ಪೊಲೀಸ್‌ ಇಲಾಖೆಯಲ್ಲಿ 16 ಸಾವಿರ ಪೊಲೀಸ್‌ ಕಾನ್ಸ್‌ಟೇಬಲ್‌, 1 ಸಾವಿರಕ್ಕೂ ಹೆಚ್ಚು ಎಸ್‌ಐಗಳ ನೇಮಕಾತಿ| ಮೊದಲ ಹಂತದಲ್ಲಿ 6 ಸಾವಿರ ಪೊಲೀಸರ ಭರ್ತಿಗೆ ಕ್ರಮ| ಪೊಲೀಸ್‌ ತರಬೇತಿಯಲ್ಲಿ ಕಾಲ ಕಾಲಕ್ಕೆ ಸುಧಾರಣೆ ತರಬೇಕಿದೆ| ಮೊಬೈಲ್‌, ಅಂತರ್ಜಾಲ ಹೆಚ್ಚಿನ ಬಳಕೆಯಿಂದಾಗಿ ಸೈಬರ್‌ ಕ್ರೈಂ ಹೆಚ್ಚಾಗಿದೆ| ಪ್ರತಿ ಜಿಲ್ಲೆಗಳಲ್ಲಿ ಸೈಬರ್‌ ಕ್ರೈಂ ಠಾಣೆ ಆರಂಭಿಸಲಾಗಿದೆ| ಪ್ರತಿ ಠಾಣೆಗಳಲ್ಲೂ ಆನ್‌ಲೈನ್‌ ಮೂಲಕ ದೂರು ಸ್ವೀಕರಿಸುವ ವ್ಯವಸ್ಥೆ ಸಹ ಮಾಡಲಾಗಿದೆ| 

ಮೈಸೂರು(ಅ.19): ಪೊಲೀಸ್‌ ಇಲಾಖೆಯಲ್ಲಿ 16 ಸಾವಿರ ಪೊಲೀಸ್‌ ಕಾನ್ಸ್‌ಟೇಬಲ್‌, 1 ಸಾವಿರಕ್ಕೂ ಹೆಚ್ಚು ಎಸ್‌ಐಗಳ ನೇಮಕಾತಿಯನ್ನು ಹಂತ ಹಂತವಾಗಿ ಮಾಡಲಾಗುವುದು. ಮೊದಲ ಹಂತದಲ್ಲಿ 6 ಸಾವಿರ ಪೊಲೀಸರ ಭರ್ತಿಗೆ ಕ್ರಮ ವಹಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. 

ಮೈಸೂರಿನ ಕರ್ನಾಟಕ ಪೊಲೀಸ್‌ ಅಕಾಡೆಮಿ ಕವಾಯತು ಮೈದಾನದಲ್ಲಿ ಶುಕ್ರವಾರ ನಡೆದ 42ನೇ ತಂಡದ ಆರಕ್ಷಕ ಉಪ ನಿರೀಕ್ಷಕರು (ಕೆಎಸ್‌ಐಎಸ್‌ಎಫ್‌), ಆರ್‌ಎಸ್‌ಐ (ಸಿಎಆರ್‌/ ಡಿಎಆರ್‌) ಮತ್ತು ಸ್ಪೆಷಲ್‌ ಆರ್‌ಎಸ್‌ಐ (ಕೆಎಸ್‌ಆರ್‌ಪಿ) ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಅವರು ಗೌರವ ವಂದನೆ ಸ್ವೀಕರಿಸಿ, ಬಹುಮಾನ ವಿತರಿಸಿ ಮಾತನಾಡಿದರು.

ಸೈಬರ್‌ ಕ್ರೈಂ ಠಾಣೆ:

ಪೊಲೀಸ್‌ ತರಬೇತಿಯಲ್ಲಿ ಕಾಲ ಕಾಲಕ್ಕೆ ಸುಧಾರಣೆ ತರಬೇಕಿದೆ. ಮೊಬೈಲ್‌, ಅಂತರ್ಜಾಲ ಹೆಚ್ಚಿನ ಬಳಕೆಯಿಂದಾಗಿ ಸೈಬರ್‌ ಕ್ರೈಂ ಹೆಚ್ಚಾಗಿದೆ. ಹೀಗಾಗಿ, ಪ್ರತಿ ಜಿಲ್ಲೆಗಳಲ್ಲಿ ಸೈಬರ್‌ ಕ್ರೈಂ ಠಾಣೆ ಆರಂಭಿಸಲಾಗಿದೆ. ಅಲ್ಲದೆ, ಪ್ರತಿ ಠಾಣೆಗಳಲ್ಲೂ ಆನ್‌ಲೈನ್‌ ಮೂಲಕ ದೂರು ಸ್ವೀಕರಿಸುವ ವ್ಯವಸ್ಥೆ ಸಹ ಮಾಡಲಾಗಿದೆ ಎಂದು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ವಿಧಿ ವಿಜ್ಞಾನ ಪ್ರಯೋಗಾಲಯವನ್ನು (ಎಫ್‌ಎಸ್‌ಎಲ್‌) ಪ್ರತಿ ಜಿಲ್ಲೆಗೂ ಅಗತ್ಯವಿದೆ. ಹೀಗಾಗಿ, ಪ್ರತಿ ಠಾಣೆಯಲ್ಲೂ ಪ್ರಾಥಮಿಕ ಎಫ್‌ಎಸ್‌ಎಲ್‌ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ತರಬೇತಿ ನೀಡಲು ಸಮಾಲೋಚನೆ ನಡೆಸಲಾಗುತ್ತಿದೆ. ವಿದೇಶಗಳಲ್ಲಿರುವ ಆನ್‌ ಸೀನ್‌ ಕ್ರೈಂ ವ್ಯವಸ್ಥೆ ಇದ್ದು, ಇಲ್ಲೂ ಅದನ್ನು ತರಲು ಚಿಂತಿಸಲಾಗುತ್ತಿದೆ. ಜರ್ಮನಿ ಸೇರಿದಂತೆ ವಿದೇಶಿ ಪೊಲೀಸರೊಂದಿಗೆ ತಂತ್ರಜ್ಞಾನ ಹಾಗೂ ಸುಧಾರಣೆಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಪೊಲೀಸ್‌ ತರಬೇತಿ ತೆಗೆದುಕೊಂಡು ಹೋಗಲು ಕ್ರಮ ವಹಿಸಲಾಗಿದೆ ಎಂದು ಅವರು ಹೇಳಿದರು.

ಪೊಲೀಸರಿಗೆ ಕರ್ತವ್ಯ ನಿರ್ವಹಣೆಯೊಂದಿಗೆ ಸಮಯಪ್ರಜ್ಞೆ ಮತ್ತು ಸ್ಥಿತಪ್ರಜ್ಞೆ ಇದ್ದರೇ ಎಂತಹದೇ ಅಪರಾಧವಿದ್ದರೂ ಪತ್ತೆ ಹಚ್ಚಬಹುದಾಗಿದೆ. ಪೊಲೀಸರು ಮಾನಸಿಕವಾಗಿ ಶಕ್ತಿಶಾಲಿಯಾಗಬೇಕು. ಆಗ ದೇಹ ಶಕ್ತಿಶಾಲಿಯಾಗಿ ಕೆಲಸ ಮಾಡಲು ಸಾಧ್ಯ ಎಂದು ಅವರು ತಿಳಿಸಿದರು.

ನಿರಂತರ ಸೇವೆ:

ಸಮಾಜದಲ್ಲಿ ಅನೇಕ ಸೇವೆಗಳಿವೆ. ಆದರೆ, ಪೊಲೀಸ್‌ ಸೇವೆ ಜನರಿಗೆ ಹತ್ತಿರವಾದ, ನಿರಂತರವಾದ ಸೇವೆಯಾಗಿದೆ. ಸಮವಸ್ತ್ರ ತೊಟ್ಟು ಶಿಸ್ತಿನ ಮಾಡುವ ಕೆಲಸ ಪೊಲೀಸರದು. ಪೊಲೀಸರಿಗೆ ಸತ್ಯ ತಂದೆ, ನ್ಯಾಯ ತಾಯಿ ಇದ್ದಂತೆ. ಸತ್ಯ ಮತ್ತು ನ್ಯಾಯವನ್ನು ಸದಾ ಎತ್ತಿ ಹಿಡಿಯಬೇಕು. ಇದನ್ನು ಮಾಡುವಾಗ ಹಲವಾರು ಸವಾಲು ಬರುತ್ತದೆ. ಅದನ್ನು ಜಯಿಸಿ ಕರ್ತವ್ಯ ನಿಷ್ಠೆ ಮೆರೆಯಬೇಕು. ದಕ್ಷತೆ, ಪ್ರಾಮಾಣಿಕತೆಯಲ್ಲಿ ಕರ್ನಾಟಕ ಪೊಲೀಸರನ್ನು ಬೇರೆ ರಾಜ್ಯದವರು ಎತ್ತರ ಸ್ಥಾನದಲ್ಲಿ ನೋಡುತ್ತಿದ್ದಾರೆ. ಇದಕ್ಕೆ ನಿಮ್ಮ ಕೊಡುಗೆ ಸಹ ಇರಬೇಕು ಎಂದು ಅವರು ಕರೆ ನೀಡಿದರು.

ತರಬೇತಿ ಡಿಜಿಪಿ ಪದಮ್‌ ಕುಮಾರ್‌ ಗರ್ಗ್‌, ಐಜಿಪಿ ಎಸ್‌. ರವಿ, ಕೆಪಿಎ ನಿರ್ದೇಶಕ ವಿಪುಲ್‌ಕುಮಾರ್‌, ಉಪ ನಿರ್ದೇಶಕ ಸುಧೀರ್‌ಕುಮಾರ್‌ ರೆಡ್ಡಿ ಇದ್ದರು.

ಚರಣ್‌ ಸರ್ವೋತ್ತಮ ಪ್ರಶಿಕ್ಷಣಾರ್ಥಿ

ಕರ್ನಾಟಕ ಪೊಲೀಸ್‌ ಅಕಾಡೆಮಿಯಲ್ಲಿ 62 ಮಂದಿ ಪ್ರೊಬೇಷನರಿ ಎಸ್‌ಐಗಳು 11 ತಿಂಗಳ ಬುನಾದಿ ತರಬೇತಿ ಪಡೆದರು. ಇದರಲ್ಲಿ 58 ಪುರುಷರು, 4 ಮಹಿಳೆಯರು ಇದ್ದಾರೆ. ಈ ಪೈಕಿ ಎಸ್‌. ಚರಣ್‌ ಸರ್ವೋತ್ತಮ ಪ್ರಶಿಕ್ಷಣಾರ್ಥಿ ಬಹುಮಾನದೊಂದಿಗೆ ಸಿಎಂ ಕಪ್‌, ಖಡ್ಗ ಪಡೆದರು. ಎಸ್‌. ರಘುರಾಜ್‌ ಸರ್ವೋತ್ತಮ ಪ್ರಶಿಕ್ಷಣಾರ್ಥಿ 2ನೇ ಸ್ಥಾನ ಪಡೆದರು. ಅರ್ಪಿತಾ ರೆಡ್ಡಿ ಅವರು ಸರ್ವೋತ್ತಮ ಮಹಿಳಾ ಪ್ರಶಿಕ್ಷಣಾರ್ಥಿ ಬಹುಮಾನ ಪಡೆದರು.

ಕರ್ನಾಟಕ ಪೊಲೀಸ್ ನೇಮಕಾತಿ: ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ಉತ್ತಮ ರೈಫಲ್‌ ಫೈರಿಂಗ್‌- ಬಾನೆ ಸಿದ್ದಣ್ಣ, ಉತ್ತಮ ರಿವಾಲ್ವರ್‌ ಫೈರಿಂಗ್‌- ಸಂಜೀವ ಗಟ್ಟರಗಿ, ಬೆಸ್ಟ್‌ ಡೈರೆಕ್ಟ​ರ್‍ಸ್ ಅಸೆಸ್‌ಮೆಂಟ್‌ ಕಪ್‌- ಉಮಾಶ್ರೀ ಕಲಕುಟಗಿ, ಒಳಾಂಗಣದ ಅತ್ಯುತ್ತಮ ಪ್ರಶಿಕ್ಷಣಾರ್ಥಿ- ಎಸ್‌. ರಘುರಾಜ್‌, ಹೊರಾಂಗಣ ಅತ್ಯುತ್ತಮ ಪ್ರಶಿಕ್ಷಣಾರ್ಥಿಯಾಗಿ ಮಂಜಣ್ಣ ಬಹುಮಾನ ಸ್ವೀಕರಿಸಿದರು.