ಮರಳುಗಾಡಿನಲ್ಲಿ ಚಳಿಗಾಲ ಬಂದಿದೆ!

ಕಿಟಕಿಯಿಂದ ಕಾರಿನೊಳಗೆ ನುಗ್ಗುತ್ತಿದ್ದ ತಣ್ಣನೆಯ ಗಾಳಿ ಮನಸ್ಸಿಗೆ ಮುದ ನೀಡುತ್ತಿದ್ದರೂ, ಕ್ಯಾಮೆರಾ ಬಟನ್ ಮೇಲಿದ್ದ ಕೈ ಚಳಿಗೆ ಮರಗಟ್ಟಿದಂತಾಯಿತು. ಕವಿದಿದ್ದ ಮಂಜಿನಲ್ಲಿ ಕಾರು ಮುನ್ನುಗ್ಗುತ್ತಿದ್ದರೆ, ಮನಸ್ಸು ಮೈಸೂರು, ಬೆಂಗಳೂರಲ್ಲಿ ಕಳೆದ ಮಾಸಿದ ನೆನಪುಗಳನ್ನು ಮೆಲಕು ಹಾಕುತ್ತಾ ಹಿಂದೆ ಸಾಗುತ್ತಿತ್ತು. ಚಳಿಗಾಲದ ಬಗ್ಗೆ ಚೈತ್ರಾ ಅರ್ಜುನಪುರಿ ಬರೆದಿರೋ ಲೇಖನ ಇಲ್ಲಿದೆ.

Winter days memories article by Chaithra Arjunapuri Vin

- ಚಿತ್ರ ಮತ್ತು ಲೇಖನ: ಚೈತ್ರಾ ಅರ್ಜುನಪುರಿ

ಎಂದಿನಂತೆ ನಾಲ್ಕೂವರೆಗೆ ಎದ್ದು ಕಿಟಕಿಯ ಹೊರಗೆ ನೋಡಿದರೆ, ಏನೂ ಕಾಣಿಸುತ್ತಿರಲಿಲ್ಲ, ಪಕ್ಕದ ಕಟ್ಟಡವೂ ಮಾಯ. ಕಣ್ಣಿಗೆ ಕನ್ನಡಕ ಹಾಕಿದ್ದೆ, ಅದನ್ನು ಶರ್ಟಿನ ತುದಿಯಲ್ಲೊಮ್ಮೆ ಒರೆಸಿ, ಫ್ರೆಂಚ್ ಕಿಟಕಿಯನ್ನು ಹೊರ ದೂಡಿದೆ. ತಣ್ಣನೆಯ ಗಾಳಿ ಸುಯ್ಯನೆ ಮುಖಕ್ಕೆ ಅಪ್ಪಳಿಸಿ, ಚಳಿ ಮೈಯನ್ನು ನಡುಗಿಸಿತು. ತಲೆ ಹೊರಗೆ ಹಾಕಿದರೆ, ಸುತ್ತಲೂ ಗಾಢವಾದ ಮಂಜು, ಅಕ್ಕಪಕ್ಕದ ಕಟ್ಟಡಗಳೆಲ್ಲಾ ಮಂಜಿನ ಹಿಂಬದಿಯಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿದ್ದವು. ಮನಸ್ಸಿನಲ್ಲಿ ಏನೋ ಪುಳಕ, ಸಡಗರ ಆವರಿಸಿಕೊಂಡಿತು. ಬೆಳಗ್ಗಿನ ತಿಂಡಿ ತಯಾರಿಸಿ, ಹೆಗಲಿಗೆ ಕ್ಯಾಮೆರಾ ಹಾಕಿಕೊಂಡು ಶಾಲೆಗೆ ಹೊರಟ ಮಗನ ಜೊತೆ ನಾನೂ ಹೊರಟು ನಿಂತೆ.

ಸಮಯ ಆರೂವರೆ ಆದರೂ ಮುಸುಕು ಹೊದ್ದ ಮಂಜು ಕರಗಿರಲಿಲ್ಲ. ಸವಾರರು ಕಾರುಗಳ ಫಾಗ್ ಲೈಟ್, ಹೆಡ್ ಲೈಟ್, ಎಮರ್ಜೆನ್ಸಿ ಫ್ಲಾಷ್ ಲೈಟ್ ಹಾಕಿಕೊಂಡು ಮೆಲ್ಲಗೆ ಮುಂದಕ್ಕೆ ಸಾಗುತ್ತಿದ್ದರು. ಕಿಟಕಿಯಿಂದ ಕಾರಿನೊಳಗೆ ನುಗ್ಗುತ್ತಿದ್ದ ತಣ್ಣನೆಯ ಗಾಳಿ ಮನಸ್ಸಿಗೆ ಮುದ ನೀಡುತ್ತಿದ್ದರೂ, ಕ್ಯಾಮೆರಾ ಬಟನ್ ಮೇಲಿದ್ದ ಕೈ ಚಳಿಗೆ ಮರಗಟ್ಟಿದಂತಾಯಿತು. ಕವಿದಿದ್ದ ಮಂಜಿನಲ್ಲಿ ಕಾರು ಮುನ್ನುಗ್ಗುತ್ತಿದ್ದರೆ, ಮನಸ್ಸು ಮೈಸೂರು, ಬೆಂಗಳೂರಲ್ಲಿ ಕಳೆದ ಮಾಸಿದ ನೆನಪುಗಳನ್ನು ಮೆಲಕು ಹಾಕುತ್ತಾ ಹಿಂದೆ ಸಾಗುತ್ತಿತ್ತು.

ಔತ್ತಮ್ಯದ ಗೀಳಿನಲ್ಲಿ

*

ಮೈಸೂರಿನಲ್ಲಿ ಓದುವಾಗ ಮಂಜಿನ ದಿನಗಳು ನಗರವನ್ನು ಮೃದುವಾಗಿ ಆವರಿಸುವ ರೀತಿ, ಅರಮನೆ ಮತ್ತು ಮಂಜಿನಲ್ಲಿ ಹುದುಗಿದ ಚಾಮುಂಡಿ ಬೆಟ್ಟ ಸೂರ್ಯನ ಮೊದಲ ಕಿರಣಗಳು ಬೀಳುತ್ತಿದ್ದಂತೆಯೇ ಕನಸಿನ ಸಿಲೂಯೆಟ್‌ಗಳಾಗುವ ದೃಶ್ಯ ನೆನೆಸಿಕೊಂಡು ಪುಳಕವಾಯಿತು. ಮಂಜಿನ ಪರದೆಯೊಳಗೆ ನಿಧಾನವಾಗಿ ವಾಕಿಂಗ್ ಹೊರಟವರು, ಅಲ್ಲಲ್ಲಿ ಮನೆ ಮುಂದೆ ಕಸ ಗುಡಿಸಿ, ರಂಗೋಲಿ ಹಾಕುತ್ತಿರುವ ಹೆಂಗಸರು, ಅದೇ ತಾನೇ ತೆರೆದ ಹೋಟೆಲುಗಳ ಮುಂದೆ ದಿನಪತ್ರಿಕೆ ಓದುತ್ತಾ, ಹಬೆಯಾಡುತ್ತಿರುವ ಕಾಫಿ ಹೀರುತ್ತಿರುವ ಜನರು, ಒಮ್ಮೆಲೇ ಕಣ್ಣ ಮುಂದೆ ಬಂದಂತಾಗಿ, ‘ಮಿಸ್ಸಿಂಗ್ ಇಂಡಿಯಾ’ ಎಂದೆ ಪಕ್ಕದಲ್ಲಿದ್ದ ಗಂಡನಿಗೆ.

*

ಎರಡು ಮರೀಚಿಕೆಗಳು:

ಕತಾರ್‌ನಲ್ಲಿ ವಾಸಿಸಲು ಶುರು ಮಾಡಿದ ಮೇಲೆ ಅರಿತುಕೊಂಡ ಒಂದು ಮುಖ್ಯ ವಿಷಯ, ಇಲ್ಲಿ ಮಳೆ ಮತ್ತು ಮಂಜು ಎರಡೂ ಮರೀಚಿಕೆಗಳೇ! ಅದರಲ್ಲೂ ಈ ಮಂಜು ಎನ್ನುವ ಮಾಯಾವಿ ಕನಸಿನಲ್ಲಿ ಬಂದಂತೆ ಬಹಳ ಅಪರೂಪವಾಗಿ, ಯಾವುದೇ ಮುನ್ಸೂಚನೆಯಿಲ್ಲದೆ ಹಠಾತ್ತಾಗಿ ಬೆಳ್ಳಂಬೆಳಗ್ಗೆಯೇ ಬಂದು ಅಷ್ಟೇ ಬೇಗ ಮಾಯವಾಗಿಬಿಡುತ್ತದೆ. ಸುತ್ತಮುತ್ತಲಿನ ಪರಿಸರವನ್ನು ನಿಗೂಢ ಮತ್ತು ಆಕರ್ಷಕವಾಗಿ ಅದು ಪರಿವರ್ತಿಸುವ ಪರಿ ನೋಡಲು ಮಾರನೆಯ ದಿನವೂ ಕಾದು ಕುಳಿತರೆ ನಿರಾಸೆಯೇ ಕಟ್ಟಿಟ್ಟ ಬುತ್ತಿ.

ಕೆವಿ ತಿರುಮಲೇಶ್; ಹೊರನಾಡಿನ ಪರಮ ಕವಿ

ಮಾನವ ನಿರ್ಮಿತ ಜಗತ್ತನ್ನು ಪ್ರಕೃತಿ ಹೇಗೆ ಕಣ್ಣು ಮುಚ್ಚಿ ಬಿಡುವುದರಲ್ಲಿ ಸುಂದರಗೊಳಿಸಬಲ್ಲದು ಎಂದು ಆಲೋಚಿಸುತ್ತಿರುವಾಗಲೇ ಚಳಿಗಾಲದ ಮಂಜಿನ ತಣ್ಣನೆಯ ಅಪ್ಪುಗೆಯ ಅಡಿಯಲ್ಲಿ ಫ್ಯಾಂಟಸಿ ಮತ್ತು ರಿಯಾಲಿಟಿ ಒಮ್ಮೆಲೇ ಧುತ್ತನೆ ಕಣ್ಣೆದುರಿಗೆ ಬಂದ ಹಾಗಾಯಿತು. ಗಗನಚುಂಬಿ ಕಟ್ಟಡಗಳು, ಅಲ್ಲಲ್ಲಿ ಕಾಣಿಸುವ ಖರ್ಜೂರದ ಮರಗಳು, ಪಾರ್ಕಿನ ದಿಬ್ಬಗಳು ಮತ್ತು ಸಮುದ್ರ ತೀರವೆಲ್ಲಾ ಮಂಜಿನ ಸೌಮ್ಯ ಮುಸುಕಿನಲ್ಲಿ ಮುಚ್ಚಿ ಹೋಗಿದ್ದವು. ದಟ್ಟವಾದ ಮಂಜಿನಲ್ಲಿ ಮುಗಿಲೆತ್ತರದ ಕಚೇರಿ ಕಟ್ಟಡಗಳು ಅಸ್ಪಷ್ಟವಾದ ಭೂತಗಳಂತೆ ಕಂಡರೆ, ಅಚಾನಕ್ಕಾಗಿ ದೈನಂದಿನ ಸುತ್ತಮುತ್ತಲಿನ ಪರಿಸರ ಕನಸಿನಂತಹ ಭೂದೃಶ್ಯವಾಗಿ ಮಾರ್ಪಾಟಾಗಿದ್ದವು.

*

ಕರಗದ ನೆನಪುಗಳು

ಮಂಜು ಕವಿದ ರಸ್ತೆಗಳ ಮೂಲಕ ಸಾಗುವಾಗ ಎರಡೂ ಬದಿಗಳಲ್ಲಿರುವ ಬೀದಿ ದೀಪಗಳ ಮಂದ ಬೆಳಕು ಕಾಣಿಸಲೊ ಬೇಡವೋ ಎಂಬಂತೆ ಮಿನುಗುತ್ತಿದ್ದವು. ಈ ವಾತಾವರಣದಲ್ಲಿ ಎದುರಿಗಿರುವ ವಾಹನಗಳೂ ಕಾಣದಷ್ಟು ಕಿರಿಕಿರಿಯಾಗುತ್ತದೆ ನಿಜ. ಆದರೆ ಈ ಅಪರೂಪದ ಅತಿಥಿ ಸೃಷ್ಟಿಸುವ ನಿಗೂಢತೆ, ನಿಶ್ಯಬ್ದ ವಾತಾವರಣಕ್ಕೆ ಮರಳಾಗಲೇ ಬೇಕು. ನಗರದ ಪರಿಚಿತ ಹೆಗ್ಗುರುತುಗಳನ್ನೂ ಮಾಯ ಮಾಡಿ ಬಿಡುವ ಅದರ ಶಕ್ತಿಗೆ ಎಂಥವರೂ ತಲೆದೂಗುತ್ತಾರೆ.

ವಿರಳವಾಗಿ ಬರುವ ಮಂಜನ್ನು ಇಲ್ಲಿ ವಾಸಿಸುವ ನಾವು ಬಹಳ ಪ್ರೀತಿಸುತ್ತೇವೆ. ಚಿತ್ರಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸುತ್ತಮುತ್ತಲಿನ ಪ್ರದೇಶಗಳು ಹೇಗೆ ಬದಲಾಗಿವೆ ಎಂದು ಆಶ್ಚರ್ಯವನ್ನು ವ್ಯಕ್ತಪಡಿಸುತ್ತೇವೆ.

ಮರುಭೂಮಿಯ ಮಧ್ಯದಲ್ಲಿ ಕಾಣಿಸಿಕೊಳ್ಳುವ ಈ ವಿಲಕ್ಷಣ ಮಂಜಿನ ವಾತಾವರಣ ತನ್ನ ಮಾಂತ್ರಿಕತೆಯನ್ನು ತಿಳಿಸುವ ಚಿತ್ರಗಳು ಮತ್ತು ನೆನಪುಗಳನ್ನು ನಮಗೆ ಕೊಟ್ಟು, ಕಾಣಿಸಿಕೊಂಡಷ್ಟೇ ವೇಗವಾಗಿ ಕಾಣದಂತಾಗುತ್ತದೆ. ಆದರೆ ಮಂಜು ಕರಗಿದರೂ ನಾವು ಕಂಡ ಅದ್ಭುತವಾದ ದೃಶ್ಯದ ಕುರಿತು ಮಾತುಗಳು ಮಾತ್ರ ದಿನಗಳುರುಳಿದರೂ ಕರಗುವುದೇ ಇಲ್ಲ.

ಕೃತಕ ಬರಹಗಾರ; ಕಂಪ್ಯೂಟರ್‌ ಕೈ ಬರೆಯುತ್ತದೆ

ಮಾರ್ಚ್ ಬಾರದಿರಲಿ:

ಕತಾರ್‌ನಲ್ಲಿ ಚಳಿಗಾಲ ಬಹಳ ವಿಶಿಷ್ಟವಾದ ಕಾಲ. ವರ್ಷದ ಬಹುಭಾಗವನ್ನು ವಿಪರೀತ ಶಾಖದಲ್ಲೇ (ಬೇಸಿಗೆಗಾಲದಲ್ಲಿ 50-52 ಡಿಗ್ರಿ ಸೆಲ್ಸಿಯಸ್ ಮೀರುವ ತಾಪಮಾನ) ಕಳೆಯುವ ನಾವು, ನವೆಂಬರ್ ಬರುವುದನ್ನೇ ಚಾತಕ ಪಕ್ಷಿಗಳಂತೆ ಕಾಯುತ್ತೇವೆ. ಡಿಸೆಂಬರ್ ಬಂತೆಂದರೆ ನಮಗಿಲ್ಲಿ ಚಳಿಗಾಲ ಶುರು. ಹಗಲು ತಾಪಮಾನ 22-23 ಡಿಗ್ರಿ ಇದ್ದರೂ ರಾತ್ರಿಯಾಗುತ್ತಿದ್ದಂತೆಯೇ 15-16ಕ್ಕೆ ಇಳಿಯುವ ಈ ದಿನಗಳಿಗಾಗಿ ವರ್ಷ ಪೂರ್ತಿ ನಿರೀಕ್ಷಿಸುತ್ತೇವೆ. ಫೆಬ್ರವರಿ ಮುಗಿಯದಿರಲಿ, ಮಾರ್ಚ್ ಬಾರದಿರಲಿ ಎಂದೂ ಆಶಿಸುತ್ತೇವೆ.

ಏಸಿಯ ತಂಪಿನಲ್ಲೇ ದಿನ ದೂಡುವ ನಾವು ಕಾರಿನ ಕಿಟಕಿ ಮತ್ತು ಮನೆಯ ಕಿಟಕಿಗಳನ್ನು ತೆರೆದಿಡುವ ಸಮಯವಿದು. ಎಲ್ಲೋ ಬೆಚ್ಚಗೆ ಅಡಗಿ ಕೂತಿದ್ದ ಸ್ವೆಟರ್ ಮತ್ತು ಶಾಲುಗಳನ್ನು ಹೊರಗೆ ತೆಗೆದು ಪಟ್ಟನೆ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೇವೆ. ಈ ಸಮಯದಲ್ಲಿ ವಿವಿಧ ಕಲಾತ್ಮಕ ಮತ್ತು ಅಥ್ಲೆಟಿಕ್ ಚಟುವಟಿಕೆಗಳನ್ನು ಸಾಲು ಸಾಲಾಗಿ ಆಯೋಜಿಸುತ್ತಾರೆ. ಉದ್ಯಾನವನಗಳು ಮತ್ತು ಇತರ ಸಾರ್ವಜನಿಕ ಪ್ರದೇಶಗಳು ಒಮ್ಮೆಲೇ ಜನರಿಂದ ತುಂಬಿ ತುಳುಕುತ್ತವೆ. ಈ ಮೂರು ತಿಂಗಳುಗಳಲ್ಲಿ ಜರುಗುವ ಹೊರಾಂಗಣ ಉತ್ಸವಗಳು, ಸಂಗೀತ ಕಚೇರಿಗಳು ಮತ್ತು ಕಲಾ ಪ್ರದರ್ಶನಗಳು ಆಹ್ಲಾದಕರ ವಾತಾವರಣದಲ್ಲಿ ಮನಸ್ಸಿಗೆ ಮುದ ನೀಡುತ್ತವೆ.

ಈ ಕಾಲದಲ್ಲಿ ಸಿಗುವ ಭವ್ಯವಾದ ಸೂರ್ಯೋದಯ ಮತ್ತು ಸೂರ್ಯಾಸ್ತ ನಮ್ಮನ್ನು ಮತ್ತಷ್ಟು ಮರಳು ಮಾಡುತ್ತವೆ. ಸದಾ ಉರಿಯುವ ಸೂರ್ಯನ ತಾಪಕ್ಕೆ ಮೇಲೇಳುವ ನಾವು ಗುಲಾಬಿ, ಕಿತ್ತಳೆ ಮತ್ತು ಚಿನ್ನದ ಛಾಯೆಗಳೊಂದಿಗೆ ಸೌಮ್ಯವಾಗಿ ನರ್ತಿಸುವ ರವಿಯ ಉದಯಕ್ಕಾಗಿ ಕಾಯುತ್ತಾ ಕೂರುತ್ತೇವೆ.

ಇನ್ನು ಸಂಜೆಯಾಗುತ್ತಿದ್ದಂತೆಯೇ, ಕ್ಯಾನ್ವಾಸ್ ಮೇಲೆ ಬ್ರಷ್ ಹಿಡಿದು ಬಣ್ಣ ಹಚ್ಚಿದಂತೆ ಮೋಡಗಳು ಆಗಸಕ್ಕೆ ಕಿಡಿ ಹಚ್ಚಿ, ಹಗಲಿನ ಕೊನೆಯ ಕುರುಹುಗಳನ್ನು ಹರಡುತ್ತವೆ. ಇಡೀ ಆಗಸದಂಗಳ ಜೀವಂತ ಮೇರು ಕೃತಿಯಾಗುತ್ತದೆ. ಋತುವಿನ ಶಾಂತ ಮತ್ತು ಭವ್ಯತೆಯ ಕಥೆಗಳನ್ನು ಪಿಸುಗುಟ್ಟುವ ಸಂಕ್ಷಿಪ್ತ ಆದರೆ ಆಳವಾದ ಈ ಚಮತ್ಕಾರ ಫೋಟೋಗಳಲ್ಲಿ ಸೆರೆಯಾಗಿ ಅಳಿಸಲಾಗದ ಗುರುತಾಗಿ ಮನದಲ್ಲಿ ಉಳಿಯುತ್ತದೆ.

Latest Videos
Follow Us:
Download App:
  • android
  • ios