ಮಾಸ್ಕೋ(ಜ.22): ನಿನ್ನೆಯಷ್ಟೇ ಕರಾವಳಿ ಕಡಲತೀರದಲ್ಲಿ ದೋಣಿ ಮುಳುಗಿ ೮ ಜನ ಮೃತಪಟ್ಟಿರುವ ಘಟನೆ ಮಾಸುವ ಮುನ್ನವೇ ದೂರದ ರಷ್ಯಾದಲ್ಲಿ ಭಾರತೀಯರಿದ್ದ ಹಡಗೊಂದು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ.

ಭಾರತೀಯರು, ಟರ್ಕಿ ಮತ್ತು ಲಿಬಿಯಾ ಸಿಬ್ಬಂದಿಗಳಿದ್ದ ಎರಡು ಹಡಗುಗಳು ರಷ್ಯಾದ ಜಲ ಪ್ರದೇಶದಲ್ಲಿ ಬೆಂಕಿಗೆ ಆಹುತಿಯಾಗಿದ್ದು, ಪರಿಣಾಮ 11 ಮಂದಿ ಸಾವನ್ನಪ್ಪಿದ್ದಾರೆ. 

ಒಂದು ಹಡಗಿನಲ್ಲಿ ನೈಸರ್ಗಿಕ ಗ್ಯಾಸ್ ಇದ್ದು, ಮತ್ತೊಂದು ಟ್ಯಾಂಕರ್ ಹಡಗಾಗಿದ್ದು, ಎರಡೂ ಹಡಗುಗಳು ತಾಂಜಾನೀಯಾದ ಧ್ವಜವನ್ನು ಹೊಂದಿದ್ದವು ಎಂದು ಮೂಲಗಳು ತಿಳಿಸಿವೆ.

ಒಂದು ಹಡಗಿನಿಂದ ಮತ್ತೊಂದು ಹಡಗಿಗೆ ತೈಲವನ್ನು ಸ್ಥಳಾಂತರಿಸುತ್ತಿದ್ದ ವೇಳೆ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಕ್ಯಾಂಡಿ ಎಂಬ ಹಡಗಿನಲ್ಲಿದ್ದ 17 ಮಂದಿ ಸಿಬ್ಬಂದಿ ಮತ್ತು ಮೆಸ್ಟ್ರೋ ಹೆಸರಿನ ಹಡಗಿನಲ್ಲಿ ೧೪ ಜನ ಸಿಬ್ಬಂದಿ ಇದ್ದರು.

ಸಮುದ್ರ ಮಧ್ಯದಲ್ಲಿ ಎರಡೂ ಹಡಗಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡ ಪರಿಣಾಮ, ತೈಲ ಸ್ಥಳಾಂತರಿಸುತ್ತಿದ್ದ ಸಿಬ್ಬಂದಿ ಹೊರ ಬರಲಾಗದೇ ಬೆಂಕಿಯಲ್ಲಿ ಬೆಂದು ಮೃತಪಟ್ಟಿದ್ದಾರೆಂದು ರಷ್ಯಾದ ಟಾಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.