Asianet Suvarna News Asianet Suvarna News

ಪಂಚವಾರ್ಷಿಕ ಯೋಜನೆಗಳ ಜನಕ ಜಯಚಾಮರಾಜೇಂದ್ರ ಒಡೆಯರ್‌ 101 ನೇ ಜನ್ಮ ಸ್ಮರಣೆ!

ಮೈಸೂರು ರಾಜ ಸಂಸ್ಥಾನದ 25ನೇ ಮಹಾರಾಜರೂ, ರಾಜತಂತ್ರ ಹಾಗೂ ಪ್ರಜಾತಂತ್ರ ಎರಡನ್ನೂ ಅನುಭವಿಸಿದ ಜಯ ಚಾಮರಾಜೇಂದ್ರ ಒಡೆಯರ್‌ ಅವರ 101ನೇ ಜನ್ಮ ದಿನ ಇಂದು. (ಜುಲೈ 18, 1919) ರಾಜಯೋಗಿ ಎಂದೇ ಬಿರುದಾಂಕಿತರಾದ ಮಹಾರಾಜರು ಸದಾ ಸಮಾಜಮುಖಿ ಚಿಂತನೆಗಳಿಂದ, ಜನಪರ ಕಾರ್ಯಗಳಿಂದ ಜನರ ಮನಗೆದ್ದರು. ಅವರ ಸ್ಮರಣೆಗಾಗಿ ಲೇಖಕ ಮೈಸೂರು ಸುರೇಶ್‌ ರಚಿಸಿರುವ ‘ರಾಜಯೋಗಿ ಶ್ರೀ ಜಯಚಾಮರಾಜೇಂದ್ರ ಒಡೆಯರ್‌ ಬಹದ್ದೂರ್‌’ ಕೃತಿಯಿಂದ ಈ ಲೇಖನ.

Mysore king Rajayogi Jayachamaraja Wadiyar birth centenary year Valedictory function
Author
Bangalore, First Published Jul 18, 2020, 10:30 AM IST

ಪ್ರಗತಿ ರಥ ಮುನ್ನಡೆಸಿದರು

ಜಯಚಾಮರಾಜೇಂದ್ರ ಒಡೆಯರ್‌ ಅವರು ಮೈಸೂರು ರಾಜ ಸಂಸ್ಥಾನದ ಮಹಾರಾಜರಾಗಿ ಅ​ಧಿಕಾರವಹಿಸಿಕೊಂಡ ಸ್ವಲ್ಪದರಲ್ಲಿಯೇ (1940ರಲ್ಲಿ) ಮೈಸೂರು ಸಂಸ್ಥಾನದ ರಾಜ್ಯಭಾರವು ಸೂಸುತ್ರವಾಗಿ, ವೇಗವಾಗಿ ನಡೆಯಲಾರಂಭಿಸಿತು. ಮಹಾರಾಜರಿಗೆ ಚಿಕ್ಕ ವಯಸ್ಸಿನಲ್ಲಿಯೇ ಇದ್ದ ಅಪಮಿತ ಶಕ್ತಿ, ಸಾಮರ್ಥ್ಯ, ಅಪಾರವಾದ ಪ್ರತಿಭೆ, ಪಾಂಡಿತ್ಯ, ಪ್ರಜಾ ವಾತ್ಸಲ್ಯದಿಂದಲೂ, ದೊಡ್ಡಪ್ಪ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಗರಡಿಯಲ್ಲಿ ಪಳಗಿದ್ದರಿಂದಲೂ ಮಹಾರಾಜರು ಪ್ರಗತಿರಥವನ್ನು ಸರಾಗವಾಗಿ ಮುನ್ನಡೆಸಿದರು.

Mysore king Rajayogi Jayachamaraja Wadiyar birth centenary year Valedictory function

ಪಂಚವಾರ್ಷಿಕ ಯೋಜನೆ ಜಾರಿ

ಮಹಾತ್ಮ ಗಾಂಧಿ ಹೇಳಿದಂತೆ, ‘ಗ್ರಾಮೋದ್ಧಾರವೇ ದೇಶೋದ್ಧಾರ’ ಎನ್ನುವ ಮಾತಿಗೆ ಮಹಾರಾಜರು ಮಾನ್ಯತೆ ನೀಡಿದ್ದರು. ಮೈಸೂರು ಸಂಸ್ಥಾನದ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ದೇಶಕ್ಕೆ ಮಾದರಿಯಾಗುವಂತಹ ‘ಪಂಚವಾರ್ಷಿಕ ಯೋಜನೆ’ಯನ್ನು 1942ರಲ್ಲಿ ಜಾರಿಗೊಳಿಸಿದರು. ಕೆರೆ ಕಟ್ಟೆಗಳನ್ನು ಅಭಿವೃದ್ಧಿಪಡಿಸಿ ಪ್ರತಿ ಗ್ರಾಮಕ್ಕೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು. ತಾಲೂಕು ಮಟ್ಟದಲ್ಲಿ ಆಸ್ಪತ್ರೆಗಳು ತೆರೆದವು. ಅರಣ್ಯೀಕರಣಕ್ಕಾಗಿ ಗ್ರಾಮಗಳಲ್ಲಿ ಮರಗಳನ್ನು ನೆಟ್ಟು ತೋಪು ಬೆಳೆಸುವುದಕ್ಕೆ ಜಾಗ ಗುರುತಿಸಲಾಯಿತು. ಗ್ರಾಮಸ್ಥರ ಜ್ಞಾನಾರ್ಜಾನೆಗೆ ಗ್ರಂಥಾಲಯ ತೆರೆಯಲಾಯಿತು. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಗುಡಿ ಕೈಗಾರಿಕೆ ತೆರೆದು ಸ್ಥಳೀಯ ಯುವಕರಿಗೆ ಉದ್ಯೋಗ ನೀಡುವುದಕ್ಕೆ ನೀಲಿ ನಕ್ಷೆ ತಯಾರಾಯಿತು. ಕೃಷಿ ಚಟುವಟಿಕೆಗಳಲ್ಲಿ ತಂತ್ರಜ್ಞಾನ ಬಳಸಿಕೊಳ್ಳಲು ಆದ್ಯತೆ ನೀಡಿ ಕೃಷಿ ಡಿಪೋಗಳನ್ನು ತೆರೆಯಲಾಯಿತು. ಭೂರಹಿತರಿಗೆ, ಶೋಷಿತರಿಗೆ ದರಕಾಸ್ತು ಜಮೀನು ನೀಡಿ ಕೃಷಿ ಚಟುವಟಿಕೆ ಪ್ರೋತ್ಸಾಹಿಸಲಾಯಿತು. ಗ್ರಾಮೀಣ ಪುನರ್‌ ರಚನೆ ಕಾರ್ಯಕ್ರಮಕ್ಕಾಗಿ ಪಂಚವಾರ್ಷಿಕ ಯೋಜನೆಯಡಿ ಸುಮಾರು 35 ಕೋಟಿ ರುಪಾಯಿ ಅನುದಾನ ಮೀಸಲಿಡಲಾಯಿತು. ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಗ್ರಾಮೋದ್ಧಾರಕ್ಕಾಗಿ ಪಂಚವಾರ್ಷಿಕ ಯೋಜನೆ ರಚಿಸಿ ಜಾರಿಗೆ ತಂದ ಕೀರ್ತಿ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್‌ ಅವರಿಗೆ ಸಲ್ಲುತ್ತದೆ. ಸ್ವಾತಂತ್ರ್ಯ ನಂತರ 1952ರಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರ್‌ ಲಾಲ್‌ ನೆಹರೂ ಅವರು, ಮೈಸೂರು ಸಂಸ್ಥಾನದಲ್ಲಿ ಅನುಷ್ಠಾನಗೊಂಡಿದ್ದ ಪಂಚವಾರ್ಷಿಕ ಯೋಜನೆಯ ಮಾದರಿಯನ್ನು ಹತ್ತು ವರ್ಷಗಳ ಬಳಿಕ 1952ರಲ್ಲಿ ಭಾರತ ದೇಶದಲ್ಲಿ ಜಾರಿಗೊಳಿಸಿದ್ದು ಈಗ ಇತಿಹಾಸ.

ಯುರೋಪಿಯನ್‌ ದೇಶಗಳಲ್ಲಿ ನಡೆಯುತ್ತಿದ್ದ ವ್ಯವಸ್ಥಿತ ಹೈನುಗಾರಿಕೆ ಮಾದರಿಯಲ್ಲಿಯೇ ಇಲ್ಲಿನ ಗ್ರಾಮಗಳಲ್ಲಿ ಹಸು, ಕುರಿ, ಕೋಳಿ ಸಾಕಾಣಿಕೆ ಮಾಡಲು ವ್ಯವಸ್ಥೆ ಮಾಡಲಾಯಿತು. ಗ್ರಾಮಗಳಲ್ಲಿಯೇ ಡೈರಿ ಘಟಕಗಳನ್ನು ತೆರೆಯಲಾಯಿತು. ಪಶುಗಳಿಗಾಗಿಯೇ ಪ್ರತ್ಯೇಕ ಪಶು ವೈದ್ಯಕೀಯ ಆಸ್ಪತ್ರೆಗಳನ್ನು ತಾಲೂಕು ಮಟ್ಟದಲ್ಲಿ ತೆರೆಯಲಾಯಿತು.

ಹರಿಜನರಿಗೆ ದೇವಾಲಯ ಪ್ರವೇಶ

ಮೈಸೂರು ಸಂಸ್ಥಾನದಲ್ಲಿ ಹರಿಜನರನ್ನು ಪಂಚಮರೆಂದು ಕರೆಯಲಾಗುತ್ತಿತ್ತು. ಇವರ ಅಭಿವೃದ್ಧಿ ಹಾಗೂ ಸಮಾನತೆಯಿಂದಲೇ ಸಾಮರಸ್ಯದ, ಅಭಿವೃದ್ಧಿಪರ ಸಮಾಜ ನಿರ್ಮಾಣ ಸಾಧ್ಯ ಎನ್ನುವುದನ್ನು ಅರಿತಿದ್ದ 10ನೇ ಚಾಮರಾಜ ಒಡೆಯರ್‌ ಅವರು, ತಮ್ಮ ಆಳ್ವಿಕೆ ಕಾಲದಿಂದಲೇ ಹರಿಜನರ ಅಭಿವೃದ್ಧಿಗೆ ಪ್ರಾಶಸ್ತ್ಯ ನೀಡುತ್ತಾ ಬಂದಿದ್ದರು. ತದನಂತರ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹಾಗೂ ಜಯಚಾಮರಾಜೇಂದ್ರ ಒಡೆಯರ್‌ ಅವರ ಕಾಲದಲ್ಲಿ ಹರಿಜನರ ಅಭಿವೃದ್ಧಿ ಕಾರ್ಯ ಐತಿಹಾಸಿಕವಾಗಿ ನಡೆಯಿತು. ನಾಲ್ವಡಿ ಕೃಷ್ಣರಾಜ ಒಡೆಯರ್‌ ಮಹಾರಾಷ್ಟಕ್ಕೆ ತೆರಳಿ ದೀನದಲಿತರಿಗೆ ನಡೆಯುತ್ತಿದ್ದ ಶಾಲೆಗಳು, ಕೌಶಲ್ಯ ತರಬೇತಿ ಕೇಂದ್ರಗಳಿಗೆ ಭೇಟಿ ನೀಡಿದ್ದರು. ಹರಿಜನರ ಮಕ್ಕಳು ಶಿಕ್ಷಣ ಪಡೆಯಲು ಅನುವು ಮಾಡಿಕೊಟ್ಟಿದ್ದ ಬರೋಡ ಮಹಾರಾಜರ ಕಾರ್ಯ ವೈಖರಿಯನ್ನು ನೋಡಿ ತಿಳಿದುಕೊಂಡಿದ್ದರು.

Mysore king Rajayogi Jayachamaraja Wadiyar birth centenary year Valedictory function

ಮೈಸೂರು ರಾಜ ಸಂಸ್ಥಾನದಲ್ಲಿ ಅರಮನೆಗೆ ಹರಿಜನರಿಗೆ, ದೀನರಿಗೆ ಪ್ರವೇಶ ಅವಕಾಶ ನೀಡಲಾಗಿತ್ತು. ಅದನ್ನು ಮುಂದುವರೆಸಿದ ಜಯಚಾಮರಾಜೇಂದ್ರ ಒಡೆಯರ್‌ ಅವರು ಅರಮನೆ ದರ್ಬಾರಿಗೆ ಹರಿಜನರಿಗೆ ಪ್ರವೇಶ ನೀಡುವ ಮೂಲಕ ದೊಡ್ಡಪ್ಪನವರ ಕಾರ್ಯವನ್ನು ಮುಂದುವರೆಸಿದರು. 1942ರಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ ದೇವಾಲಯಗಳಿಗೆ ಹರಿಜನರಿಗೆ ಪ್ರವೇಶ ಕಲ್ಪಿಸಿದರು.

ಸಮಾಜ ಸುಧಾರಣೆಗಳ ಪರ್ವ

ಅನಗತ್ಯವಾಗಿ ಗೋವಿನ ಹತ್ಯೆ ಮಾಡುವುದನ್ನು ತಡೆಯಲಾಯಿತು. ಕೆಲಸ ಮಾಡುವ ಸಂದರ್ಭದಲ್ಲಿ ಕೂಲಿ ಕಾರ್ಮಿಕರು ಅಪಘಾತಕ್ಕೀಡಾದರೆ ಅವರಿಗೆ ಪರಿಹಾರವನ್ನು ನೀಡುವ ಕಾನೂನು ಜಾರಿಗೆ ಬಂದಿತು. ಗ್ರಾಮ, ಪಟ್ಟಣಗಳ ಸ್ವಚ್ಛತೆಗೆ ಆದ್ಯತೆ ನೀಡಿ ಪೌರಕಾರ್ಮಿಕರಿಗೆ ಉಚಿತ ವಸತಿ ಸೌಲಭ್ಯ ಒದಗಿಸಲಾಯಿತು. ಅವರಿಗೆಂದು ಅಚ್ಚುಕಟ್ಟಾದ ಮನೆಗಳನ್ನೂ ನಿರ್ಮಿಸಿ ಕೊಡಲಾಯಿತು.

ಅಪರಾಧಗಳನ್ನು ಮಾಡಿ ಸೆರಮನೆಗೆ ಸೇರಿದ್ದ ಕೈದಿಗಳನ್ನು ಕೈದಿಗಳೆಂದು ಪರಿಗಣಿಸದೆ ಅವರು ಪರಿಸ್ಥಿತಿಯ ಕೈಗೂಸು ಎಂದು ವ್ಯಾಖ್ಯಾನ ಮಾಡಲಾಯಿತು. ಅದಕ್ಕಾಗಿಯೇ ಯುರೋಪಿನ ಮಾದರಿಯಲ್ಲಿ ಅಪರಾ​ಧಿಗಳ ಮನಪರಿವರ್ತನೆಗೆ ದೇಶದಲ್ಲಿಯೇ ಮಾದರಿಯಾಗಿ ಪುನಶ್ಚೇತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಜೈಲಿನಲ್ಲಿಯೇ ಕೈದಿಗಳಿಗೆ ತರಬೇತಿ ಕಾರ್ಯಕ್ರಮಗಳು ನಡೆದವು. ಅಲ್ಲದೆ ಕೈದಿಗಳೂ ಬೇರೆ ಜನರಂತೆ ಸಮಾಜದಲ್ಲಿ ಗೌರವಯುತ ಜೀನವ ನಡೆಸಲು ಪ್ರೋತ್ಸಾಹ ನೀಡಲಾಯಿತು.

ರಾಜಕೀಯ ಮೀಸಲಾತಿ

1940ರ ಆರಂಭದಿಂದಲೂ ರಾಜಕೀಯವಾಗಿ ಹರಿಜನರಿಗೆ ಮೀಸಲಾತಿ ಕಲ್ಪಿಸಬೇಕೆಂಬ ಒತ್ತಾಯ ಹೆಚ್ಚಿತ್ತು. ಇದಕ್ಕೆ ಸ್ಪಂದಿಸಿದ ಜಯಚಾಮರಾಜೇಂದ್ರ ಒಡೆಯರು ಹರಿಜನರಿಗಾಗಿ ರಾಜಕೀಯ ಆಡಳಿತ ಕ್ಷೇತ್ರದಲ್ಲಿ 30 ಸ್ಥಾನಗಳನ್ನು ಹಾಗೂ ಮೇಲ್ಮನೆಯಲ್ಲಿ 4 ಸ್ಥಾನಗಳನ್ನು ಮೀಸಲಿಟ್ಟರು. ಅಂದು ಮೈಸೂರು ಸಂಸ್ಥಾನದಲ್ಲಿ ಗುರುತಿಸಲಾಗಿದ್ದ 9 ಜಿಲ್ಲೆಗಳಿಂದಲೂ ರೋಟೆಷನ್‌ ಆಧಾರದ ಮೇಲೆ ಸದಸ್ಯರ ಆಯ್ಕೆ ಮಾಡಲು ಅವಕಾಶ ಕಲ್ಪಿಸಿದರು. ಇನ್ನೂ ಒಂದು ಹೆಜ್ಜೆ ಮುಂದೆ ನಡೆದು ಆ 30 ಸ್ಥಾನಗಳ ಪೈಕಿ ಹರಿಜನರಲ್ಲಿಯೇ ಹಿಂದುಳಿದಿದ್ದ ಹಾಗೂ ಬೆರಳೆಣಿಕೆಯಷ್ಟುಇದ್ದ ಕೊರಚರು, ವಡ್ಡರು (ಬೋವಿ), ಲಂಬಾಣಿಗಳಿಗೆ ತಲಾ ಒಂದೊಂದು ಸ್ಥಾನವನ್ನು ಮೀಸಲಿಟ್ಟರು.

Mysore king Rajayogi Jayachamaraja Wadiyar birth centenary year Valedictory function

ಭಿಕ್ಷುಕರ ಪುನರ್ವಸತಿ ಕೇಂದ್ರ

ಮಹಾರಾಜರು ಅಂಗವಿಕಲರು, ಭಿಕ್ಷುಕರನ್ನೂ ಕಡೆಗಣಿಸಲಿಲ್ಲ. ಅವರೂ ಸಹ ಬೇರೆ ಜನರಂತೆ ಸಮಾನರಾಗಿ ಬದುಕಬೇಕೆಂದು ಇಚ್ಛಿಸಿದರು. ಅದಕ್ಕಾಗಿ 1943ರಲ್ಲಿ ಭಿಕ್ಷುಕರ ಪುನರ್ವಸತಿ ಕೇಂದ್ರವನ್ನು ತೆರೆದರು. ಅಂಗವಿಕಲರು, ನಿರಾಶ್ರಿತರಿಗಾಗಿ ನಿರಾಶ್ರಿತರ ಪರಿಹಾರ ಕೇಂದ್ರವನ್ನು ತೆರೆದರು. ಇದು ಸಹ ಭಾರತ ದೇಶದಲ್ಲಿಯೇ ಪ್ರಥಮ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಮಾತ್ರವಲ್ಲದೆ, ಮೈಸೂರು ಸಂಸ್ಥಾನದಲ್ಲಿ ಲಂಬಾಣಿಗಳಿಗೆ ಅಂಟಿಕೊಂಡಿದ್ದ ಕ್ರಿಮಿನಲ್‌ ಪಟ್ಟಕಿತ್ತೊಗೆದು ಅವರಿಗೆ ಸಾಮಾಜಿಕವಾಗಿ ಇತರೆ ಸಮುದಾಯದೊಂದಿಗೆ ಶಾಂತಿಯುತ ಬಾಳ್ವೆ ನಡೆಸಲು ಅನುಕೂಲ ಮಾಡಿಕೊಟ್ಟರು.

* ಲೇಖಕ ಮೈಸೂರು ಸುರೇಶ್‌ ರಚಿಸಿರುವ ‘ರಾಜಯೋಗಿ ಶ್ರೀ ಜಯಚಾಮರಾಜೇಂದ್ರ ಒಡೆಯರ್‌ ಬಹದ್ದೂರ್‌’ ಕೃತಿಯ ಆಯ್ದ ಭಾಗ.

ರಾಜಯೋಗಿಯ ಪರಿಚಯ

ರಾಜಯೋಗಿ ಜಯಚಾಮರಾಜೇಂದ್ರ ಒಡೆಯರ್‌ ಅವರು ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್‌ ಹಾಗೂ ಯುವರಾಣಿ ಕೆಂಪುಚೆಲುವರಾಜಮ್ಮಣಿರವರ ಪುತ್ರ. ಮೈಸೂರು ಸಂಸ್ಥಾನದ ಪ್ರಸಿದ್ಧ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಬಹದ್ದೂರ್‌ ಅವರು ಜಯಚಾಮರಾಜೇಂದ್ರ ಒಡೆಯರ್‌ ಅವರ ದೊಡ್ಡಪ್ಪ. ಮಾಚ್‌ರ್‍ 28, 1940ರಂದು ಯುವರಾಜನಾಗಿ ಪಟ್ಟಾಭಿಷೇಕ ಮಾಡಿಸಿಕೊಂಡ ಜಯಚಾಮರಾಜೇಂದ್ರ ಒಡೆಯರ್‌ ಅವರು ಸೆಪ್ಟೆಂಬರ್‌ 8, 1940ರಂದು ಮಹಾರಾಜರಾದರು. ಜೈಪುರದ ಮಹಾರಾಣಿ ಸತ್ಯಪ್ರೇಮ ಕುಮಾರಿ, ತ್ರಿಪುರ ಸುಂದರಮ್ಮಣ್ಣಿಯವರು ಇವರ ಪತ್ನಿಯರು. ಗಾಯತ್ರಿದೇವಿ, ಮೀನಾಕ್ಷಿದೇವಿ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌, ಕಾಮಾಕ್ಷಿದೇವಿ, ಇಂದ್ರಾಕ್ಷಿದೇವಿ ಹಾಗೂ ವಿಶಾಲಾಕ್ಷಿ ದೇವಿ ಅವರು ಇವರ ಪುತ್ರ-ಪುತ್ರಿಯರು.

ಜಯಚಾಮರಾಜೇಂದ್ರ ಒಡೆಯರ್‌ ಹೆಗ್ಗಳಿಕೆ

ಮೈಸೂರು ವಿವಿ, ಬನಾರಸ್‌ ವಿವಿ, ಅಣ್ಣಾಮಲೈ ವಿವಿ, ಲಂಡನ್‌ ಸ್ಕೂಲ್‌ ಆಫ್‌ ಮ್ಯೂಸಿಕ್‌ನಿಂದ ಪದವಿಗಳನ್ನು ಪಡೆದಿದ್ದ ಜಯಚಾಮರಾಜೇಂದ್ರ ಒಡೆಯರ್‌, ಲಂಡನ್‌ ಟ್ರಿನಿಟಿ ಕಾಲೇಜ್‌ ಆಫ್‌ ಮ್ಯೂಸಿಕ್‌ ಹಾಗೂ ಕ್ವೀನ್ಸ್‌ಲ್ಯಾಂಡ್‌ ವಿವಿಯಿಂದ ಗೌರವ ಪದವಿಗಳನ್ನೂ ಪಡೆದಿದ್ದರು. ಬ್ರಿಟಿಷ್‌ ಸರ್ಕಾರ ಇವರಿಗೆ ನೈಟ್‌ ಗ್ರಾಂಡ್‌ ಕಮಾಂಡರ್‌ ಆಫ್‌ ದಿ ಸ್ಟಾರ್‌ ಆಫ್‌ ಇಂಡಿಯಾ, ನೈಟ್‌ ಗ್ರಾಂಡ್‌ ಕ್ರಾಸ್‌ ಆಫ್‌ ದಿ ಆರ್ಡರ್‌ ಆಫ್‌ ದಿ ಬಾತ್‌ ಮುಂತಾದ ಗೌರವಗಳನ್ನು ನೀಡಿತ್ತು. 1956ರಿಂದ 1964ರವರೆಗೆ ಮೈಸೂರು ರಾಜ್ಯದ ರಾಜ್ಯಪಾಲರಾಗಿದ್ದ ಇವರು, 1964ರಿಂದ ಎರಡು ವರ್ಷಗಳ ಕಾಲ ಮದ್ರಾಸ್‌ ರಾಜ್ಯದ ರಾಜ್ಯಪಾಲರೂ ಆಗಿದ್ದರು. ಕೇಂದ್ರ ಸಂಗೀತ ನಾಟಕ ಅಕಾಡೆಮಿ, ಭಾರತೀಯ ವನ್ಯಜೀವಿ ಮಂಡಳಿ ಹಾಗೂ ವಿಶ್ವ ಹಿಂದೂ ಪರಿಷತ್‌ನ ಅಧ್ಯಕ್ಷರಾಗಿದ್ದರು. ವಿದೇಶಗಳ ಹಲವು ವಿವಿಗಳಲ್ಲಿ ವಿಶೇಷ ಉಪನ್ಯಾಸಗಳನ್ನು ನೀಡಿದ್ದ ಜಯಚಾಮರಾಜೇಂದ್ರ ಒಡೆಯರ್‌, ಇಂಗ್ಲಿಷ್‌ನಲ್ಲಿ ಭಗವದ್ಗೀತೆ, ದತ್ತಾತ್ರೇಯ ಸೇರಿ ಹಲವು ಕೃತಿಗಳನ್ನು ರಚಿಸಿದ್ದಾರೆ. ಜಯಚಾಮರಾಜೇಂದ್ರ ಗ್ರಂಥರತ್ನಮಾಲೆ ಸ್ಥಾಪಿಸಿ ಸಂಸ್ಕೃತದಿಂದ ಕನ್ನಡಕ್ಕೆ ವೇದ, ಉಪನಿಷತ್ತು ಕೃತಿಗಳ ತರ್ಜುಮೆ ಮಾಡಿಸಿದರು. ಲಂಡನ್‌, ಅಮೆರಿಕದ ಪ್ರಕಾಶಕರಿಂದ ದಿ ಎಸ್ತೆಟಿಕ್‌ ಫಿಲಾಸಫಿ ಆಫ್‌ ಇಂಡಿಯಾ, ದಿ ಆರ್ಟ್‌ ಆಫ್‌ ಮೈಂಡ್‌ ಮೊದಲಾದ ಹಲವು ಕೃತಿಗಳನ್ನು ಪ್ರಕಟಿಸಿದ್ದರು. ಕನ್ನಡಾಂಬೆ ಭುವನೇಶ್ವರಿ ದೇವಿಗೆ ದೇವಸ್ಥಾನವನ್ನೂ ನಿರ್ಮಾಣ ಮಾಡಿಸಿದ್ದರು.

ಅದ್ವಿತೀಯ ಮಹಾರಾಜ

ರಾಜತ್ವ ಹಾಗೂ ಪ್ರಜಾತಂತ್ರವನ್ನು ಸಮಚಿತ್ತವಾಗಿ ಅನುಭಸಿದ ಅಪರೂಪದ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್‌. ಮೈಸೂರು ಹಾಗೂ ಮದ್ರಾಸು ರಾಜ್ಯಗಳ ರಾಜ್ಯಪಾಲರಾಗಿ, ದೇಶೀಯ ಹಾಗೂ ಪಾಶ್ಚಾತ್ಯ ಸಂಗೀತ ಪ್ರಕಾರಗಳ ಕಲಾ ಸಾಧಕರಾಗಿ ಅಪಾರ ಸೇವೆ ಸಲ್ಲಿಸಿದ್ದರು. ದೇಶದಲ್ಲೇ ಮೊದಲ ಬಾರಿ ಗ್ರಾಮೋದ್ಧಾರಕ್ಕಾಗಿ ಪಂಚವಾರ್ಷಿಕ ಯೋಜನೆ ಜಾರಿಗೆ ತಂದವರು ಹಾಗೂ ಆದರ್ಶ ಗ್ರಾಮದ ಪರಿಕಲ್ಪನೆಯ ರೂವಾರಿ ಇವರು. ಭಾರತೀಯ ವನ್ಯಜೀವಿ ಮಂಡಳಿ ಪ್ರಥಮ ಅಧ್ಯಕ್ಷರು, ಮೈಸೂರು ರಾಯಲ್‌ ಅಸೆಂಬ್ಲಿಯಲ್ಲಿ ಪರಿಶಿಷ್ಟಜಾತಿ ಮತ್ತು ಪಂಗಡದವರಿಗೆ ರಾಜಕೀಯ ಮೀಸಲಾತಿ ಕಲ್ಪಿಸಿಕೊಟ್ಟಸಾಮಾಜಿಕ ನ್ಯಾಯದ ಪರಿಕಲ್ಪನೆಯುಳ್ಳ ಮಹಾರಾಜರಾಗಿದ್ದರು. ಇವರು ಮೈಸೂರು ಆಕಾಶವಾಣಿಯ ರೂವಾರಿ, ಜೋಗ ಜಲವಿದ್ಯುತ್‌ ಉತ್ಪಾದನಾ ಕೇಂದ್ರದ ರೂವಾರಿ ಹಾಗೂ ಬೆಂಗಳೂರಿನ ಟಾಟಾ ಇನ್ಸ್‌ಟಿಟ್ಯೂಟ್‌ ಸ್ಥಾಪನೆಗೆ ಕಾರಣಕರ್ತರೂ ಹೌದು. ಭಾರತ ಸರ್ಕಾರದಲ್ಲಿ ರಾಜ ಸಂಸ್ಥಾನಗಳ ವಿಲೀನದ ಒಪ್ಪದಂಕ್ಕೆ ಅಂಕಿತ ಹಾಕಿದ ದೇಶದ ಪ್ರಥಮ ಮಹಾರಾಜರು. ವಯಸ್ಕರಿಗೂ ಶಿಕ್ಷಣ ನೀಡಲು ನೈಟ್‌ ಸ್ಕೂಲ್‌ ಸ್ಥಾಪಿಸಿದ, ಹರಿಜನರಿಗೆ ದೇವಾಲಯದ ಪ್ರವೇಶವನ್ನು ಕಲ್ಪಿಸಿಕೊಟ್ಟು ಸಮ ಸಮಾಜದ ನಿರ್ಮಾಣಕ್ಕೆ ಪ್ರೋತ್ಸಾಹಿಸಿದ, ಭಿಕ್ಷಾಟನೆ ನಿರ್ಮೂಲನೆಗಾಗಿ ಬೆಂಗಳೂರಿನ ಸುಮ್ಮನಹಳ್ಳಿಯಲ್ಲಿ ಭಿಕ್ಷುಕರ ನಿರ್ಮೂಲನಾ ಕೇಂದ್ರವನ್ನು ಸ್ಥಾಪಿಸಿದ ಹಾಗೂ ಲಂಬಾಣಿ ಸಮುದಾಯಕ್ಕೆ ರಾಯಲ್‌ ಅಸೆಂಬ್ಲಿ ಗೌರವ ನೀಡಿದ ದೂರದರ್ಶಿಯೂ ಹೌದು.

Follow Us:
Download App:
  • android
  • ios