Asianet Suvarna News Asianet Suvarna News

ಒಂದೂ ಸ್ಥಾನ ಗೆಲ್ಲದ ಬಿಜೆಪಿಗೆ ಈಗ ವಿಪಕ್ಷ ಸ್ಥಾನಮಾನ!

ದೇಶದಲ್ಲಿ ನರೇಂದ್ರ ಮೋದಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಏರಿದ ಬಳಿಕ ಪಕ್ಷಾಂತರ ಪರ್ವ ಜೋರಾಗುತ್ತಿದೆ. ಇದೀಗ ಸಿಕ್ಕಿಂನಲ್ಲಿಯೂ ಈ ಪರ್ವ ಮುಂದುವರಿದಿದ್ದು, ಮತ್ತೆ 10 ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದಾರೆ. 

10 SDF MLAs join BJP in Sikkim
Author
Bengaluru, First Published Aug 13, 2019, 4:21 PM IST

ನವದೆಹಲಿ [ಆ.13]: ಕಳೆದ ಲೋಕಸಭಾ ಚುನಾವಣೆ ವೇಳೆಯೇ ನಡೆದಿದ್ದ ಸಿಕ್ಕಿಂ ವಿಧಾನಸಭಾ ಚುನಾವಣೆಯಲ್ಲಿ ಒಂದೂ ಸ್ಥಾನ ಗೆಲ್ಲಲು ವಿಫಲವಾಗಿದ್ದ ಬಿಜೆಪಿ, ಇದೀಗ ಅಸ್ಸಾಂ ವಿಧಾನಸಭೆಯಲ್ಲಿ ಅತಿದೊಡ್ಡ ವಿಪಕ್ಷವಾಗಿ ಹೊರಹೊಮ್ಮಿದೆ!

ಹೌದು, ಇದುವರೆಗೆ ರಾಜ್ಯ ವಿಧಾನಸಭೆಯಲ್ಲಿ ಅಧಿಕೃತ ವಿಪಕ್ಷದ ಸ್ಥಾನಮಾನ ಹೊಂದಿದ್ದ ಸಿಕ್ಕಿಂ ಡೆಮಾಕ್ರೆಟಿಕ್‌ ಫ್ರಂಟ್‌ (ಎಸ್‌ಡಿಎಫ್‌)ನ 13 ಶಾಸಕರ ಪೈಕಿ 10 ಜನ ಮಂಗಳವಾರ ಬಿಜೆಪಿ ಸೇರಿದ್ದಾರೆ. ಹೀಗಾಗಿ ಬಿಜೆಪಿಗೀಗ ಸಿಕ್ಕಿಂ ವಿಧಾನಸಭೆಯಲ್ಲಿ ಅಧಿಕೃತ ವಿಪಕ್ಷದ ಗೌರವ ಸಿಕ್ಕಿದೆ.

ಎಸ್‌ಡಿಎಫ್‌ನ 10 ಶಾಸಕರು, ಈಶಾನ್ಯ ರಾಜ್ಯದಲ್ಲಿ ಬಿಜೆಪಿ ಉಸ್ತುವಾರಿಯಾಗಿರುವ ರಾಮ್‌ಮಾಧವ್‌ ಅವರ ಜೊತೆಗೂಡಿ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಪಕ್ಷ ಸೇರ್ಪಡೆಯಾದರು.

ಈ ರಾಜಕೀಯ ಬದಲಾವಣೆಯೊಂದಿಗೆ ಈಶಾನ್ಯದ ಎಲ್ಲಾ ರಾಜ್ಯಗಳಲ್ಲಿ ಬೇರುಬಿಡುವ ಬಿಜೆಪಿ ಯತ್ನ ಇದೀಗ ಪೂರ್ಣಗೊಂಡಂತೆ ಆಗಿದೆ. ಈಶಾನ್ಯದ 8 ರಾಜ್ಯಗಳ ಪೈಕಿ 4 ರಾಜ್ಯಗಳಲ್ಲಿ ಬಿಜೆಪಿ ನಾಯಕರೇ ಮುಖ್ಯಮಂತ್ರಿಗಳಾಗಿದ್ದಾರೆ. ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಸರ್ಕಾರದ ಪಾಲುದಾರನಾಗಿದೆ. ಮೇಘಾಲಯ ವಿಧಾನಸಭೆಯಲ್ಲಿ ಬಿಜೆಪಿಯ ಇಬ್ಬರು, ಮಿಜೋರಾಂ ವಿಧಾನಸಭೆಯಲ್ಲಿ ಬಿಜೆಪಿಯ ಒಬ್ಬರು ಸದಸ್ಯರು ಇದ್ದಾರೆ. ಆದರೆ ಸಿಕ್ಕಿಂ ವಿಧಾನಸಭೆಯಲ್ಲಿ ಬಿಜೆಪಿಗೆ ಸ್ಥಾನವೇ ಇರಲಿಲ್ಲ. ಇದೀಗ ಏಕಾಏಕಿ 10 ಶಾಸಕರ ಸೇರ್ಪಡೆಯೊಂದಿಗೆ ಇಡೀ ಈಶಾನ್ಯ ಭಾರತದಲ್ಲಿ ಬಿಜೆಪಿ ಪ್ರವೇಶ ಮಾಡಿದಂತೆ ಆಗಿದೆ.

32 ಸದಸ್ಯ ಬಲದ ಸಿಕ್ಕಿಂ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ SDF 15 ಸ್ಥಾನ ಗೆದ್ದಿತ್ತು. ಆದರೆ ಈ ಪೈಕಿ ಇಬ್ಬರು ಶಾಸಕರು ತಲಾ ಎರಡು ಸ್ಥಾನದಲ್ಲಿ ಸ್ಪರ್ಧಿಸಿ ಎರಡೂ ಕಡೆ ಗೆದ್ದ ಹಿನ್ನೆಲೆಯಲ್ಲಿ ಒಂದೊಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಅದರ ಬಲ 13ಕ್ಕೆ ಇಳಿದಿತ್ತು. ಮತ್ತೊಂದೆಡೆ 17 ಸ್ಥಾನ ಗೆದ್ದಿದ್ದ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಅಧಿಕಾರದ ಗದ್ದುಗೆ ಏರಿತ್ತು. ರಾಜ್ಯ ವಿಧಾನಸಭೆಯಲ್ಲಿ ಹಾಲಿ 2 ಸ್ಥಾನ ಖಾಲಿ ಇದೆ.

Follow Us:
Download App:
  • android
  • ios