ಮೈಸೂರು [ನ.09]: ಇಂದು ಭಾರತ ದೇಶದ ಮಹತ್ವದ ರಾಮಜನ್ಮಭೂಮಿ ತೀರ್ಪು ಪ್ರಕಟ ಹಿನ್ನೆಲೆ ರಾಜ್ಯದ ಜನರಿಗೆ ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಮನವಿ ಮಾಡಿದ್ದಾರೆ.  ಅಯೋಧ್ಯೆ ತೀರ್ಪು ಯಾರ ಪರವಾಗಿಯೇ ಬಂದರೂ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. 

ಭಾರತದ ಕಾನೂನು ಇತಿಹಾಸದಲ್ಲಿಯೇ ಅತ್ಯಂತ ಸುದೀರ್ಘ ಕಾಲ ರಾಮಜನ್ಮ ಭೂಮಿ ಹಾಗೂ ಬಾಬರಿ ಮಸೀದಿ ವಿವಾದದ ವಿಚಾರಣೆ ನಡೆದಿದೆ.  ಕಗ್ಗಂಟಾಗಿದ್ದ ಈ ವಿವಾದವನ್ನು ನ್ಯಾಯಾಲಯದ ಮೂಲಕವೇ ಬಗೆಹರಿಸಿಕೊಳ್ಳಲು ನಿರ್ಧರಿಸಿದ ಎರಡೂ ಸಮುದಾಯದ ಎಲ್ಲ ಧರ್ಮಗುರುಗಳು ಮತ್ತು ಸಮುದಾಯದವರ ತಾಳ್ಮೆ , ಶಾಂತಿಪ್ರಿಯತೆ ಪ್ರಶಂಸಾರ್ಹ ಎಂದರು.

ಸರ್ವೋಚ್ಚ ನ್ಯಾಯಲಯ ಯಾವುದೇ ತೀರ್ಮಾನ ನೀಡಿದರೂ ಎರಡು ಸಮುದಾಯದವರು ಅದನ್ನು ಅತ್ಯಂತ ಗೌರವದಿಂದ ಸ್ವೀಕರಿಸಬೇಕು. ವಿಜಯೋತ್ಸವ ಆಚರಿಸುವುದು ಅಥವಾ ಯಾವುದೇ ರೀತಿಯ ಪ್ರಚೋದನಕಾರಿ ಪ್ರತಿಕ್ರಿಯೆಗಳನ್ನು ನೀಡಿ ಮತ್ತೊಂದು ಸಮುದಾಯದ ಭಾವನೆಗಳಿಗೆ ನೋವಾಗದಂತೆ ನಡೆದುಕೊಳ್ಳಬೇಕಾದುದು ಅಗತ್ಯ ಎಂದು ಸ್ವಾಮೀಜಿ ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇಂದು ಪ್ರಕಟವಾಗುವ ಅಯೋಧ್ಯೆ ತೀರ್ಪಲ್ಲಿ ರಾಷ್ಟ್ರದ ಕ್ಷೇಮ ಅಡಗಿದೆ ಎಂಬುದನ್ನು ಎಲ್ಲರೂ ಮನಗಾಣಬೇಕು.  ಎಲ್ಲೆಡೆಯೂ ಶಾಂತಿ - ಸೌಹಾರ್ದತೆ ಕಂಪು ಹರಡಿ ದೇಶದ ಸಮಗ್ರತೆಯನ್ನು ಕಾಪಾಡಬೇಕಾದುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.