ಗುಡಿಬಂಡೆ, ಶಿಡ್ಲಘಟ್ಟ

ತುಮಕೂರು:

ಚಿಕ್ಕನಾಯಕನಹಳ್ಳಿ, ಕೊರಟಗೆರೆ, ಮಧುಗಿರಿ, ಪಾವಗಡ, ಸಿರಾ, ತಿಪಟೂರು, ತುಮಕೂರು, ತುರುವೆಕೆರೆ

ಚಿತ್ರದುರ್ಗ:

ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ, ಮೊಳಕಾಲ್ಮುರು

ದಾವಣಗೆರೆ:

ಚನ್ನಗಿರಿ, ದಾವಣಗೆರೆ, ಹರಪನಹಳ್ಳಿ, ಹರಿಹರ, ಹೊನ್ನಾಳಿ, ಜಗಳೂರು

ಮೈಸೂರು:

ಕೃಷ್ಣರಾಜನಗರ, ಪಿರಿಯಾಪಟ್ಟಣ

ಮಂಡ್ಯ:

ಕೃಷ್ಣರಾಜಪೇಟೆ, ಮಂಡ್ಯ, ನಾಗಮಂಗಲ, ಪಾಂಡವಪುರ, ಶ್ರೀರಂಗಪಟ್ಟಣ

ಬಳ್ಳಾರಿ:

ಬಳ್ಳಾರಿ, ಹಡಗಲಿ, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಸಂಡೂರು, ಸಿರುಗುಪ್ಪ

ಕೊಪ್ಪಳ

ಗಂಗಾವತಿ, ಕೊಪ್ಪಳ, ಕುಷ್ಟಗಿ, ಎಲಬುರ್ಗಾ

ರಾಯಚೂರು:

ಲಿಂಗಸುಗೂರು, ಮಾನ್ವಿ, ರಾಯಚೂರು, ಸಿಂಧನೂರು, ದೇವದುರ್ಗ

ಕಲಬುರ್ಗಿ:

ಅಫ್ಜಲ್‌ಪುರ, ಅಳಂದ, ಚಿಂಚೋಳಿ, ಚಿತ್ತಾಪುರ, ಕಲಬುರ್ಗಿ, ಜೀವರ್ಗಿ, ಸೇಡಂ

ಯಾದಗಿರಿ:

ಶಹಾಪುರ, ಶೊರಾಪುರ್‌, ಯಾದಿಗಿರಿ

ಬೀದರ್‌:

ಔರಾದ್‌, ಬೀದರ್‌, ಭಾಲ್ಕಿ, ಬಸವ ಕಲ್ಯಾಣ, ಹುಮ್ನಾಬಾದ್‌

ಬೆಳಗಾವಿ:

ಅಥಣಿ, ಬೈಲಹೊಂಗಲ, ಬೆಳಗಾವಿ, ಚಿಕ್ಕೋಡಿ, ಗೋಕಾಕ್‌, ಹುಕ್ಕೇರಿ, ಖಾನಾಪುರ, ರಾಮದುರ್ಗ, ರಾಯಬಾಗ್‌, ಸವದತ್ತಿ

ಬಾಗಲಕೋಟೆ ಜಿಲ್ಲೆ:

ಬಾದಾಮಿ, ಬಾಗಲಕೋಟೆ, ಬಿಳಗಿ, ಹುನಗುಂದ, ಜಮಖಂಡಿ, ಮುಧೋಳ

ವಿಜಯಪುರ ಜಿಲ್ಲೆ:

ಬಸವನ ಬಾಗೇವಾಡಿ, ವಿಜಯಪುರ, ಇಂಡಿ, ಮುದ್ದೆಬಿಹಾಳ, ಸಿಂಧಗಿ

ಗದಗ ಜಿಲ್ಲೆ:

ಗದಗ, ಮುಂಡರಗಿ, ನರಗುಂದ, ರೋಣ, ಶಿರಹಟ್ಟಿ

ಹಾವೇರಿ ಜಿಲ್ಲೆ:

ಬ್ಯಾಡಗಿ, ಹಾನಗಲ್‌, ಹಾವೇರಿ, ಹಿರೆಕೆರೂರು, ರಾಣೆಬೆನ್ನೂರು, ಸವಣೂರು, ಶಿಗ್ಗಾವ್‌

ಧಾರವಾಡ ಜಿಲ್ಲೆ:

ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಕುಂದಗೋಳ, ನವಲಗುಂದ

ಶಿವಮೊಗ್ಗ ಜಿಲ್ಲೆ:

ಭದ್ರಾವತಿ, ಶಿಕಾರಿಪುರ, ಶಿವಮೊಗ್ಗ, ಸೊರಬ

ಹಾಸನ ಜಿಲ್ಲೆ:

ಆಲೂರು, ಅರಕಲಗೂಡು, ಅರಸಿಕೆರೆ, ಬೇಲೂರು, ಚನ್ನರಾಯಪಟ್ಟಣ, ಹಾಸನ, ಹೊಳೆನರಸಿಪುರ, ಸಕಲೇಶಪುರ

ಚಿಕ್ಕಮಗಳೂರು:

ಚಿಕ್ಕಮಗಳೂರು, ಕಡೂರು, ಕೊಪ್ಪ, ಮೂಡಿಗೆರೆ, ನರಸಿಂಹರಾಜಪುರ, ಶೃಂಗೇರಿ, ತರಿಕೆರೆ

ಕೊಡಗು:

ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ

ದಕ್ಷಿಣ ಕನ್ನಡ

ಬೆಳ್ತಂಗಡಿ, ಬಂಟ್ವಾಳ, ಮಂಗಳೂರು, ಪುತ್ತೂರು, ಸುಳ್ಯ

ಉಡುಪಿ:

ಕಾರ್ಕಳ, ಕುಂದಾಪುರ, ಉಡುಪಿ

ಉತ್ತರ ಕನ್ನಡ:

ಭಟ್ಕಳ, ಹಳಿಯಾಳ, ಕಾರವಾರ, ಮುಂಡಗೋಡ್‌, ಯಲ್ಲಾಪುರ

ಪ್ರವಾಹಪೀಡಿತ 31 ತಾಲೂಕೂ ಬರಪೀಡಿತ!

ಮುಂಗಾರು ಅವಧಿಯಲ್ಲಿ ಪ್ರವಾಹಪೀಡಿತ ತಾಲೂಕುಗಳಾಗಿ ಗುರುತಿಸಿದ್ದ 45 ತಾಲೂಕುಗಳಲ್ಲಿ 14 ತಾಲೂಕು ಹೊರತುಪಡಿಸಿ ಉಳಿದ 31 ತಾಲೂಕುಗಳು ಹಿಂಗಾರಿನಲ್ಲಿ ಬರಪೀಡಿತ ತಾಲೂಕುಗಳಾಗಿ ಘೋಷಿಸಲ್ಪಟ್ಟಿವೆ.

ಪ್ರವಾಹಪೀಡಿತ ಎಂಟು ಜಿಲ್ಲೆಗಳ ಪೈಕಿ ಶಿವಮೊಗ್ಗ ಜಿಲ್ಲೆಯ ಹೊಸನಗರ, ತೀರ್ಥಹಳ್ಳಿ, ಸಾಗರ, ಹಾಸನ ಜಿಲ್ಲೆಯ ಅರಸಿಕೆರೆ, ಬೇಳೂರು, ಚನ್ನರಾಯಪಟ್ಟಣ, ಹಾಸನ, ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ, ಕಡೂರು, ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ, ಹುಣಸೂರು, ಮೈಸೂರು, ಟಿ.ನರಸಿಪುರ, ನಂಜನಗೂಡು ಮಾತ್ರ ಬರಪೀಡಿತ ತಾಲೂಕು ಪಟ್ಟಿಯಲ್ಲಿ ಸೇರಿಕೊಂಡಿಲ್ಲ.