ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಬಂದ ಬಳಿಕ ಸಾರ್ವಜನಿಕರ ಹಣ ಲೂಟಿ ಮಾಡುತ್ತಿರುವ ಹಗರಣಗಳು ದಿನಕ್ಕೊಂದು ಬಯಲಾಗುತ್ತಿವೆ  ಎಂದು ಎಐಸಿಸಿ ಮಾಧ್ಯಮ ವಿಭಾಗದ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೆವಾಲಾ ಆರೋಪಿಸಿದ್ದಾರೆ.

ಬೆಂಗಳೂರು : ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಬಂದ ಬಳಿಕ ಸಾರ್ವಜನಿಕರ ಹಣ ಲೂಟಿ ಮಾಡುತ್ತಿರುವ ಹಗರಣಗಳು ದಿನಕ್ಕೊಂದು ಬಯಲಾಗುತ್ತಿವೆ. ಮೋದಿ ಅವಧಿಯಲ್ಲಿ 11 ಬ್ಯಾಂಕ್‌ ಹಗರಣ ನಡೆದಿದ್ದು, 61,036 ಕೋಟಿ ರು. ಸಾರ್ವಜನಿಕ ಹಣ ಲೂಟಿ ಹೊಡೆದಿದ್ದಾರೆ. ಆದರೂ ನರೇಂದ್ರ ಮೋದಿ ಮಾತ್ರ ಭ್ರಷ್ಟರನ್ನು ಪೋಷಿಸುತ್ತಾ ಮೌನಕ್ಕೆ ಶರಣಾಗಿದ್ದಾರೆ ಎಂದು ಎಐಸಿಸಿ ಮಾಧ್ಯಮ ವಿಭಾಗದ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೆವಾಲಾ ಆರೋಪಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ತಾವು ದೇಶದ ಖಜಾನೆಯ ಚೌಕಿದಾರ್‌ ಆಗಿ ಕೆಲಸ ಮಾಡಿಸುವುದಾಗಿ ಹೇಳಿದ್ದರು. ಇದೀಗ ‘ದಿನಕ್ಕೊಂದು ಭ್ರಷ್ಟಾಚಾರ ಮಾಡು, ಓಡಿ ಹೋಗು’ ಎಂಬಂತೆ ಕಾರ್ಯನಿರ್ವಹಿಸುವ ಮೂಲಕ ತಮ್ಮ ಸರ್ಕಾರ ಲೂಟಿ ಸರ್ಕಾರ ಎಂಬುದನ್ನು ದೃಢಪಡಿಸಿದ್ದಾರೆ.

ಆರ್‌ಬಿಐನ ನಿರ್ವಹಣಾ ವ್ಯವಸ್ಥೆ ಆಘಾತಕಾರಿ ಮಟ್ಟಕ್ಕೆ ಕುಸಿದಿದ್ದು, ನಾಲ್ಕು ಹಂತದ ಆಡಿಟಿಂಗ್‌ ಬಳಿಕವೂ ಹನ್ನೊಂದು ಬೃಹತ್‌ ಹಗರಣಗಳು ನಡೆದಿವೆ. ಮೋದಿ ಸಾರ್ವಜನಿಕ ಸಂಸ್ಥೆಗಳನ್ನು ಎಷ್ಟುದುರ್ಬಲಗೊಳಿಸುತ್ತಿದ್ದಾರೆ ಎಂಬುದಕ್ಕೆ ಇದು ಉದಾಹರಣೆ ಎಂದು ಹರಿಹಾಯ್ದರು.

ಸಾರ್ವಜನಿಕರ ಪರಿಶ್ರಮದ ಹಣ ಬ್ಯಾಂಕ್‌ನಲ್ಲಿ ಇಡುತ್ತಾರೆ. ಈ ಹಣವನ್ನು ವಿಜಯ ಮಲ್ಯ, ಲಲಿತ್‌ ಮೋದಿ, ನೀರವ್‌ಮೋದಿ, ಮೆಹುಲ್‌ ಚೋಕ್ಸಿ, ಜತಿನ್‌ ಮೆಹ್ತಾರಂತವರು ಕೊಳ್ಳೆ ಹೊಡೆಯುತ್ತಿದ್ದರೂ, ತಮ್ಮ ಮಾರ್ಗದರ್ಶನದಲ್ಲೇ ದೇಶ ಬಿಟ್ಟು ಓಡಿ ಹೋಗುವಂತೆ ಮಾಡುತ್ತಿದ್ದಾರೆ. ವಿಜಯ ಮಲ್ಯ ಅವರ ವಿರುದ್ಧ ಸಿಬಿಐ ನೀಡಿದ್ದ ಲುಕ್‌ಔಟ್‌ ನೋಟಿಸ್‌ ಹಿಂಪಡೆದು ಸಚಿವ ಸಂಪುಟ ಸಚಿವರೊಬ್ಬರು ಪರಾರಿಯಾಗಲು ನೆರವಾಗುತ್ತಾರೆ. ಕಳ್ಳರು ದೇಶ ಬಿಟ್ಟು ಹೋಗಲು ಸಹಾಯ ಮಾಡಲು ನರೇಂದ್ರ ಮೋದಿ ಅಧಿಕಾರಕ್ಕೆ ಬಂದರೇ ಎಂದು ಪ್ರಶ್ನಿಸಿದರು.

61 ಸಾವಿರ ಕೋಟಿ ರು. ಲೂಟಿ

ಕಳೆದ ನಾಲ್ಕು ವರ್ಷಗಳಲ್ಲಿ 11 ಹಗರಣಗಳಿಂದ ಒಟ್ಟು 61,036 ಸಾವಿರ ಕೋಟಿ ರು. ಲೂಟಿಯಾಗಿದೆ ಎಂದು ಇದೇ ವೇಳೆ ಸುರ್ಜೆವಾಲಾ ಆಪಾದಿಸಿದರು.

ಇದರಿಂದ ಬ್ಯಾಂಕಿಂಗ್‌ ವಲಯದಲ್ಲಿ ಎನ್‌ಪಿಎ ಮೊತ್ತವು 2013-14 ರಿಂದ ಈಚೆಗೆ ಮೂರು ಪಟ್ಟು ಹೆಚ್ಚಾಗಿದೆ. ಬ್ಯಾಂಕ್‌ ಆಫ್‌ ಬರೋಡಾ ಫೋರೆಕ್ಸ್‌ ಹಗರಣ 6,400 ಕೋಟಿ ರು., ವಿಜಯ ಮಲ್ಯ 9 ಸಾವಿರ ಕೋಟಿ ರು., ನೀರವ್‌ ಮೋದಿ, ಮೆಹುಲ್‌ ಚೋಕ್ಸಿಯಿಂದ 23,484 ಕೋಟಿ ರು., ಮೆಹುಲ್‌ ಚೊಕ್ಸಿ ಜನಧನ್‌ ಲೂಟ್‌ ಯೋಜನೆಯಡಿ 5 ಸಾವಿರ ಕೋಟಿ ರು., ದ್ವಾರಕಾ ದಾಸ್‌ ಜ್ಯುಯಲರಿ ಬ್ಯಾಂಕ್‌ ಹಗರಣ 390 ಕೋಟಿ ರು., ಕೆನರಾ ಬ್ಯಾಂಕ್‌ ಹಗರಣ 515 ಕೋಟಿ ರು., ವಿನ್‌ಸಮ್‌ ಬ್ಯಾಂಕ್‌ ಹಗರಣ 6,712 ಕೋಟಿ ರು., ಯೂನಿಯನ್‌ ಬ್ಯಾಂಕ್‌- ಟೊಟೆಮ್‌ ಇನ್‌ಫ್ರಾ ಹಗರಣ 1,395 ಕೋಟಿ ರು., ಕನಿಷ್‌್ಕ ಜ್ಯುವೆಲರಿ ಹಗರಣ 824 ಕೋಟಿ ರು., ಐಡಿಬಿಐ ಬ್ಯಾಂಕ್‌ ಹಗರಣ 772 ಕೋಟಿ ರು., ಐಸಿಐಸಿಐ ಬ್ಯಾಂಕ್‌ - 2849 ಕೋಟಿ ರು. ವಂಚನೆ ಮಾಡಿದ್ದಾರೆ ಎಂದು ಹೇಳಿದರು.

ಸಿಬಿಐ ಪ್ರಕಾರವೇ ನೀರವ್‌ ಮೋದಿ ಹಾಗೂ ಚೋಕ್ಸಿ 31 ಬ್ಯಾಂಕ್‌ಗಳಿಂದ 23,484 ಕೋಟಿ ರು. ವಂಚನೆ ಮಾಡಿದ್ದಾರೆ. ಇದರ ಜತೆಗೆ ನೀರವ್‌ ಮೋದಿ ಮತ್ತು ಚೋಕ್ಸಿ ಅವರ ಚಿನ್ನದ ಯೋಜನೆಗಳಿಗೆ ಮೋದಿ ಸರ್ಕಾರವು ಜನಧನ್‌ ಖಾತೆಯ 5 ಸಾವಿರ ಕೋಟಿ ರು. ತೊಡಗಿಸಿ ಮೋಸ ಮಾಡಿದ್ದಾರೆ ಎಂದು ದೂರಿದರು. ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಎಐಸಿಸಿ ವಕ್ತಾರೆ ಪ್ರಿಯಾಂಕ ಚತುರ್ವೇದಿ ಸೇರಿದಂತೆ ಹಲವರು ಹಾಜರಿದ್ದರು.