ಏ.1ರಂದು 112 ಶಿಶುಗಳಿಗೆ ಸಿದ್ಧಗಂಗಾ ಶ್ರೀಗಳ ಹೆಸರು| 112ನೇ ಜನ್ಮದಿನದಂದು ‘ಶಿವಕುಮಾರ ಸ್ವಾಮಿ’ ಎಂದು ನಾಮಕರಣ
ತುಮಕೂರು[ಮಾ.15]: ಇದೇ ಏ.1ರಂದು ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿ ಅವರ 112ನೇ ಜನ್ಮದಿನ ನಡೆಯಲಿದೆ. ಅಂದು 112 ನವಜಾತ ಶಿಶುಗಳಿಗೆ ಶಿವಕುಮಾರ ಸ್ವಾಮೀಜಿ ಹೆಸರು ನಾಮಕರಣ ಮಾಡಲು ನಿರ್ಧರಿಸಲಾಗಿದ್ದು, ಮಕ್ಕಳ ನೋಂದಣಿ ಕಾರ್ಯ ಆರಂಭವಾಗಿದೆ.
ಈಗಾಗಲೇ ರಾಜ್ಯದ ಮೂಲೆ ಮೂಲೆಗಳಿಂದ 50ಕ್ಕೂ ಹೆಚ್ಚು ನವಜಾತ ಮಕ್ಕಳ ಪೋಷಕರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇನ್ನು ಒಂದು ವಾರದೊಳಗೆ 112 ಮಕ್ಕಳ ಹೆಸರು ನೋಂದಾಯಿಸಿಕೊಳ್ಳುವ ನಿರೀಕ್ಷೆ ಇದೆ.
ಏ.1 ರಂದು ಸಿದ್ಧಗಂಗಾ ಮಠದಲ್ಲಿ ನಡೆಯುವ ಜನ್ಮದಿನೋತ್ಸವದಂದು 112 ಮಕ್ಕಳಿಗೆ ಶಿವಕುಮಾರ ಸ್ವಾಮಿ ಅಂತ ನಾಮಕರಣ ಮಾಡಲಾಗುವುದು. ಹಸುಗೂಸಿನಿಂದ ಹಿಡಿದು 6 ತಿಂಗಳವರೆಗಿನ ಮಕ್ಕಳ ಪೋಷಕರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಅಂದು ನಡೆಯುವ ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಅವರು ಈ ಎಲ್ಲಾ 112 ಮಕ್ಕಳಿಗೆ ಆಶೀರ್ವಚನ ನೀಡಲಿದ್ದಾರೆ. ಮಕ್ಕಳಿಗೆ ತೊಟ್ಟಿಲು, ಶ್ರೀಗಳ ಭಾವಚಿತ್ರ ಇರುವ ಬೆಳ್ಳಿ ನಾಣ್ಯ, ಹೊಸ ಉಡುಪು, ಹೊಸ ಹಾಸಿಗೆಯನ್ನು ನೀಡಲಾಗುವುದು.
ಈಗಾಗಲೇ ಸಂಪರ್ಕಿಸಿರುವ ಎಲ್ಲಾ ಪೋಷಕರು ಉತ್ಸಾಹದಿಂದ ಶ್ರೀಗಳ ಹೆಸರಿಡಲು ಮುಂದಾಗಿದ್ದಾರೆ. ನೋಂದಣಿ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ, 112 ಮಕ್ಕಳಿಗೆ ಮಾತ್ರ ಶ್ರೀಗಳ ಹೆಸರನ್ನು ನಾಮಕರಣ ಮಾಡಲು ತೀರ್ಮಾನಿಸಲಾಗಿದೆ ಎಂದು ಶ್ರೀಮಠದ ಹಳೆ ವಿದ್ಯಾರ್ಥಿ ಹಾಗೂ ಈ ಯೋಜನೆ ಉಸ್ತುವಾರಿ ಹೊತ್ತಿರುವ ಜಯಣ್ಣ ಮಾಹಿತಿ ನೀಡಿದ್ದಾರೆ.
ಮಕ್ಕಳಲ್ಲಿ ದೇವರನ್ನು ಕಾಣುತ್ತಿದ್ದ ಶ್ರೀಗಳು ಪ್ರತಿ ದಿನ ಶ್ರೀಮಠದಲ್ಲಿ ಮಕ್ಕಳು ಮಾಡುತ್ತಿದ್ದ ಸಾಮೂಹಿಕ ಪ್ರಾರ್ಥನೆಗೆ ತಪ್ಪಿಸುತ್ತಲೇ ಇರಲಿಲ್ಲ. ಎಷ್ಟೇ ದೊರದ ಊರಿನಲ್ಲಿದ್ದರೂ ಶ್ರೀಮಠಕ್ಕೆ ವಾಪಾಸ್ ಆಗುತ್ತಿದ್ದರು. ಅಲ್ಲದೇ ಶ್ರೀಗಳು ತಮ್ಮ ನಿಧನವನ್ನು ಮಕ್ಕಳ ಊಟವಾದ ನಂತರ ತಿಳಿಸಬೇಕು ಎಂದು ಮಠದವರಿಗೆ ಹೇಳಿದ್ದರು. ಮಕ್ಕಳೆಂದರೆ ಡಾ.ಶಿವಕುಮಾರ ಸ್ವಾಮೀಜಿಗೆ ಅಷ್ಟೊಂದು ಅಚ್ಚು ಮೆಚ್ಚು.
ಒಂದು ಕಡೆ ಶಿವಕುಮಾರ ಸ್ವಾಮೀಜಿ ಅವರ 112ನೇ ಗುರುವಂದನೆ ಕಾರ್ಯಕ್ರಮಕ್ಕೆ ಶ್ರೀಮಠ ಸಜ್ಜಾಗುತ್ತಿದೆ. ಈ ಗುರುವಂದನೆಯ ಪ್ರಮುಖ ಆಕರ್ಷಣೆ ನವಜಾತ ಶಿಶುಗಳಿಗೆ ಶಿವೈಕ್ಯ ಶ್ರೀಗಳ ಹೆಸರನ್ನು ನಾಮಕರಣ ಮಾಡುವುದಾಗಿದೆ. ಈಗ ನೋಂದಣಿ ಮಾಡಿಸಿಕೊಂಡಿರುವ ಪೋಷಕರೆಲ್ಲಾ ಶಾಲೆ ಹಾಜರಾತಿ ಪುಸ್ತಕದಲ್ಲೂ ಶಿವಕುಮಾರ ಸ್ವಾಮಿ ಎಂದೇ ಬರೆಸಲು ನಿಶ್ಚಯಿಸಿದ್ದಾರೆ.
-ಉಗಮ ಶ್ರೀನಿವಾಸ್
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 15, 2019, 12:26 PM IST