ಡಿಸ್ಪುರ್[ಜು.12]: ಮುಂಗಾರು ಆರಂಭವಾಗಿದ್ದು, ದೇಶದ ನಾನಾ ಕಡೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಈಶಾನ್ಯ ರಾಜ್ಯಗಳು ಪ್ರವಾಹಕ್ಕೀಡಾಗಿವೆ. ಅಸ್ಸಾಂನ ಸೋನಿತ್‌ಪುರ್‌ನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ನದಿಗಳಲ್ಲಿ ನೀರು ಉಕ್ಕಿ ಹರಿಯಲಾರಂಭಿಸಿದೆ. ಹೀಗೆ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ತಾಯಿ, ಮಗುವನ್ನು ಕಾಪಾಡುವ ಮೂಲಕ 11ರ ಪೋರನೊಬ್ಬ ಸಾಹಸ ಮೆರೆದಿದ್ದಾನೆ.

ಘಟನೆಯ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಲಖ್ಯಾ ಜ್ಯೋತಿ ದಾಸ್ 'ಮಹಿಳೆಯೊಬ್ಬಳು ತನ್ನಿಬ್ಬರು ಮಕ್ಕಳನ್ನು ಹಿಡಿದುಕೊಂಡು ಪ್ರವಾಹದಿಂದ ಉಕ್ಕಿ ಹರಿಯುತ್ತಿದ್ದ ನದಿಯನ್ನು ದಾಟಲು ಯತ್ನಿಸುತ್ತಿದ್ದಳು. ಇದೇ ವೇಳೆ ನದಿಯಲ್ಲಿ ಹರಿಯುತ್ತಿದ್ದ ನೀರಿನ ರಭಸ ಹೆಚ್ಚಾಗಿದೆ. ಅದೃಷ್ವಶಾತ್ 11 ವರ್ಷದ ಬಾಲಕ ಉತ್ತಮ್ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ತಾಯಿ ಮಕ್ಕಳನ್ನು ನೋಡಿದ್ದಾನೆ. ಅಪಾಯವನ್ನರಿತ ಆತ ಕೂಡಲೇ ನದಿಗೆ ಹಾರಿ ಮಹಿಳೆ ಹಾಗೂ ಒಂದು ಮಗುವನ್ನು ಕಾಪಾಡಿದ್ದಾನೆ' ಎಂದಿದ್ದಾರೆ.

ಕಳೆದ ತಿಂಗಳಷ್ಟೇ ಜಮ್ಮು ಕಾಶ್ಮೀರದ ವೂಲರ್ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ತಾಯಿ, ಮಗುವನ್ನು ಸೇನಾಧಿಕಾರಿಯೊಬ್ಬರು ರಕ್ಷಿಸಿದ್ದರು ಎಂಬುವುದು ಉಲ್ಲೇಖನೀಯ.