Asianet Suvarna News Asianet Suvarna News

ಹುಡುಗರಲ್ಲಿ ಸ್ತನದ ಗಾತ್ರ ಹೆಚ್ಚಾಗಲು ಕಾರಣವೇನು?

ಟೀನೇಜ್ ಹುಡುಗರಲ್ಲಿ ವಯೋಸಹಜ ಗೊಂದಲ, ತಳಮಳದ ಜೊತೆಗೆ ತಲೆ ಕೆಡುವಂತೆ ಮಾಡುವುದು ಗೈನಕೋಮಾಸ್ಟಿಯಾ. ಈಸ್ಟ್ರೋಜನ್ ಪ್ರಮಾಣ ಹೆಚ್ಚುವುದರಿಂದ ಹುಡುಗನ ಸ್ತನದ ಗಾತ್ರ ಹೆಚ್ಚಾಗಿ ಹೆಣ್ಣೆದೆಯಂತೆ ಕಾಣುತ್ತದೆ.

Reason for enlarged breast in men
Author
Bengaluru, First Published Oct 1, 2018, 12:44 PM IST

ಗೈನಕೋಮಾಸ್ಟಿಯಾ ಎನ್ನುವುದು ರಸದೂತಗಳ ಏರುಪೇರಿನಿಂದಾಗಿ ಉಂಟಾಗುವ ಸಮಸ್ಯೆ. ಹದಿಹರೆಯದ ಹುಡುಗರಲ್ಲಿ ಮತ್ತು ವಯಸ್ಕ ಗಂಡಸರಲ್ಲಿ ಕಂಡು ಬರುತ್ತದೆ. ಬಹಳ ಮುಜುಗರ ಪಡುವ ಮತ್ತು ಸಂಕೋಚ ಉಂಟು ಮಾಡುವ ಈ ಸಮಸ್ಯೆಯಿಂದ ಮಾನಸಿಕ ಖಿನ್ನತೆ ಉಂಟಾಗುವ ಸಾಧ್ಯತೆಯೂ ಇರುತ್ತದೆ.

ಏನಾಗುತ್ತದೆ?

ಪುರುಷರಲ್ಲಿ ಮತ್ತು ಹದಿಹರೆಯದ ಹುಡುಗರಲ್ಲಿ ರಸದೂತಗಳ ಏರುವಿಕೆಯಿಂದಾಗಿ ಎದೆಯಲ್ಲಿನ ಸ್ತನಗಳು ಹೆಚ್ಚು ದೊಡ್ಡದಾಗಿ ಬೆಳೆದು ಸೆಟೆದು ನಿಲ್ಲುತ್ತದೆ. ಇದು ಹುಡುಗರಲ್ಲಿ ಸಾಮಾನ್ಯವಾಗಿ 14 ರಿಂದ 16 ವರ್ಷಗಳಲ್ಲಿ ಕಂಡುಬರುತ್ತದೆ. 75 ಶೇಕಡಾ ಹುಡುಗರಲ್ಲಿ ಒಂದೆರಡು ವರ್ಷಗಳಲ್ಲಿ ತನ್ನಿಂತಾನೇ ಕಡಿಮೆಯಾಗುತ್ತದೆ. ಆದರೆ ಉಳಿದ 25 ಶೇಕಡಾ ಮಂದಿಯಲ್ಲಿ ಈ ಸ್ತನಗಳ ಗಾತ್ರ ಹಾಗೆಯೇ ಉಳಿದುಕೊಂಡು ಅಥವಾ ಗಾತ್ರದಲ್ಲಿ ಹೆಚ್ಚಳವಾಗಿ ಬಹಳ ತೊಂದರೆ ಉಂಟು ಮಾಡುತ್ತದೆ.

ಕ್ಯಾನ್ಸರ್ ಆಗಿರಬಹುದಾ?

ಹೆಚ್ಚಾಗಿ ಈಸ್ಟ್ರೋಜೆನ್ ಮತ್ತು ಆಂಡ್ರೋಜೆನ್ ಎಂಬ ರಸದೂತಗಳ ಸರಾಸರಿಯಲ್ಲಿ ಉಂಟಾಗುವ ಏರಿಳಿತದಿಂದ ಖಾಯಿಲೆ ಬರುತ್ತದೆ. ಆಂಡ್ರೋಜೆನ್ ಪುರುಷರಲ್ಲಿ ಹೆಚ್ಚು ಕಂಡು ಬರುವ ರಸದೂತವಾಗಿದ್ದು, ಈಸ್ಟ್ರೋಜೆನ್ ಹೆಂಗಸರಲ್ಲಿ ಹೆಚ್ಚು ಇರುತ್ತದೆ. ಇವೆರಡೂ ಸರಿಯಾದ ಸಮಪಾತದಲ್ಲಿ ಇದ್ದಲ್ಲಿ ಏನೂ ತೊಂದರೆಯಾಗುವುದಿಲ್ಲ. ಆದರೆ ಇವುಗಳ ಸಮಪಾತದಲ್ಲಿ ಏರುಪೇರಾಗಿ ಈಸ್ಟ್ರೋಜೆನ್ ರಸದೂತಗಳ ಕೈ ಮೇಲಾದಲ್ಲಿ, ಪುರುಷರಲ್ಲಿ ಮಹಿಳೆಯರಂತೆ ಸ್ತನಗಳು ಹಿಗ್ಗಿಕೊಳ್ಳಲು ಕಾರಣವಾಗುತ್ತದೆ. ಇದು ಕ್ಯಾನ್ಸರ್ ಗಡ್ಡೆಗಿಂತ ಭಿನ್ನವಾಗಿರುತ್ತದೆ. ಆದರೆ ಹೆಚ್ಚಿನ ಪುರುಷರು ಕ್ಯಾನ್ಸರ್ ಬಂದಿರಬಹುದು ಎಂಬ ಸಂಶಯದಿಂದಲೇ ಹೆಚ್ಚು ಚಿಂತಿತರಾಗುತ್ತಾರೆ. ಹೆಚ್ಚಾಗಿ ಎರಡೂ ಸ್ತನಗಳಲ್ಲಿ ಇದು ಕಂಡುಬರುತ್ತದೆ.

ಸ್ತನದ ಕ್ಯಾನ್ಸರ್ ಇದ್ದಲ್ಲಿ ಯಾವುದಾದರೂ ಒಂದು ಸ್ತನದಲ್ಲಿ ಮಾತ್ರ ಕಂಡು ಬರುತ್ತದೆ. ಅದೇ ರೀತಿ ಸ್ತನಗಳ ಚರ್ಮದಲ್ಲಿ ಗುಳಿ ಬೀಳುವುದು ಮತ್ತು ಮೊಲೆ ತೊಟ್ಟು ಹುದುಗಿಕೊಳ್ಳುವುದು ಸಾಮಾನ್ಯವಾಗಿ ಕ್ಯಾನ್ಸರ್‌ನ ಲಕ್ಷಣ. ಆದರೆ ಈ ತೊಂದರೆ ಗೈನಕೋಮಾಸ್ಟಿಯಾ ರೋಗದಲ್ಲಿ ಕಂಡು ಬರುವುದಿಲ್ಲ. ಆದರೂ ವಿರಳ ಸಂದರ್ಭಗಳಲ್ಲಿ ಲಿವರ್ ತೊಂದರೆ, ಪುರುಷರ ವೃಷಣದ ಕ್ಯಾನ್ಸರ್‌ನಿಂದಲೂ ಗೈನಕೋಮಾಸ್ಟಿಯಾ ಲಕ್ಷಣ ಕಾಣಿಸಿಕೊಳ್ಳಬಹುದು.

ಯಾಕೆ ಬರುತ್ತದೆ?

  • ಈಸ್ಟ್ರೋಜೆನ್ ಮತ್ತು ಆಂಡ್ರೋಜೆನ್ ಹಾರ್ಮೋನ್ ಪ್ರಮಾಣದಲ್ಲಿ ಏರುಪೇರಾಗುತ್ತದೆ. ಈಸ್ಟ್ರೋಜೆನ್ ಪ್ರಮಾಣ ಜಾಸ್ತಿಯಾಗಿ ಆಂಡ್ರೋಜೆನ್ ಪ್ರಮಾಣ ಕಡಿಮೆಯಾಗುತ್ತದೆ.ಈಸ್ಟ್ರೋಜೆನ್ ಸ್ತನಗಳ ಗಾತ್ರವನ್ನು
  • ಹಿಗ್ಗಿಸುತ್ತದೆ. ಇದಕ್ಕೆ ಕಾರಣ ಗೊತ್ತಿಲ್ಲ.
  • ಕೆಲವೊಂದು ಔಷಗಳ ಅಡ್ಡ ಪರಿಣಾಮದಿಂದಲೂ ಗೈನಕೋಮಾಸ್ಟಿಯಾ ಬರಬಹುದು. ಅಮ್ಲೊಡಿಪಿನ್, ಮೆಥಾಡೋನ್, ಮೆಟ್ರೊನಿಡಜೋಲ್, ಕೀಟೋಕೋನಜಾಲ್, ಕ್ಯಾನ್ಸರ್‌ಗೆ ಬಳಸುವ ಕಿಮೋಥೆರಪಿ ಔಷಗಳು, ಆಲ್ಡೊಸ್ಟಿರೋನ್ ನಿಯಂತ್ರಕ ಔಷಗಳು ಗೈನಕೋಮಾಸ್ಟಿಯಾ ಉಂಟು ಮಾಡುತ್ತದೆ.
  • ಕಿಡ್ನಿ ತೊಂದರೆ, ಲಿವರ್ ತೊಂದರೆ ಮತ್ತು ಟೆಸ್ಟೊಸ್ಟಿರಾನ್ ರಸದೂತಗಳ ಕೊರತೆಯಿಂದಲೂ ಗೈನಕೋಮಾಸ್ಟಿಯಾ ಬರುತ್ತದೆ.
  • ಅಲ್ಸರೇಟಿವ್ ಕೊಲೈಟಿಸ್, ಸಿಸ್ಟಿಕ್, ಪೆಬ್ರೋಸಿಸ್, ಆಲ್ಕೋಹಾಲ್ ಲಿವರ್ ಡಿಸೀಸ್ ಮುಂತಾದವುಗಳಿಂದಲೂ ಗೈನಕೋಮಾಸ್ಟಿಯಾ ಉಂಟಾಗುತ್ತದೆ.
  • ಅತಿಯಾದ ಸ್ಟಿರಾಯ್ಡ್ ಸೇವನೆ, ಅತಿಯಾದ ಹೆರಾಯಿನ್, ಮರಿಜುವಾನ ಮುಂತಾದ ಮಾದಕ ದ್ರವ್ಯಗಳ ಸೇವನೆಯಿಂದಲೂ ಗೈನಕೋಮಾಸ್ಟಿಯಾ ಬರುತ್ತದೆ
Follow Us:
Download App:
  • android
  • ios