ತಾಲೂಕಿನ ಹುಲ್ಯಾಳ ಗ್ರಾಮದ ಅನಾಥೆ ಯಮನವ್ವ ಸಿದ್ದಪ್ಪ ಕಲ್ಲೊಳ್ಳಿ (103) ಗ್ರಾಮದ ಪಿಕೆಪಿಎಸ್‌ ಸೊಸೈಟಿ ಸಿಬ್ಬಂದಿ ಪಡಿತರ ಧಾನ್ಯ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ದಾರಿ ಕಾಣದೆ ತೆವಳಿಕೊಂಡೇ ತಹಸೀಲ್ದಾರ್‌ ಕಚೇರಿಗೆ ಬಂದು ಅಧಿಕಾರಿಗಳ ಮುಂದೆ ತನ್ನ ಗೋಳು ತೋಡಿಕೊಂಡರು

ಜಮಖಂಡಿ(ಏ.12): ಎರಡು ತಿಂಗಳಿಂದ ಸ್ಥಗಿತಗೊಂಡಿದ್ದ ಪಡಿತರ ನೀಡುವಂತೆ ಅಧಿಕಾರಿಗಳನ್ನು ಕೋರಿಕೊಳ್ಳಲು ಶತಾಯುಷಿಯೊಬ್ಬರು ನೆತ್ತಿ ಸುಡುವ ಬಿಸಿಲಲ್ಲಿ ಸುಮಾರು 5 ಕಿ.ಮೀ. ತೆವಳಿಕೊಂಡೇ ಜಮಖಂಡಿ ತಾಲೂಕಿನ ತಹಸೀಲ್ದಾರ್‌ ಕಚೇರಿಗೆ ಬಂದ ಮನಕುಲುಕುವ ಘಟನೆ ಸೋಮವಾರ ನಡೆದಿದೆ.

ತಾಲೂಕಿನ ಹುಲ್ಯಾಳ ಗ್ರಾಮದ ಅನಾಥೆ ಯಮನವ್ವ ಸಿದ್ದಪ್ಪ ಕಲ್ಲೊಳ್ಳಿ (103) ಗ್ರಾಮದ ಪಿಕೆಪಿಎಸ್‌ ಸೊಸೈಟಿ ಸಿಬ್ಬಂದಿ ಪಡಿತರ ಧಾನ್ಯ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ದಾರಿ ಕಾಣದೆ ತೆವಳಿಕೊಂಡೇ ತಹಸೀಲ್ದಾರ್‌ ಕಚೇರಿಗೆ ಬಂದು ಅಧಿಕಾರಿಗಳ ಮುಂದೆ ತನ್ನ ಗೋಳು ತೋಡಿಕೊಂಡರು. ಯಮನವ್ವರ ಇಬ್ಬರು ಮಕ್ಕಳಲ್ಲಿ ಒಬ್ಬ ಮೃತಪಟ್ಟಿದ್ದು, ಇನ್ನೊಬ್ಬ ಪುತ್ರ ಮನೋರೋಗಿಯಾಗಿ. ಹೀಗಾಗಿ ದುಡಿಯುವ ಕೈಗಳಿಲ್ಲದ ಅಜ್ಜಿಯ ಕುಟುಂಬಕ್ಕೆ ಪಡಿತರ ಧಾನ್ಯವೇ ಆಸರೆ. ಆದರೆ, ಪಡಿತರ ಚೀಟಿಗೆ ಆಧಾರ್‌ ಲಿಂಕ್‌ ಆಗದಿರುವ ಹಿನ್ನೆಲೆಯಲ್ಲಿ ತಾಂತ್ರಿಕ ಕಾರಣ ಮುಂದಿಟ್ಟುಕೊಂಡು 2 ತಿಂಗಳಿಂದ ಅಜ್ಜಿಗೆ ಪಡಿತರ ವಿತರಣೆ ಸ್ಥಗಿತಗೊಳಿಸಲಾಗಿತ್ತು. ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗದಾಗ ಕೊನೆಗೆ ಸ್ವಗ್ರಾಮದಿಂದ ತೆವಳಿಕೊಂಡೇ ಕಡುಬಿಸಿಲಿನಲ್ಲಿ ಬಂದಳು. ಬಳಿಕ ಅವರಿಗೆ ಪಡಿತರ ನೀಡಲಾಯಿತು.

(ಕನ್ನಡಪ್ರಭ ವಾರ್ತೆ)