ತಿರುವನಂತಪುರ[ಆ.27]: ಶತಮಾನದ ಭೀಕರ ಪ್ರವಾಹಕ್ಕೆ ತತ್ತರಿಸಿದ್ದ ಹೋಗಿದ್ದ ಕೇರಳದ  ಜನತೆಗೆ ನೆರೆಯ ನಂತರ ಇನ್ನಷ್ಟು ತೊಂದರೆಗಳಿಗೆ ಸಿಲುಕಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

ಆಲಪುಳ ಜಿಲ್ಲೆಯ ಕೈನಾಕರಿ ಗ್ರಾಮದ 20ಕ್ಕೂ ಹೆಚ್ಚು ಕುಟುಂಬಗಳು ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡಿದ್ದು ಇವರೆಲ್ಲ ಸ್ಥಳೀಯ ಚರ್ಚಿನ ಮೃತದೇಹಗಳ ವಿಭಾಗದಲ್ಲಿ ಕಾಲ ಕಳೆಯುತ್ತಿದ್ದಾರೆ.  ಇಲ್ಲಿ ಗ್ರಾಮಸ್ಥರ ಸಾಕು ಪ್ರಾಣಿಗಳಾದ ಹಸು, ಕುರಿ ಮೇಕೆಗಳು ಸಹ ಬೀಡುಬಿಟ್ಟಿವೆ.

ಇದೇ ಚರ್ಚಿನಲ್ಲಿ ಕಾಲಕಳೆಯುತ್ತಿರುವ ಕುಟುಂಬಸ್ಥರ ಹಿರಿಯರನ್ನು ಹೂಳಲಾಗಿದೆ. ಪ್ರತಿಯೊಬ್ಬರೂ ಸ್ಮಶಾನ ಸ್ಥಳದಲ್ಲಿಯೇ ಅಡುಗೆ ಮಾಡಿಕೊಂಡು ಆಹಾರ ಸೇವಿಸುತ್ತಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರಿಗೂ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ನೀರಿನ ಮಟ್ಟ ಅಪಾಯದ ಹಂತ ತಲುಪಿದ ಕಾರಣ ಗ್ರಾಮಸ್ಥರೆಲ್ಲ ಚರ್ಚಿನಲ್ಲಿ ವಾಸಿಸುತ್ತಿದ್ದು ಸರ್ಕಾರದಿಂದ ಶಾಶ್ವತ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ.  

370 ಮಂದಿ ಸಾವು
10 ದಿನಕ್ಕೂ ಹೆಚ್ಚು ದಿನ ಕೇರಳದ ಬಹುತೇಕ ಜಿಲ್ಲೆಗಳಲ್ಲಿ ಪ್ರವಾಹ ಕಾಣಿಸಿಕೊಂಡ ಹಿನ್ನಲೆಯಲ್ಲಿ ಸುಮಾರು 370 ಮಂದಿ ಮೃತಪಟ್ಟಿದ್ದು, ಸಾವಿರಾರು ಕೋಟಿ ಆಸ್ತಿ ನಷ್ಟವಾಗಿದೆ. ಕೇಂದ್ರ ಸರ್ಕಾರ ದೇವರ ನಾಡಿಗೆ 600 ಕೋಟಿ ರೂ. ನೆರವು ನೀಡಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಸೂಕ್ತ ಪ್ರಕ್ರಿಯೆಯನ್ನು ಅನುಸರಿಸಿದ ಬಳಿಕ ಮತ್ತಷ್ಟು ನೆರವು ನೀಡುವುದಾಗಿ ತಿಳಿಸಿದೆ.