ಶ್ರೀನಗರ[ಫೆ.26]: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೇನೆಯ ಮೇಲೆ ಉಗ್ರರು ನಡೆಸಿದ್ದ ದಾಳಿಗೆ ಭಾರತ ಪ್ರತಿದಾಳಿ ನಡೆಸಿ ಸೇಡು ತೀರಿಸಿಕೊಂಡಿದೆ. ಗಡಿ ನಿಯಂತ್ರಣ ರೇಖೆ ದಾಟಿದ ವಾಯುಸೇನೆಯು ಉಗ್ರರ ಕ್ಯಾಂಪ್ ಗಳನ್ನು ಧ್ವಂಸಗೊಳಿಸಿದೆ. ಆದರೆ ವಾಯುಪಡೆ ಈ ಮಾಹಿತಿಯನ್ನು ಇನ್ನಷ್ಟೇ ಖಚಿತಪಡಿಸಬೇಕಿದೆ.

ಮಂಗಳವಾರ ಬೆಳಿಗ್ಗೆ 3.30ರ ವೇಳೆಗೆ ಈ ದಾಳಿ ನಡೆದಿದಿದೆ ಎನ್ನಲಾಗಿದೆ. 10 ಮಿರಾಜ್ - 2000 ಜೆಟ್ ಗಳಿಂದ ಈ ದಾಳಿ ನಡೆಸಲಾಗಿದ್ದು, ಈ ಮೂಲಕ LoC ಪಕ್ಕದಲ್ಲಿರುವ ಜೈಶ್ ಉಗ್ರ ನೆಲೆಗಳನ್ನು ಧ್ವಂಸಗೊಳಿಸಲಾಗಿದೆ.

ದಾಳಿಯ ಬೆನ್ನಲ್ಲೇ ಪಾಕಿಸ್ತಾನ ಸೇನೆಯ ಮೇಜರ್ ಆಸಿಫ್ ಗಫೂರ್ ಟ್ವೀಟ್ ಮಾಡಿದ್ದು, 'ಭಾರತದ ವಿಮಾನಗಳು ಪುಜಾಫರಾಬಾದ್ ಕಡೆಯಿಂದ ನುಗ್ಗಿವೆ. ಇದಕ್ಕೆ ಸಕಾಲಿಕ ಹಾಗೂ ಪರಿಣಾಮಕಾರಿಯಾಗಿ ಪಾಕ್ ವಾಯುಪಡೆ ಸ್ಪಂದಿಸುವ ಮೂಲಕ, ಪೇಲೋಡ್ ಬಿಡುಗಡೆ ಮಾಡಿವೆ. ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ವಿಮಾನ ಬಾಲಕೋಟ್ ಬಳಿ ಪತನಗೊಂಡಿದೆ. ಯಾವುದೇ ಹಾನಿ ಸಂಭವಿಸಿಲ್ಲ' ಎಂದಿದ್ದಾರೆ.

ಉಗ್ರರಿಂದ ಆತ್ಮಾಹುತಿ ದಾಳಿ:

ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜೈಷ್- ಎ -ಮೊಹಮ್ಮದ್ ಎಂಬ ಉಗ್ರ ಸಂಘಟನೆಯ ಆದಿಲ್ ದಾರ್ ಎಂಬಾತ, ಭಾರತೀಯ ಸೇನೆಯ ಮೇಲೆ ಆತ್ಮಾಹುತಿ ದಾಳಿ ನಡೆಸಿದ್ದ. ಈ ಸ್ಫೋಟದಲ್ಲಿ 44 CRPF ಯೋಧರು ಹುತಾತ್ಮರಾಗಿದ್ದರು. ಸದ್ಯ ಅದರ ಪ್ರತೀಕಾರ ಎಂಬಂತೆ ಭಾರತ ಈಗ ಉಗ್ರನೆಲೆ ಮೇಲೆ ದಾಳಿ ನಡೆಸಿದೆ.