ಶಿವಮೊಗ್ಗ(ಡಿ.21): ಜನರ ಸಂಕಷ್ಟಗಳಿಗೆ ಸ್ಪಂದಿಸುವವರು ಬಿಜೆಪಿ ಕಾರ್ಯಕರ್ತರು ಮಾತ್ರ ಎಂದು ಜಿಪಂ ಸದಸ್ಯ ಕೆ.ಇ.ಕಾಂತೇಶ್‌ ಹೇಳಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಹೊಳಲೂರು ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಗೊಂದಿಚಟ್ನಹಳ್ಳಿ ಗ್ರಾಮದಲ್ಲಿ ಭಾನುವಾರ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರ ಮತ ಯಾಚನೆ ನಡೆಸಿದ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು.

ಬಿಜೆಪಿ ಕಾರ್ಯಕರ್ತರು ಒಬ್ಬೊಬ್ಬರು ಕನಿಷ್ಠ 10 ಮನೆಗಳಿಗೆ ಭೇಟಿ ನೀಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ತಿಳಿಸಿ ಶೇ.95ರಷ್ಟು ಮತದಾನವಾಗುವಂತೆ ನೋಡಿಕೊಳ್ಳಿ ಹಾಗೂ ಹಣ, ಹೆಂಡ ಹಂಚುವ ಕೆಲಸವನ್ನು ತಡೆಯಿರಿ ಎಂದು ಸಲಹೆ ನೀಡಿದರು.

ಹೊಳಲೂರು ಶಕ್ತಿಕೇಂದ್ರ ವ್ಯಾಪ್ತಿಯಲ್ಲಿ 27 ಹಳ್ಳಿಗಳು, 33 ಬೂತ್‌ಗಳು, 8 ಗ್ರಾಪಂಗಳು, 97 ಗ್ರಾಪಂ ಸ್ಥಾನವಿದ್ದು, 6 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. 9 ಸೀಟುಗಳಿಗೆ ಚುನಾವಣೆ ನಡೆಯಲಿದ್ದು, ನಮ್ಮದೇ ಪಕ್ಷದ 116 ಅಭ್ಯರ್ಥಿಗಳಿದ್ದಾರೆ. ಚುನಾವಣೆ ನಂತರ ನಾವೆಲ್ಲರೂ ಒಂದೇ. ಚುನಾವಣೆಯಲ್ಲಿ ಸೋಲು, ಗೆಲುವು ಏನಾದರೂ ಬಿಜೆಪಿ ಜನರ ಸೇವೆ ಮಾಡಲಿದೆ. ಈ ವಿಶೇಷತೆ ಬಿಜೆಪಿಯಲ್ಲಿ ಮಾತ್ರ. ಹೊಳಲೂರು ಜಿಪಂ ಸದಸ್ಯನಾಗಿ 17 ಕೋಟಿಗೂ ಹೆಚ್ಚಿನ ಅನುದಾನ ತಂದಿದ್ದೇನೆ. ನಿಮ್ಮೆಲ್ಲರ ಸಹಕಾರದಿಂದ ಅಭಿವೃದ್ಧಿಯಾಗಿದೆ ಎಂದು ಹೇಳಿದರು.

'ಕಾಂಗ್ರೆಸ್ ತೊರೆದು ಮತ್ತೊಂದು ಪಕ್ಷಕ್ಕೆ ಹೋಗುತ್ತಾರೆ ಸಿದ್ದರಾಮಯ್ಯ'

ಗ್ರಾಮಾಂತರ ಕ್ಷೇತ್ರದ ಮಾಜಿ ಅಧ್ಯಕ್ಷ ವಿರೂಪಾಕ್ಷಪ್ಪ ಮಾತನಾಡಿ, ಇದು ವಿಭಿನ್ನ ಚುನಾವಣೆ ಪಕ್ಷ ಸಂಘಟನೆ ಮಾಡಿ, ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಿ, ಬೂತ್‌ಮಟ್ಟದಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಮಾಡಬೇಕೆಂದು ಕರೆ ನೀಡಿದರು. ಪ್ರಮುಖರಾದ ರತ್ನಾಕರ ಶೆಣೈ, ಅರುಣ್‌, ಶಾಂತಾ ಚಂದ್ರಪ್ಪ, ವನಜಾಕ್ಷಿ, ಸುರೇಶ್‌, ಪ್ರಕಾಶ್‌, ಸುರೇಶ್‌, ಅಶೋಕ್‌, ಮೇಘರಾಜ್‌ ಮತ್ತಿತರರಿದ್ದರು.

ತಾಯಿ ಮಗನಿಗಲ್ಲದೆ ಮತ್ಯಾರಿಗೆ ಸಪೋರ್ಟ್‌ ಮಾಡ್ತಾರೆ

ಆರ್‌ಎಸ್‌ಎಸ್‌ ಬಿಜೆಪಿಗೆ ತಾಯಿ ಇದ್ದಂತೆ, ತಾಯಿ ಮಗನಿಗೆ ಸಪೋರ್ಟ್‌ ಮಾಡದೆ ಇನ್ಯಾರಿಗೆ ಸಪೋರ್ಟ್‌ ಮಾಡುತ್ತಾರೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಕುರುಬರ ಎಸ್ಟಿ ಹೋರಾಟದ ಖಜಾಂಚಿ ಕೆ.ಈ.ಕಾಂತೇಶ್‌ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು. 

ಸಿದ್ದರಾಮಯ್ಯ ಅವರು ಕುರುಬರನ್ನು ಎಸ್ಟಿಗೆ ಸೇರಿಸಲು ಆರ್‌ಎಸ್‌ಎಸ್‌ ತೆರೆಮರೆಯಲ್ಲಿದೆ ಎಂದು ಆರೋಪಿಸಿರುವುದಕ್ಕೆ ತಿರುಗೇಟು ನೀಡಿದ ಅವರು, ಈ ಹೋರಾಟಕ್ಕೆ ಕಾಂಗ್ರೆಸ್‌, ಜೆಡಿಎಸ್‌ ಸಹಾಯ ಎಷ್ಟಿದೆಯೋ ಅಷ್ಟೇ ಸಹಾಯ ಮಾಡುತ್ತಿದೆ. ಆರ್‌ಎಸ್‌ ಎಸ್‌ ಇದ್ದರೆ ತಪ್ಪೇನು ಎಂದು ಪ್ರಶ್ನಿಸಿದರು. ಎಸ್ಟಿಮೀಸಲಿಗೆ ಸೇರಿಸಲು ಕುರುಬ ಜನಾಂಗದ ಹೋರಾಟ ನಿನ್ನೆ, ಮೊನ್ನೆಯದಲ್ಲ. ಹಿರಿಯರು ತೋರಿಸಿಕೊಟ್ಟ ಹೋರಾಟದ ಹಾದಿಯಲ್ಲಿ ನಡೆಯುತ್ತಿದ್ದೇವೆ. ಇದರಲ್ಲಿ ಬಿಜೆಪಿ ಏಕಪಕ್ಷವಾಗಿ ಹೋರಾಡುತ್ತಿದೆ ಎಂಬುದು ಸುಳ್ಳು ಎಂದು ತಿಳಿಸಿದರು. ಈ ಹೋರಾಟದಲ್ಲಿ ಕಾಂಗ್ರೆಸ್‌ನವರೇ ಆದ ಎಚ್‌.ಎಂ.ರೇವಣ್ಣ, ವಿರೂಪಾಕ್ಷಪ್ಪ, ಬಂಡೆಪ್ಪ ಕಾಶಂಪೂರ್‌ ಹಾಗೂ ಜೆಡಿಎಸ್‌ನವರೂ ಇದ್ದಾರೆ. ಇದು ಪಕ್ಷಾತೀತ ಹೋರಾಟ ಎಂದು ಸ್ಪಷ್ಟಪಡಿಸಿದರು.