ಜೈಲ್ ಡೀಲ್ ಪ್ರಕರಣದ ಬಳಿಕ ಕಳೆದ ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆ ಭಾಗ್ಯ ಕಾಣದ ಜೈಲು ಹಕ್ಕಿಗಳು ಇದೀಗ ಗಣರಾಜ್ಯೋತ್ಸವ ಮುನ್ನವೇ ಬಿಡುಗಡೆ ಭಾಗ್ಯ ಕಾಣಲಿದ್ದಾರೆ..!

ಬೆಂಗಳೂರು(ಡಿ.12): ಜೈಲ್ ಡೀಲ್ ಪ್ರಕರಣದ ಬಳಿಕ ಕಳೆದ ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆ ಭಾಗ್ಯ ಕಾಣದ ಜೈಲು ಹಕ್ಕಿಗಳು ಇದೀಗ ಗಣರಾಜ್ಯೋತ್ಸವ ಮುನ್ನವೇ ಬಿಡುಗಡೆ ಭಾಗ್ಯ ಕಾಣಲಿದ್ದಾರೆ..! ರಾಜ್ಯದ ಏಳು ಕೇಂದ್ರ ಕಾರಾಗೃಹಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಒಟ್ಟು 108 ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ರಾಜ್ಯಪಾಲರು ಕೈದಿಗಳ ಬಿಡುಗಡೆಗೆ ಒಪ್ಪಿಗೆ ಸೂಚಿಸಿರುವ ಕಡತ ಕಳೆದ ಶುಕ್ರವಾರ ಗೃಹ ಇಲಾಖೆಗೆ ತಲುಪಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಇನ್ನೆರಡು ದಿನಗಳಲ್ಲಿ ಸಮಾರಂಭ ನಡೆದು ಕೈದಿಗಳು ಗಣರಾಜ್ಯೋತ್ಸವಕ್ಕೂ ಮುನ್ನವೇ ಬಿಡುಗಡೆಯಾಗಲಿದ್ದಾರೆ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ.

ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲು ಸುಪ್ರಿಂಕೋರ್ಟ್ ಕೆಲವು ಮಾರ್ಗಸೂಚಿ ನಿಗದಿಪಡಿಸಿತ್ತು. ಸಿಆರ್ಪಿಸಿ (ದಂಡ ಪಕ್ರಿಯಾ ಸಂಹಿತಾ) ಕಲಂ 433 ಎ ಪ್ರಕಾರ ಸುಪ್ರೀಂಕೋರ್ಟ್ ಆದೇಶದಂತೆ 2016ರಲ್ಲಿ ರಾಜ್ಯ ಸರ್ಕಾರ ಕೈದಿಗಳ ಬಿಡುಗಡೆಗೆ ಸಂಬಂಸಿದಂತೆ ನೂತನ ನಿಯಮವನ್ನು ಜಾರಿಗೆ ತಂದಿತ್ತು. ಅದರನ್ವಯ ಜೀವವಾಧಿ ಶಿಕ್ಷೆಗೆ ಒಳಪಟ್ಟ ಆರೋಪಿ 14 ವರ್ಷ ಕಠಿಣ ಶಿಕ್ಷೆಯನ್ನು ಹಾಗೂ ಮಹಿಳಾ ಆರೋಪಿಯ 10 ವರ್ಷ ಕಠಿಣ ಶಿಕ್ಷೆ ಕಡ್ಡಾಯವಾಗಿ ಪೂರೈಸಬೇಕೆಂದು ಹೇಳಿತ್ತು.

ಅದರಂತೆ ಕೈದಿಗಳ ಪಟ್ಟಿಯನ್ನು ಸಿದ್ಧಪಡಿಸಿ 200 ಮಂದಿಯ ಹೆಸರನ್ನು ಗೃಹ ಇಲಾಖೆ ಬಿಡುಗಡೆಗೆ ಶಿಫಾರಸು ಮಾಡಿ ರಾಜ್ಯ ಪಾಲರಿಗೆ ಕಳುಹಿಸಿಕೊಟ್ಟಿತ್ತು. ಈ ಪೈಕಿ ಹಳೆಯ 26 ಹಾಗೂ ನೂತನ ಪಟ್ಟಿಯಲ್ಲಿ 81 ಮಂದಿ ಕೈದಿಗಳ ಬಿಡುಗಡೆಗೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ. ಒಟ್ಟು 108 ಮಂದಿ ಕೈದಿಗಳ ಬಿಡುಗಡೆ ಒಪ್ಪಿಗೆ ರಾಜ್ಯಪಾಲರು ಸಹಿ ಹಾಕಿರುವ ಶುಕ್ರವಾರ ಇಲಾಖೆಗೆ ತಲುಪಿದೆ ಎಂದು ಗೃಹ ಇಲಾಖೆ ಕಾರ್ಯದರ್ಶಿ ಪಿ.ಕೆ.ಗರ್ಗ್ `ಕನ್ನಡಪ್ರಭ'ಕ್ಕೆ ತಿಳಿಸಿದರು. ಬೆಂಗಳೂರು ಕೇಂದ್ರ ಕಾರಾಗೃಹದ 45 ಪುರುಷ ಮತ್ತು 5 ಮಹಿಳಾ ಕೈದಿಗಳು, ಬೆಳಗಾವಿ ಜೈಲಿನ 9 ಪುರುಷ ಮತ್ತು 3 ಮಹಿಳಾ ಕೈದಿಗಳು, ಮೈಸೂರು ಜೈಲಿನ 15 ಪುರುಷ ಕೈದಿಗಳ, ಬಳ್ಳಾರಿ ಕಾರಾಗೃಹದ 7 ಪುರುಷ ಮತ್ತು ಓರ್ವ ಮಹಿಳಾ ಕೈದಿಗಳು, ಕಲ್ಬುರ್ಗಿ ಜೈಲಿನ 9 ಪುರುಷ ಕೈದಿಗಳು ಬಿಡುಗಡೆ ಹೊಂದಲಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯಂದು ಯಾವೊಬ್ಬ ಕೈದಿ ಬಿಡುಗಡೆಯಾಗಿರಲಿಲ್ಲ. ಆ ಎರಡು ದಿನಗಳಂದು ಬಿಡುಗಡೆಯಾಗಿದ್ದ ಪಟ್ಟಿಯನ್ನು ಸಿದ್ಧಪಡಿಸಿ ಕಳುಹಿಸಲಾಗಿತ್ತು. ಈ ಹಿಂದೆ ಕೈದಿಗಳ ಅರ್ಹತೆ ಪ್ರಶ್ನಿಸಿ ಕೆಲವು ದಾಖಲೆಗಳನ್ನು ನೀಡುವಂತೆ ರಾಜ್ಯಪಾಲರು ಕೇಳಿದ್ದರು. ಆಯಾ ಕಾರಾಗೃಹಗಳಿಗೆ ಕಳುಹಿಸಿದ್ದೆವು. ವಾಪಸ್ ಅವರು ಪಟ್ಟಿ ನೀಡದ ಕಾರಣ ಬಿಡುಗಡೆಯಾಗಿರಲಿಲ್ಲ ಎಂದು ಬಂಧಿಖಾನೆ ಇಲಾಖೆ ಅಕಾರಿ ಮಾಹಿತಿ ನೀಡಿದರು. 2016 ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ 284 ಕೈದಿಗಳು, 2015ರಲ್ಲಿ ರಾಜ್ಯ ಸರ್ಕಾರ 252, ಕಳೆದ ಗಣರಾಜ್ಯೋವತ್ಸವದ ವೇಳೆ 144 ಸಜಾ ಕೈದಿಗಳ ಬಿಡುಗಡೆ ಮಾಡಲಾಗಿತ್ತು.