ಮೊಬೈಲ್ ರೀಚಾರ್ಜ್ ಮಾಡೋಕೆ ಜಿಯೋ ಅಥವಾ ಏರ್ಟೆಲ್ ಆ್ಯಪ್ ತೆರೆದ್ರೆ ಹಲವು ಬಗೆಯ ರೀಚಾರ್ಜ್ ಪ್ಲಾನ್ಗಳು ಕಾಣಿಸುತ್ವೆ. ಇದರಲ್ಲಿ ಡೇಟಾ, ಅನಿಯಮಿತ ಕರೆ ಹಾಗೂ ಒಟಿಟಿ ಸೌಲಭ್ಯಗಳಿರುವ ಪ್ಲಾನ್ಗಳು ಸೇರಿರುತ್ತವೆ. ಆದ್ರೆ ಇಂಟರ್ನೆಟ್ ಬೇಡ ಎನ್ನುವವರಿಗೆ ಕೇವಲ ಕರೆ ಮಾಡಲು ಕಡಿಮೆ ಬೆಲೆಯ ಪ್ಲಾನ್ ಸಿಗೋದು ಕಷ್ಟ. ಇದೀಗ ಇದೇ ವಿಚಾರವಾಗಿ ಟೆಲಿಕಾಂ ಕಂಪನಿಗಳು ಮತ್ತು TRAI (ಟ್ರಾಯ್) ನಡುವೆ ಸಂಘರ್ಷ ಶುರುವಾಗಿದೆ.
ದೇಶದ ಎರಡು ಪ್ರಮುಖ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್ಟೆಲ್ ಆ್ಯಪ್ ಬಗ್ಗೆ ಈಗ ವಿವಾದ ಶುರುವಾಗಿದೆ. ಸರ್ಕಾರಿ ನಿಯಮಗಳ ಅಡಿಯಲ್ಲಿ ಬರುವ ಅಗ್ಗದ ರೀಚಾರ್ಜ್ ಪ್ಲಾನ್ಗಳನ್ನು ಮೊದಲು ತೋರಿಸಲು ಕಂಪನಿಗಳು ಬಯಸ್ತಿಲ್ಲ ಎನ್ನಲಾಗ್ತಿದೆ. ಆದ್ರೆ ಗ್ರಾಹಕರಿಗೆ ಈ ಪ್ಲಾನ್ಗಳು ಸುಲಭವಾಗಿ ಸಿಗಬೇಕು ಎಂಬುದು ಟೆಲಿಕಾಂ ನಿಯಂತ್ರಣ ಸಂಸ್ಥೆ TRAI ಉದ್ದೇಶವಾಗಿದೆ. ಇದಕ್ಕಾಗಿ 'TRAI-Mandated Packs' ಹೆಸರಿನಲ್ಲಿ ಪ್ರತ್ಯೇಕ ಟ್ಯಾಬ್ ರಚಿಸುವಂತೆ ಕಂಪನಿಗಳಿಗೆ ಸೂಚಿಸಿದೆ.
ಆ್ಯಪ್ ನಲ್ಲಿ ಎನು ಕಾಣಿಸ್ಬೇಕು?
ಗ್ರಾಹಕರು ರೀಚಾರ್ಜ್ ಮಾಡಲು ಆ್ಯಪ್ ತೆರೆದಾಗ ಮೊದಲು ಯಾವ ಪ್ಲಾನ್ ಕಾಣಿಸಬೇಕು ಎಂಬುದೇ ಈಗಿನ ಪ್ರಶ್ನೆ. ಕಂಪನಿಗಳು ಹೆಚ್ಚು ಆದಾಯ ತರುವ ದುಬಾರಿ ಪ್ಲಾನ್ಗಳನ್ನೇ ತೋರಿಸಬೇಕೇ ಅಥವಾ ಗ್ರಾಹಕರ ಬಜೆಟ್ಗೆ ಅನುಕೂಲವಾಗುವ ಅಗ್ಗದ ಪ್ಲಾನ್ಗಳನ್ನು ತೋರಿಸಬೇಕೇ ಎಂಬ ಚರ್ಚೆ ನಡೆಯುತ್ತಿದೆ.
ವರದಿಗಳ ಪ್ರಕಾರ, ಅಗ್ಗದ ರೀಚಾರ್ಜ್ ಪ್ಲಾನ್ಗಳನ್ನು ಆ್ಯಪ್ ಮತ್ತು ವೆಬ್ಸೈಟ್ಗಳಲ್ಲಿ ಮೇಲ್ಭಾಗದಲ್ಲಿ ತೋರಿಸಿದರೆ ಹೆಚ್ಚಿನ ಗ್ರಾಹಕರು ಅವುಗಳನ್ನೇ ಆಯ್ಕೆ ಮಾಡ್ತಾರೆ ಎಂಬ ಆತಂಕ ಜಿಯೋ ಮತ್ತು ಏರ್ಟೆಲ್ ಕಂಪನಿಗಳಿಗಿದೆ. ಇದರಿಂದ ತಮ್ಮ ಆದಾಯದ ಮೇಲೆ ಪರಿಣಾಮ ಬೀರಬಹುದು ಎಂಬುದು ಅವರ ವಾದ. ಟೆಲಿಕಾಂ ಕಂಪನಿಗಳು ಗ್ರಾಹಕರು ಕರೆ ಸೌಲಭ್ಯದ ಜೊತೆಗೆ ಇಂಟರ್ನೆಟ್ ಡೇಟಾ ಹಾಗೂ ಇತರ ಸೌಲಭ್ಯಗಳಿರುವ ಪ್ಲಾನ್ಗಳನ್ನು ಖರೀದಿಸಬೇಕೆಂದು ಬಯಸುತ್ತವೆ.
ಈ ಬಗ್ಗೆ ಟೆಲಿಕಾಂ ಕಂಪನಿಗಳು TRAI ಮುಂದೆ ತಮ್ಮ ವಾದವನ್ನೂ ಮಂಡಿಸಿವೆ. ತಮ್ಮ ಆ್ಯಪ್ ಮತ್ತು ವೆಬ್ಸೈಟ್ಗಳಲ್ಲಿ ಗ್ರಾಹಕರು ಈಗಾಗಲೇ ಈ ಪ್ಲಾನ್ಗಳನ್ನು ನೋಡಬಹುದು. ಹೀಗಿರುವಾಗ ಅವುಗಳನ್ನು ಮೊದಲಿಗೆ ತೋರಿಸುವುದು ಕಡ್ಡಾಯವೇಕೆ ಎಂದು ಪ್ರಶ್ನಿಸಿವೆ.
TRAI ಬಯಸುತ್ತಿರುವ ಬದಲಾವಣೆ ಏನು?
2026ರ ಅಕ್ಟೋಬರ್ 1ರಂದು TRAI ಟೆಲಿಕಾಂ ಕಂಪನಿಗಳಿಗೆ ಹೊಸ ನಿರ್ದೇಶನ ನೀಡಿತ್ತು. ಇದರ ಪ್ರಕಾರ, ಎಲ್ಲ ಕಂಪನಿಗಳು ತಮ್ಮ ಪ್ರಿಪೇಯ್ಡ್ ರೀಚಾರ್ಜ್ ವಿಭಾಗದಲ್ಲಿ 'TRAI-Mandated Packs' ಹೆಸರಿನ ಪ್ರತ್ಯೇಕ ಹಾಗೂ ಸ್ಪಷ್ಟವಾಗಿ ಕಾಣಿಸುವ ಟ್ಯಾಬ್ ರಚಿಸಬೇಕು. ಈ ಟ್ಯಾಬ್ನಲ್ಲಿ ನಿಯಂತ್ರಣ ಸಂಸ್ಥೆಯ ನಿಯಮಗಳ ಅಡಿಯಲ್ಲಿ ಬರುವ ವಿವಿಧ ರೀತಿಯ ರೀಚಾರ್ಜ್ ಪ್ಲಾನ್ಗಳನ್ನು ಪ್ರದರ್ಶಿಸಬೇಕು. ಮುಖ್ಯವಾಗಿ, ಮೊಬೈಲ್ ಆ್ಯಪ್ ಮತ್ತು ವೆಬ್ಸೈಟ್ಗಳ ಪ್ರಿಪೇಯ್ಡ್ ರೀಚಾರ್ಜ್ ವಿಭಾಗದಲ್ಲಿ ಈ ಟ್ಯಾಬ್ ಮೊದಲಿಗೆ ಕಾಣಿಸಬೇಕು ಎಂದು TRAI ಸೂಚಿಸಿದೆ.
ಇದರ ಜೊತೆಗೆ ಕಂಪನಿಗಳ ಇತರ ಮಾರಾಟ ಕೇಂದ್ರಗಳಲ್ಲಿಯೂ ಈ ಪ್ಲಾನ್ಗಳನ್ನು ಪ್ರಮುಖವಾಗಿ ಪ್ರದರ್ಶಿಸುವಂತೆ ತಿಳಿಸಲಾಗಿದೆ. ಈ ನಿಯಮಗಳನ್ನು 30 ದಿನಗಳ ಒಳಗೆ ಪಾಲಿಸಿ, ಅದರ ವರದಿಯನ್ನು ಸಲ್ಲಿಸುವಂತೆ ಕಂಪನಿಗಳಿಗೆ ಸೂಚನೆ ನೀಡಲಾಗಿತ್ತು. ಗ್ರಾಹಕರಿಂದ ಅಗ್ಗದ ರೀಚಾರ್ಜ್ ಪ್ಲಾನ್ಗಳು ಸುಲಭವಾಗಿ ಸಿಗುತ್ತಿಲ್ಲ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ TRAI ಈ ಕ್ರಮ ಕೈಗೊಂಡಿತ್ತು.
ಜಿಯೋ, ಏರ್ಟೆಲ್ ರೀಚಾರ್ಜ್ ಆ್ಯಪ್ ಬದಲಾಗುತ್ತಾ?
TRAI ಸೂಚನೆಗಳನ್ನು ಕಂಪನಿಗಳು ಪಾಲಿಸಿದರೆ, ಗ್ರಾಹಕರು ರೀಚಾರ್ಜ್ ಆ್ಯಪ್ ತೆರೆದ ತಕ್ಷಣ ಪ್ರತ್ಯೇಕ ಟ್ಯಾಬ್ ಕಾಣಿಸಿಕೊಳ್ಳಬೇಕು. ಇದರಲ್ಲಿ ಕಡಿಮೆ ಬೆಲೆಯ ಹಾಗೂ ನಿಯಮಗಳ ಅಡಿಯಲ್ಲಿ ಬರುವ ರೀಚಾರ್ಜ್ ಪ್ಲಾನ್ಗಳನ್ನು ಒಂದೇ ಕಡೆ ನೋಡಬಹುದು. ಇದರಿಂದ ಪ್ರತಿ ಬಾರಿ ಬೇರೆ ಬೇರೆ ವಿಭಾಗಗಳಿಗೆ ಹೋಗಿ ಅಗ್ಗದ ರೀಚಾರ್ಜ್ ಹುಡುಕುವ ತೊಂದರೆ ತಪ್ಪಲಿದೆ. ಸದ್ಯ ಜಿಯೋ ತಾನು ನಿಯಮಗಳನ್ನು ಪಾಲಿಸುತ್ತಿರುವುದಾಗಿ ಹೇಳಿದೆ. ಮುಂದಿನ ದಿನಗಳಲ್ಲಿ ಜಿಯೋ ಮತ್ತು ಏರ್ಟೆಲ್ ತಮ್ಮ ಆ್ಯಪ್ ಹಾಗೂ ವೆಬ್ಸೈಟ್ಗಳಲ್ಲಿ ಯಾವ ರೀತಿಯ ಬದಲಾವಣೆ ಮಾಡಲಿವೆ ಕಾದು ನೋಡ್ಬೇಕಿದೆ.














