ಕೆಲವರಿಗೆ ದಿನಾ ಬೆಳಿಗ್ಗೆ ಎದ್ದು ಒಂದು ಕಪ್‌ ಟೀ ಕುಡಿದಿಲ್ಲ ಅಂದರೆ ಆ ದಿನ ಆರಂಭವಾಗೋದೇ ಇಲ್ಲ. ಆದರೆ ನಿತ್ಯ ನಾವು ಬಳಸೋ ಟೀ ಬ್ಯಾಗ್‌ನಿಂದ ಅಪಾಯಕಾರಿ ಪ್ಲಾಸ್ಟಿಕ್‌ ನಮ್ಮ ಹೊಟ್ಟೆಸೇರುತ್ತಿದೆಯಂತೆ. ಜರ್ನಲ್‌ ಎನ್ವಿರಾನ್ಮೆಂಟ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿಯಲ್ಲಿ ಈ ಸಮೀಕ್ಷೆ ಪ್ರಕಟವಾಗಿದೆ. ಅದರಲ್ಲಿ ಟೀ ಬ್ಯಾಗನ್ನು ನೀರಿನಲ್ಲಿ ಅದ್ದಿ ಕುದಿಸಿದಾಗ ಅದರಿಂದ ಮೈಕ್ರೋ ಪ್ಲಾಸ್ಟಿಕ್‌ ಮತ್ತು ನ್ಯಾನೋ ಪ್ಲಾಸ್ಟಿಕ್‌ ಬಿಡುಗಡೆಯಾಗುತ್ತದೆ ಎನ್ನಲಾಗಿದೆ.

ಕೆನಡಾ ವಿಶ್ವವಿದ್ಯಾಲಯದ ಸಂಶೋಧಕರೊಬ್ಬರು ಪರಿಸರ, ಜಲಚರ ಜೀವಿಗಳಲ್ಲಿಯೂ ಮೈಕ್ರೋಪ್ಲಾಸ್ಟಿಕ್‌ ಅಂಶ ಇರುತ್ತದೆ ಎನ್ನುವುದನ್ನು ಕಂಡುಹಿಡಿದಿದ್ದಾರೆ. ಆದರೆ ಅದು ಮಾನವನಿಗೆ ಅಪಾಯಕಾರಿಯೇ ಎನ್ನುವು ಇನ್ನೂ ಖಚಿತವಾಗಿಲ್ಲ. ಹಾಗೆಯೇ ಟೀ ಬ್ಯಾಗ್‌ ಪಾನೀಯದೊಳಗೆ ಸೇರಿದಾಗಲೂ ನ್ಯಾನೋ ಮತ್ತು ಮೈಕ್ರೋ ಪ್ಲಾಸ್ಟಿಕ್‌ ಬಿಡುಗಡೆಯಾಗುತ್ತದೆ ಎಂದಿದ್ದಾರೆ.

ಹೊಟ್ಟೆ ಬೊಜ್ಜು ಕರಗಿಸೋದು ಕಷ್ಟವಲ್ಲ; ಇಲ್ಲಿದೆ ಸಿಂಪಲ್ ಟಿಪ್ಸ್!

ವಿವಿಧ ಕಂಪನಿಗಳ ಟೀ ಬ್ಯಾಗ್‌ಗಳನ್ನು ಸಮೀಕ್ಷೆಗೆ ಒಳಪಡಿಸಿ ಸಂಶೋಧನೆ ಕೈಗೊಳ್ಳಲಾಗಿದ್ದು, ಮೊದಲಿಗೆ ಟೀ ಬ್ಯಾಗ್‌ನಲ್ಲಿರುವ ಟೀ-ಪುಡಿಯನ್ನು ಹೊರಗಿಟ್ಟು ಬರೀ ಟೀ-ಬ್ಯಾಗ್‌ಗಳನ್ನು ಮಾತ್ರ ನೀರಿನಲ್ಲಿ ಕುದಿಸಲಾಗಿತ್ತು. ಆಗ ಒಂದು ಪ್ಲಾಸ್ಟಿಕ್‌ ಟೀ-ಬ್ಯಾಗ್‌ನಲ್ಲಿ 1100 ಕೋಟಿ ಮೈಕ್ರೋ ಪ್ಲಾಸ್ಟಿಕ್‌ ಮತ್ತು 300 ಕೋಟಿ ನ್ಯಾನೋ ಪ್ಲಾಸ್ಟಿಕ್‌ ನೀರಿನಲ್ಲಿ ಸೇರಿರುವುದು ಪತ್ತೆಯಾಗಿದೆ.

ಟೀ ಕುಡಿಯೋದ್ರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತೆ, ಚಿಂತೆಗೀಡು ಮಾಡುತ್ತಿದ್ದ ಎಲ್ಲಾ ವಿಚಾರಗಳು ಸ್ವಲ್ಪ ಹೊತ್ತು ತಲೆಯಿಂದ ಆಚೆ ಹೋಗಿ ವಿಶ್ರಾಂತಿ ನೀಡುತ್ತವೆ ಎಂದು ಭಾವಿಸುವವರು ಇಂಥ ಟೀ ಕುಡಿಯಬಹುದು ಹೆಚ್ಚೇನೂ ಆತಂಕ ಪಡಬೇಕಿಲ್ಲ. ಇನ್ನು ಆರೋಗ್ಯದ ಬಗ್ಗೆ ಅತಿಯಾಗಿ ಕಾಳಜಿ ಇರುವವರು ಟೀ ಬ್ಯಾಗ್‌ಗಳಿಂದ ದೂರ ಇರಬಹುದು. ಆಯ್ಕೆ ನಿಮಗೆ ಬಿಟ್ಟಿದ್ದು!