ಜಮ್ಮು(ಆ.12): ಪಿಡಿಪಿ ಜೊತೆ ಮೈತ್ರಿ ಕಳೆದುಕೊಂಡಿರುವ ಬಿಜೆಪಿ ಮತ್ತೆ ಅದೇ ಪಕ್ಷದ ಜೊತೆ ಸರ್ಕಾರ ನಡೆಸಲು ಕಸರತ್ತು ನಡೆಸುತ್ತಿದೆ.

ಸ್ವತಃ ಈ ಬಗ್ಗೆ ಹೇಳಿಕೆ ನೀಡಿರುವ ಮಾಜಿ ಉಪ ಮುಖ್ಯಮಂತ್ರಿ ಕವಿಂದರ್ ಗುಪ್ತಾ, ರಾಜ್ಯದಲ್ಲಿ ರಾಜ್ಯ ಪಾಲರ ಆಳ್ವಿಕೆ ಶಾಶ್ವತ ಅಲ್ಲ.ಖಂಡಿತಾ  ಸರ್ಕಾರ ರಚನೆಯಾಗಬೇಕಿದೆ. ಕೇಂದ್ರ ಮತ್ತು ರಾಜ್ಯ ನಾಯಕರು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಇತ್ತೀಚಿಗಷ್ಟೆ ಶ್ರೀನಗರಕ್ಕೆ ಭೇಟಿ ನೀಡಿ ಪಿಡಿಪಿಯ ಬಂಡಾಯ ಶಾಸಕರನ್ನು ಭೇಟಿ ಮಾಡಿದ್ದು,  ಪಕ್ಷದ ಹಿರಿಯ ನಾಯಕರಿಗೆ ಸರಕಾರ ರಚಿಸಲು ಹಸಿರು ನಿಶಾನೆ ತೋರಿದ್ದಾರೆ ಎನ್ನಲಾಗಿದೆ.

ಸ್ವಾತಂತ್ರ್ಯೋತ್ಸವದ ಬಳಿಕ ಪಿಡಿಪಿ ಬಂಡಾಯ ನಾಯಕರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿ ಮಾಡಲಿದ್ದು ಸರ್ಕಾರ ರಚನೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.