ಪರಂ ಬಣದಿಂದ ಸಿದ್ದರಾಮಯ್ಯಗೆ ಹುದ್ದೆ ತಪ್ಪಿಸಲು ಪ್ಲಾನ್..?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 21, Jul 2018, 7:31 AM IST
G Parameshwar Team Plan Siddaramaiah Disembark from the post
Highlights

ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೇ ಮಸಲತ್ತು ನಡೆಸಿದ್ದಾರಾ ಎನ್ನುವ ಅನುಮಾನವೊಂದು ಇದೀಗ ವ್ಯಕ್ತವಾಗಿದೆ. ಅದಕ್ಕೆ ಕಾರಣ ಅವರ ಬಳಿ ಇರುವ ಮೂರು ಹುದ್ದೆಗಳಲ್ಲಿ ಒಂದು ಹುದ್ದೆಯನ್ನು ತಪ್ಪಿಸಲು ಪ್ಲಾನ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. 

 

ಬೆಂಗಳೂರು :  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಹೈಕಮಾಂಡ್ ನೇಮಕ ಮಾಡಿದ ಬೆನ್ನಲ್ಲೇ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ಕೆಳಗಿಳಿಸಬೇಕು ಎಂಬ ಒತ್ತಡ  ನಿರ್ಮಾಣ ಮಾಡುವ ಸಣ್ಣ ಧ್ವನಿಯೊಂದನ್ನು ಹುಟ್ಟುಹಾಕಲು ಪ್ರಯತ್ನ ಆರಂಭವಾಗಿದೆ. ಕಾಂಗ್ರೆಸ್  ಹೈಕಮಾಂಡ್ ಈ ಬೇಡಿಕೆಯತ್ತ ಕೇವಲ ಗಮನ ನೀಡಿದರೂ ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟವಾಗಿ ಇಬ್ಭಾಗವಾಗಲಿದ್ದು, ದೊಡ್ಡದೊಂದು ಬಣ ಸಂಘರ್ಷ ಆರಂಭವಾಗುವ ಎಲ್ಲಾ ಸಾಧ್ಯತೆಯಿದೆ.

ಸಿದ್ದರಾಮಯ್ಯ ಅವರು ಪ್ರಸ್ತುತ ಮೈತ್ರಿ ಕೂಟದ ಉಭಯ ಪಕ್ಷಗಳ ನಡುವೆ ಹೊಂದಾಣಿಕೆ ಮೂಡಿಸುವ ಸಮನ್ವಯ ಸಮಿತಿಯ ಅಧ್ಯಕ್ಷ ರಾಗಿದ್ದಾರೆ. ಜತೆಗೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ. ಇದರ ಜತೆಗೆ ಈಗ ದೆಹಲಿ ಮಟ್ಟದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರೂ ಆಗಿ ನೇಮಕಗೊಂಡಿದ್ದಾರೆ. ಸಿದ್ದರಾಮಯ್ಯ ಅವರ ಬಳಿ ಮೂರು ಪ್ರಮುಖ ಹುದ್ದೆಗಳು ಇರುವುದರಿಂದ ಈ ಪೈಕಿ ಒಂದನ್ನು ಹಿಂಪಡೆಯಬೇಕು ಎಂಬ ಧ್ವನಿಯೊಂದನ್ನು ಹುಟ್ಟುಹಾಕುವ ಪ್ರಯತ್ನ ನಡೆದಿದೆ. ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರ ಬಣದ  ಕಡೆಯಿಂದ ಕೇಳಿಬರಲು ಆರಂಭವಾಗಿರುವ ಈ ಬೇಡಿಕೆಯ ಮುಖ್ಯ ಉದ್ದೇಶ ಶಾಸಕಾಂಗ ಪಕ್ಷದ ನಾಯಕನ ಸ್ಥಾನವನ್ನು ಸಿದ್ದರಾಮಯ್ಯ ಅವರ ಕೈಜಾರುವಂತೆ ಮಾಡುವುದು.

ಇಷ್ಟಾದರೆ ಶಾಸಕರ ಮೇಲೆ ಸಿದ್ದರಾಮಯ್ಯ ಅವರು ಹೊಂದಿರುವ ಹಿಡಿತ ತಪ್ಪುತ್ತದೆ ಎಂಬುದು ಲೆಕ್ಕಾಚಾರ. ಸಿದ್ದರಾಮಯ್ಯ ಅವರು ಮೂರು  ಸ್ಥಾನ ಹೊಂದಿದ್ದಾರೆ. ಒಬ್ಬ ವ್ಯಕ್ತಿಗೆ ಮೂರು ಸ್ಥಾನ ನೀಡುವುದು ಸರಿಯಲ್ಲ. ಹೀಗಾಗಿ ಸಿಎಲ್‌ಪಿ ಪಕ್ಷದ ನಾಯಕನ ಸ್ಥಾನವನ್ನು ಅವರಿಂದ ಹಿಂಪಡೆಯಬೇಕು ಎಂಬ ಧ್ವನಿ ಹುಟ್ಟಿಹಾಕುವ ಪ್ರಯತ್ನವಿದು. ಮೂಲಗಳ ಪ್ರಕಾರ ಇಂತಹದೊಂದು ಚರ್ಚೆ ಇನ್ನೂ ಪಕ್ಷದ ಹಂತದಲ್ಲಿ ಆರಂಭವಾಗಿಲ್ಲ. ಆದರೆ, ಮಾಧ್ಯಮಗಳಲ್ಲಿ ತೇಲಿಬಿಡುವ ಮೂಲಕ ಇಂತಹ ಧ್ವನಿಯನ್ನು ಹುಟ್ಟುಹಾಕುವ ಪ್ರಯತ್ನ ನಡೆದಿದೆ ಎಂಬ ಆಶಂಕೆ ಸಿದ್ದರಾಮಯ್ಯ ಅವರ ಬಣದ್ದು. 

ಈ ಬಣದ ಪ್ರಕಾರ ಸಿದ್ದರಾಮಯ್ಯ ಮೂರು ಹುದ್ದೆಗಳನ್ನು ಹೊಂದಿದ್ದರೂ ಆ ಹುದ್ದೆಗಳು ಮೂರು ಪ್ರತ್ಯೇಕ ಹೊಣೆಗಾರಿಕೆಗಳನ್ನು ಹೊಂದಿವೆ. ಸಮನ್ವಯ ಸಮಿತಿ ಸರ್ಕಾರದಲ್ಲಿ ಹೊಂದಾಣಿಕೆ ಮೂಡಿಸುವ ಕೆಲಸ ಮಾಡಿದರೆ, ಕಾರ್ಯಕಾರಿ ಸಮಿತಿ ಸದಸ್ಯತ್ವವು ಪಕ್ಷದ ರಾಷ್ಟ್ರೀಯ ಮಟ್ಟದ ನೀತಿ ನಿರೂಪಣೆ ವಿಚಾರದಲ್ಲಿ ಸಲಹೆ ಪಡೆಯುವ ಮಟ್ಟಕ್ಕೆ ಸೀಮಿತವಾಗಿದೆ. ವಾಸ್ತವವಾಗಿ ಸಿದ್ದರಾಮಯ್ಯ ಅವರ ಪ್ರಮುಖ ಹೊಣೆಗಾರಿಕೆ ಪಕ್ಷದ ಶಾಸಕ ರನ್ನು ಜತೆಗೆ ಇಟ್ಟುಕೊಂಡು ಹೋಗುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನ. ಪ್ರಸ್ತುತ ರಾಜ್ಯದಲ್ಲಿ ಶಾಸಕರನ್ನು ತನ್ನೊಂದಿಗೆ ಒಯ್ಯುವ ಸಾಮರ್ಥ್ಯವಿರು ವುದು ಸಿದ್ದರಾಮಯ್ಯ ಅವರಿಗೆ ಮಾತ್ರ ಮತ್ತು ಶಾಸಕರಲ್ಲೂ ಸಹ ಸಿದ್ದರಾಮಯ್ಯ ಅವರ ಪರ ಒಲವೇ ಹೆಚ್ಚಿದೆ. 

ಲೋಕಸಭೆ ಚುನಾವಣೆಯ ಈ ಹಂತದಲ್ಲಿ ಸಿದ್ದರಾ ಮಯ್ಯ ಅವರನ್ನು ಬದಲಾಯಿಸುವ ಯಾವುದೇ ಪ್ರಯತ್ನ ನಡೆದರೆ ಅದು ಪಕ್ಷ ದಲ್ಲಿ ಬಂಡಾಯ ಹುಟ್ಟಿಹಾಕಿದಂತೆ. ಹೀಗಾಗಿ ಹೈಕಮಾಂಡ್ ಇಂತಹ ಪ್ರಯತ್ನ ಗಳಿಗೆ ಇಂಬು ನೀಡುವುದಿಲ್ಲ ಎಂದು ಸಿದ್ದರಾಮಯ್ಯ ಆಪ್ತರು ಹೇಳುತ್ತಾರೆ. ಆದರೆ, ಕಾರ್ಯಕಾರಿ ಸಮಿತಿಗೆ ಸದಸ್ಯರಾಗಿದ್ದನ್ನು ಬಳಸಿಕೊಂಡು ಸಿದ್ದರಾಮಯ್ಯ ಅವರರನ್ನು ರಾಜ್ಯ ರಾಜಕಾರಣದಿಂದ ದೂರ ಮಾಡಲು ಇದು ಸದವಕಾಶವಾಗಿರುವ ಹಿನ್ನೆಲೆ ಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸ್ಥಾನ ಅವರಿಗೆ ತಪ್ಪುವಂತೆ ಮಾಡುವ ಪ್ರಯತ್ನವನ್ನು ಅವರ ವಿರೋಧಿ ಬಣ ಆರಂಭಿಸಿದೆ. 

ಆದರೆ, ಈ ಪ್ರಯತ್ನ ಸಫಲವಾಗಬೇಕು ಎಂದರೆ ಕಾಂಗ್ರೆಸ್ ಶಾಸಕರಿಂದ ಇಂತಹ ಬದಲಾವಣೆಗೆ ಆಗ್ರಹ ಕೇಳಿಬರಬೇಕು. ಶಾಸಕರ ಬೆಂಬಲ ದೊರೆಯದ ಹೊರತು ಇಂತಹ ಬೇಡಿಕೆಗೆ ಹೈಕಮಾಂಡ್ ಸ್ಪಂದನೆ ನೀಡುವ ಸಾಧ್ಯತೆ ಕಡಿಮೆ. ಈ ದಿಸೆಯಲ್ಲಿ ಸಿದ್ದು ವಿರೋಧಿ ಶಾಸಕರ ಮನವೊಲಿಸುವ ಪ್ರಯತ್ನ ಮಾಡಬೇಕಿದೆ. ಇಂತಹ ಪ್ರಯತ್ನ ಆರಂಭವಾದರೆ ಆಗ ಸಿದ್ದು ಬಣ ಕೂಡ ತಕ್ಕ ಉತ್ತರವನ್ನು ನೀಡಲು ಮುಂದಾಗುವುದು ಸಹಜ. ಇದು ಪಕ್ಷದಲ್ಲಿ ದೊಡ್ಡ  ವಿಪ್ಲವ ಹುಟ್ಟುಹಾಕುವುದು ಖಚಿತ ಎನ್ನಲಾಗುತ್ತಿದೆ.

loader