ಬೆಂಗಳೂರು :  ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದಾದ ಬೆಂಗಳೂರು-ಮೈಸೂರು ದಶಪಥ ರಸ್ತೆಯ ಕಾಮಗಾರಿಯು 2021ರ ಅಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು-ನಿಡಘಟ್ಟಮೊದಲ ಹಂತದ ಕಾಮಗಾರಿಯು 2021ರ ನವೆಂಬರ್‌ ತಿಂಗಳ ವೇಳೆಗೆ ಪೂರ್ಣಗೊಳ್ಳಲಿದೆ. ಕಾಮಗಾರಿಗಾಗಿ ಶೇ.90 ರಷ್ಟುಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. 56.20 ಕಿ.ಮೀ. ಮೊದಲ ಹಂತದ ಕಾಮಗಾರಿಗೆ 2,199 ಕೋಟಿ ರು. ವೆಚ್ಚ ಮಾಡಲಾಗುವುದು. ಕಾಮಗಾರಿಯು ಇದೇ ತಿಂಗಳ ಅಂತ್ಯದ ವೇಳೆಗೆ ಪ್ರಾರಂಭವಾಗಲಿದೆ. ಸುಮಾರು 500 ಹೆಕ್ಟರ್‌ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಮೂರು ಸಾವಿರ ಕೋಟಿ ರು. ಪರಿಹಾರವನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.

ಎರಡನೇ ಹಂತದಲ್ಲಿ ನಿಡಘಟ್ಟದಿಂದ ಮೈಸೂರುವರೆಗೆ ನಡೆಯಲಿದೆ. 2283.50 ಕೋಟಿ ರು. ವೆಚ್ಚದಲ್ಲಿ 61.10 ಕಿ.ಮೀ. ಕಾಮಗಾರಿ ನಡೆಯಲಿದೆ. ಈ ಕಾಮಗಾರಿಯು 2021ರ ವರ್ಷಾಂತ್ಯಕ್ಕೆ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ. ಬಿಡದಿ ಬಳಿ 7 ಕಿ.ಮೀ. ಬೈಪಾಸ್‌ ರಸ್ತೆ, ಮದ್ದೂರು ಬಳಿಕ ಅರ್ಧ ಕಿ.ಮೀ. ಬೈಪಾಸ್‌ ರಸ್ತೆ ಹಾಗೂ ಅರ್ಧ ಕಿ.ಮೀ. ಎಲಿವೇಟೆಡ್‌ ರಸ್ತೆ ನಿರ್ಮಾಣ ಮಾಡಲಾಗುವುದು. ಮಂಡ್ಯ ಬಳಿ 9 ಕಿ.ಮೀ., ಶ್ರೀರಂಗಪಟ್ಟಣದ ಬಳಿ 7 ಕಿ.ಮೀ. ಬೈಪಾಸ್‌ ರಸ್ತೆ ನಿರ್ಮಾಣ ಮಾಡಲಾಗುವುದು. ಇದಲ್ಲದೇ, ರಾಮನಗರ-ಚನ್ನಪಟ್ಟಣ 22 ಕಿ.ಮೀ. ರಸ್ತೆಯನ್ನು ಎಲಿವೇಟೆಡ್‌ ರಸ್ತೆಯನ್ನಾಗಿ ಮಾಡುವ ಸಂಬಂಧ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾಜ್ಯದಲ್ಲಿ 3600 ಕಿ.ಮೀ. ರಸ್ತೆ ಅಭಿವೃದ್ಧಿ ಪಡಿಸಲು 37 ಸಾವಿರ ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳುತ್ತಿದೆ. ಇದಕ್ಕಾಗಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಲೋಕೋಪಯೋಗಿ ಇಲಾಖೆಯು ರಾಜ್ಯ ಹೆದ್ದಾರಿಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಿದ್ದು, 25851 ಕೋಟಿ ರು. ಅಗತ್ಯ ಇದೆ. ರಾಜ್ಯ ಹೆದ್ದಾರಿಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಬೇಕಿರುವ ಕಾರಣ ಟೋಲ್‌ ಸಂಗ್ರಹ ಮಾಡಲಾಗುವುದು. ಅಲ್ಲದೇ, ಕೆಶಿಫ್‌ನಡಿ ಕೈಗೊಳ್ಳುವ ಕಾಮಗಾರಿಗಳಿಗೆ ವಿಶ್ವಬ್ಯಾಂಕ್‌ನಿಂದ 2,200 ಕೋಟಿ ರು. ಧೀರ್ಘಾವಧಿ ಸಾಲ ಪಡೆದುಕೊಳ್ಳಲಾಗಿದೆ ಎಂದರು.

ದಿಂಡಗಲ್‌-ಬೆಂಗಳೂರು ರಸ್ತೆ ಭಾಗಶಃ ಮುಕ್ತಾಯ:

1008 ಕೋಟಿ ರು. ವೆಚ್ಚದ ದಿಂಡಗಲ್‌-ಬೆಂಗಳೂರು 171 ಕಿ.ಮೀ.ರಸ್ತೆ ಭಾಗಶಃ ಮುಕ್ತಾಯ ಹಂತಕ್ಕೆ ಬಂದಿದೆ. ಶಿರಾಡಿಘಾಟ್‌ ಸುರಂಗ ಮಾರ್ಗಕ್ಕೆ 12 ಸಾವಿರ ಕೋಟಿ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. 451 ಕೋಟಿ ರು. ವೆಚ್ಚದ ಚನ್ನರಾಯಪಟ್ಟಣ ಚತುಷ್ಪಥ ರಸ್ತೆಗೆ ಟೆಂಡರ್‌ ಕರೆಯಲಾಗಿದೆ. ಬೆಂಗಳೂ-ಚೆನ್ನೈ ಎಕ್ಸ್‌ಪ್ರೆಸ್‌ ರಸ್ತೆಯ ಕಾಮಗಾರಿಯನ್ನು 3 ಹಂತದಲ್ಲಿ ಕೈಗೊಳ್ಳಲಾಗುವುದು. ಮೊದಲ ಹಂತದಲ್ಲಿ ಮಾಲೂರುವರೆಗೆ 27 ಕಿ.ಮೀ. ರಸ್ತೆಗೆ 1214 ಕೋಟಿ ರು. ವೆಚ್ಚವಾಗಲಿದೆ. ಮಾಲೂರುನಿಂದ ಬಂಗಾರಪೇಟೆವರೆಗೆ 1374 ಕೋಟಿ ರು. ವೆಚ್ಚದಲ್ಲಿ 17 ಕಿ.ಮೀ. ರಸ್ತೆ ಹಾಗೂ ಬಂಗಾರಪೇಟೆಯಿಂದ ಬೆತ್ತಂಪಲ್ಲಿವರೆಗೆ 864 ಕೋಟಿ ರು. ವೆಚ್ಚದಲ್ಲಿ 17.5 ಕಿ.ಮಿ.ರಸ್ತೆಯನ್ನು ನಿರ್ಮಾಣ ಮಾಡಲಾಗುವುದು ಎಂದು ವಿವರಿಸಿದರು.

ಡಿಪಿಆರ್‌ ಸಿದ್ಧ:  ದಾಬಸ್‌ಪೇಟೆ-ರಾಮನಗರ ನಡುವೆ 82 ಕಿ.ಮೀ. ರಸ್ತೆ 4514 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲು ಡಿಪಿಆರ್‌ ಸಿದ್ಧಪಡಿಸಲಾಗುತ್ತಿದೆ. ರಾಮನಗರ-ಬೆಲಗೊಂಡನಹಳ್ಳಿ 4092 ಕೋಟಿ ರು. ವೆಚ್ಚದಲ್ಲಿ 79 ಕಿ.ಮಿ. ರಸ್ತೆ, ಬೆಲಗೊಂಡನಹಳ್ಳಿ-ತಮಿಳುನಾಡು ಗಡಿವರೆಗೆ 35 ಕಿ.ಮೀ.ವರೆಗೆ 1586 ಕೋಟಿ ರು. ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.