ಮಾದಕ ವಸ್ತುಗಳ ಮಾದಕ 10 ಸಿನಿಮಾಗಳು!

10 Bollywood movies that are high on drugs and smoking
Highlights

ಡ್ರಗ್ಸ್ ಮತ್ತು ಬಾಲಿವುಡ್: ಎಷ್ಟೆಲ್ಲಾ ಚಿತ್ರಗಳು, ಏನೆಲ್ಲಾ ಸಂದೇಶಗಳು?

ಡ್ರಗ್ಸ್ ಕುರಿತಾದ ಕಥಾಹಂದರ ಹೊಂದಿರುವ ಸಿನಿಮಾಗಳು

ಸಾಮಾಜಿಕ ಪಿಡುಗಿಗೆ ಪರದೆ ಮುಖಾಂತರ ಪರಿಹಾರದ ಪ್ರಯತ್ನ

ಅಂತರಾಷ್ಟ್ರೀಯ ಮಾದಕವಸ್ತು ನಿಷೇಧ ದಿನಾಚರಣೆ

ಬೆಂಗಳೂರು(ಜೂ.26): ಮಾದಕವಸ್ತು ಕಥಾಹಂದರ ಹೊಂದಿರುವ ಬಾಲಿವುಡ್ ಸಿನಿಮಾಗಳಿಗೆ ಏನೂ ಬರವಿಲ್ಲ. ದೇಶದಲ್ಲಿ ಸಿನಿಮಾ ಎಂಬ ಮಾಯಾಜಾಲದ ಪರದೆ ತೆರೆದಾಗಿನಿಂದ ಮಾದಕವಸ್ತುಗಳ ಅನಾಹುತದ ಕುರಿತಾದ ಹಲವಾರು ಚಲನಚಿತ್ರಗಳು ಬಂದಿವೆ.

ಅದರಲ್ಲೂ ಸ್ವಾತಂತ್ರ್ಯಾ ನಂತರ ಬಂದ ಚಲನಚಿತ್ರಗಳು ಈ ಹೊಸ ರಾಷ್ಟ್ರದ ಯುವ ಜನಾಂಗ ಸಾಗಬೇಕಾದ  ದಾರಿಯ ಕುರಿತು ಮಾರ್ಗದರ್ಶನ ಮಾಡುವ ಜವಾಬ್ದಾರಿ ಹೊತ್ತುಕೊಂಡಿತ್ತು. ರಾಜಕಪೂರ್, ದಿಲೀಪ ಕುಮಾರ್, ದೇವಾನಂದ್ ಎಂಬ ಮೂರು ಮಾಂತ್ರಿಕ ನಾಯಕ ನಟರುಗಳ ಮೂಲಕ ಆ ಕಾಲದ ನಿರ್ದೇಶಕರು ಸಾಮಾಜಿಕ ಕ್ರಾಂತಿಯನ್ನೇ ಉಂಟು ಮಾಡುವಲ್ಲಿ ಮಹತ್ವದ ಪಾತ್ರವಹಿಸಿದರು. ಕನ್ನಡದಲ್ಲಿ ಡಾ. ರಾಜಕುಮಾರ್ ಅವರ ಸಾಮಾಜಿಕ ಸಂದೇಶವುಳ್ಳ ಚಲನಚಿತ್ರಗಳನ್ನು ಇದಕ್ಕೆ ಉದಾಹರಣೆ ನೀಡಬಹುದು. 

ಆದರೆ ಕ್ರಮೇಣ ಸಿನಿಮಾ ಅಸ್ತಿತ್ವದಲ್ಲೇ ಇರದ ಕನಸಿನ ಸಮಾಜವನ್ನು ಭ್ರಮಿಸುವ ಪರಿಪಾಠ ಬೆಳೆಯಿತು. ಕಮರ್ಷಿಯಲ್ ಎಂಬ  ಹಳಿ ಮೇಲೆ ಓಡುವುದನ್ನೇ ಕಾಯಕವನ್ನಾಗಿ ಮಾಡಿಕೊಂಡ ಚಲನಚಿತ್ರಗಳು, ಸಾಮಾಜಿಕ ಜವಾಬ್ದಾರಿ ಮರೆತು ಸಮಾಜವನ್ನು ಭ್ರಮಾಲೋಕಕ್ಕೆ ಕೊಂಡೊಯ್ಯುವ ಕೆಲಸದಲ್ಲಿ ಮಗ್ನವಾಗದವು. ಇಂದಿನ ಆಧುನಿಕ ಚಲನಚಿತ್ರಗಳಲ್ಲಂತೂ ಅಶ್ಲೀಲತೆ ಮತ್ತು ಮಾದಕವಸ್ತುಗಳ ಕುರಿತಾದ ವಿಜೃಂಭಣೆ ಯುವ ಜನಾಂಗವನ್ನು ನಕಾರಾತ್ಮಕವಾಗಿ ಆಕರ್ಷಿಸಿರುವುದರಲ್ಲಿ ಸಂದೇಹವಿಲ್ಲ.

ಮಾದಕವಸ್ತುಗಳ ಸೇವನೆಯಿಂದ ಆಗಬಹುದಾದ ಅನಾಹುತಗಳ ಕುರಿತ ಸಂದೇಶ ಇಂದಿನ ಚಲನಚಿತ್ರಗಳಲ್ಲಿ ಇರುತ್ತದಾದರೂ, ಅದನ್ನು ವಿಜೃಂಭಿಸುವ ರೀತಿ ಈ ಸಂದೇಶವನ್ನು ಮರೆಮಾಚಿ ಬಿಡುತ್ತದೆ. ಇತ್ತಿಚೀಗೆ ಬಿಡುಗಡೆಗೊಂಡ ಕೆಲವು ಬಾಲಿವುಡ್ ಚಿತ್ರಗಳನ್ನೇ ಗಮನಿಸುವುದಾದರೆ ಈ ವಾದದಲ್ಲಿ ಸತ್ಯಾಂಶವಿದೆ ಅನಿಸದಿರದು. ಆದರೂ ಸಾಮಾಜಿಕ ಪರಿವರ್ತನೆಯ ಜವಾಬ್ದಾರಿ ಹೊತ್ತಿರುವ ಚಲನಚಿತ್ರಗಳು ಮಾದಕವಸ್ತು ಎಂಬ ಸಾಮಾಜಿಕ ಪಿಡುಗಿನ ಕುರಿತು ಬೆಳಕು ಚೆಲ್ಲುತ್ತಿವೆ ಎಂದು ಹೇಳಲು ಅಡ್ಡಿ ಇಲ್ಲ. ಹಾಗಾದರೆ ಮಾದಕವಸ್ತು ಕಥಾಹಂದರ ಉಳ್ಳ 10 ಬಾಲಿವುಡ ಚಿತ್ರಗಳನ್ನು ನೋಡುವುದಾದರೆ....

1. ಫ್ಯಾಶನ್:  ಜನಪ್ರಿಯ ನಟಿ ಪ್ರಿಯಾಂಕಾ ಚೋಪ್ರಾ, ಕಂಗನಾ ರಣಾವತ್ ಅಭಿನಯದ, ಮಧುರ್ ಭಂಡಾರ‌್ಕರ್ ನಿರ್ದೇಶನದ ಫ್ಯಾಶನ್ ಚಿತ್ರ ಮನರಂಜನಾ ಕ್ಷೇತ್ರ ಮತ್ತು ಮಾದಕವಸ್ತುಗಳ ನಡುವಿನ ಸಂಬಂಧವನ್ನು ಅನಾವರಣಗೊಳಿಸಿದ ಚಿತ್ರ. ಮಾಡೆಲಿಂಗ್ ಕ್ಷೇತ್ರದಲ್ಲಿನ ಅಶ್ಲೀಲತೆ, ಮಾದಕವಸ್ತುಗಳ ದಾಸ್ಯತನ ಈ ಚಿತ್ರದಲ್ಲಿ ಎದ್ದು ಕಾಣುವ ಅಂಶ.

2. ದೇವ್ ಡಿ: ಆಧುನಿಕ ದೇವದಾಸ ಎಂದೇ ಖ್ಯಾತಿ ಪಡೆದ ಅನುರಾಗ ಕಶ್ಯಪ್ ನಿರ್ದೇಶನದ ಚಿತ್ರ ಇದು. ವೇಶ್ಯಾವಾಟಿಕೆಯ ಚಟಕ್ಕೆ ಬಿದ್ದ ಯುವಕನೋರ್ವ ಹೇಗೆ    ಮಾದಕವಸ್ತುಗಳ ದಾಸನಾಗಿ ತನ್ನ ಬದುಕನ್ನೇ ಹಾಳು ಮಾಡಿಕೊಳ್ಳುತ್ತಾನೆ ಎಂಬುದರ ಮೇಲೆ ಬೆಳಕು ಚೆಲ್ಲಿದ ಚಿತ್ರ.

3. ದಮ್ ಮಾರೋ ದಮ್: ರೋಹನ್ ಸಿಪ್ಪಿ ನಿರ್ದೇಶನದ, ಅಭಿಷೇಕ ಬಚ್ಚನ್, ಬಿಪಾಶಾ ಬಾಸು ಮತ್ತಿತರ ತಾರಾಗಣ ಹೊಂದಿದ್ದ ಈ ಚಿತ್ರ ಗೋವಾ ರಾಜ್ಯದ ಮಾದಕವಸ್ತು ಕಳ್ಳಸಾಗಾಣಿಕೆ ಮತು ್ತ ಅದು ಯುವಜನಾಂಗವನ್ನು ಆಪೋಷಣ ತೆಗೆದುಕೊಳ್ಳುವ ಪರಿಯ ಕುರಿತು ಸಂದೇಶ ಸಾರಿದ ಚಿತ್ರ.

4. ಗೋ, ಗೋವಾ, ಗಾನ್: ಮಾದಕವಸ್ತು ಮತ್ತು ಹಾರರ್ ಎರಡನ್ನೂ ಒಟ್ಟಿಗೆ ಸೇರಿಸಿ ಕಥೆ ಹೆಣೆದ ಅಪರೂಪದ ಚಿತ್ರ ಇದು. ಅಶ್ಲೀಲ ರೇವ್ ಪಾರ್ಟಿಗೆಂದು ಗೋವಾಕ್ಕೆ  ಬರುವ ಮೂವರು ಗೆಳೆಯರು ಕಾಡಿನಲ್ಲಿ ಜಾಂಬಿಗಳ ಮಧ್ಯೆ ಸಿಕ್ಕಿಹಾಕಿಕೊಳ್ಳುವ ಕಥಾವಸ್ತು ಹೊಂದಿತ್ತು.

5. ಶೈತಾನ್: ಮಾದಕವಸ್ತು ಸೇವಿಸಿ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಮುಗ್ಧ ಜನರನ್ನು ಕೊಲ್ಲುವ ಯುವಕರ ಗುಂಪೊಂದು, ಮುಂದೇ ಏನೆನು ಸಂಕಷ್ಟ ಅನುಭವಿಸುತ್ತಾರೆ ಎಂಬುದನ್ನು ತೆರೆ ಮೇಲೆ ತೋರಿಸಿದ ಹಾರರ್ ಸಿನಿಮಾ ಇದು. ಈ ಚಿತ್ರವನ್ನು ಅನುರಾಗ ಕಶ್ಯಪ್ ನಿರ್ದೇಶಿಸಿದ್ದರು.

6. ಗ್ಯಾಂಗ್ಸ್ ಆಫ್ ವಾಸೇಪುರ್: ಉತ್ತರಪ್ರದೇಶದ ಫ್ಯಾಮಿಲಿ ಗ್ಯಾಂಗ್ ವಾರ್ ಮತ್ತು ಅಲ್ಲಿನ ಅಪರಾಧ ಜಗತ್ತಿನ ನೈಜ ಅನಾವರಣ ಈ ಚಿತ್ರದಲ್ಲಿದೆ. ಇಡೀ ಚಿತ್ರದಲ್ಲಿ ಅಪರಾಧ ಮತ್ತು ಮಾದಕವಸ್ತು ಪರಸ್ಪರ ಹೊಂದಿರುವ ಸಂಬಂಧ ಪರದೆ ಮೇಲೆ ಅನಾವರಣವಾಗುತ್ತಾ ಹೋಗುತ್ತದೆ. ಅದರಲ್ಲೂ ಸದಾ ಗಾಂಜಾ ಸೇವಿಸುವ ಫೈಜಲ್ ಪಾತ್ರದಲ್ಲಿ ನಟ ನವಾಜುದ್ದೀನ ಸಿದ್ದಿಕಿ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಈ ಚಿತ್ರವನ್ನೂ ಕೂಡ ಅನುರಾಗ ಕಶ್ಯಪ್ ನಿರ್ದೇಶಿಸಿದ್ದರು.

7. ರಾಗಿನಿ ಎಂಎಂಎಸ್ 2: ಮಾದಕ ನಟಿ ಸನ್ನಿ ಲಿಯೋನೆ ಅಭಿನಯದ ಹಾರರ್ ಚಿತ್ರ ಇದು. ಯುವ ಜನಾಂಗ ಹೇಗೆ ಗಾಂಜಾ ಸೇವನೆಯ ದಾಸವಾಗಿದೆ ಎಂಬುದನ್ನು ಈ ಚಿತ್ರ ಕಣ್ಣಿಗೆ ಕಟ್ಟುತ್ತದೆ.

8. ಹಿರೋಯಿನ್: ಕರೀನಾ ಕಪೂರ ಖಾನ್ ಅಭಿನಯದ ಈ ಚಿತ್ರದಲ್ಲಿ, ಸಿನಿಮಾ ರಂಗದಲ್ಲಿ ಪ್ರಖ್ಯಾತಿ ಗಳಿಸಿದ ನಟಿಯೋರ್ವಳು, ತನ್ನ ಪ್ರಖ್ಯಾತಿಯನ್ನು ಕಳೆದುಕೊಂಡು ಮಾದಕವಸ್ತುಗಳ ಮೊರೆ ಹೋಗಿ ಜೀವನವನ್ನೇ ಸರ್ವನಾಶ ಮಾಡಿಕೊಳ್ಳುವ ಕಥಾ ಹಂದರ ಹೊಂದಿರುವ ಚಿತ್ರ ಇದಾಗಿತ್ತು.

9. ರಿವಾಲ್ವರ್ ರಾಣಿ: ತಮ್ಮ ಮನೋಜ್ಞ ಅಭಿನಯದಿಂದಲೇ ಅಭಿಮಾನಿಗಳ ಮನ ಗೆದ್ದಿರುವ ಕಂಗನಾ ರಣಾವತ್ ಈ ಚಿತ್ರದ ಕಥಾ ನಾಯಕಿ. ಈ ಚಿತ್ರ ಮಾದಕವಸ್ತು ಕುರಿತಾದ ಕಥಾವಸ್ತು ಹೊಂದಿರಲಿಲ್ಲವಾದರೂ, ಕಂಗನಾ ಡ್ರಗ್ಸ್ ಸೇವನೆ ಮಾಡುವ ಕೆಲವು ದೃಶ್ಯಗಳು ಇದರಲ್ಲಿವೆ.

10. ಉಡ್ತಾ ಪಂಜಾಬ್: ಗಡಿ ರಾಜ್ಯ ಪಂಜಾಬ್ ನ್ನು ಪಾಕಿಸ್ತಾನದಿಂದ ಕಳ್ಳಸಾಗಾಣಿಕೆಯಾಗುವ ಮಾದಕವಸ್ತುಗಳು ಪೆಡಂಭೂತವಾಗಿ ಕಾಡುತ್ತಿದೆ. ಯುವ ಜನಾಂಗವನ್ನು ಈ ಮಾದಕವಸ್ತುಗಳಿಂದ ದೂರ ಇರಿಸುವುದೇ ಸರ್ಕಾರಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕರೀನಾ ಕಪೂರ್, ಲಿಯಾ ಭಟ್, ಶಾಹೀದ ಕಪೂರ್ ಅಭಿನಯದ ಈ ಚಿತ್ರ ಪಂಜಾಬ್ ನ ಮಾದಕವಸ್ತು ಸಮಸ್ಯೆಯನ್ನು ತೆರೆಯ ಮೇಲೆ ಅನಾವರಣಗೊಳಿಸಿತ್ತು.

loader