ಮೇರಾ ಬಚಪನ್: ಮಕ್ಕಳೊಂದಿಗೆ ಮಗುವಾದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ!
ಮಕ್ಕಳ ಜೊತೆ ಮಗುವಾದ ಜಿಪಂ ಅಧ್ಯಕ್ಷೆ| ಕಲಿತ ಶಾಲೆ ಮಕ್ಕಳೊಂದಿಗೆ ಆಟಪಾಠ| ರಾಜಕೀಯ ಜಂಜಾಟದ ಮಧ್ಯೆ ಶಾಲೆಯಲ್ಲಿ ವಿದ್ಯಾರ್ಥಿನಿಯಾಗಿ, ಮರಸುತ್ತಿ ಚುಕುಬುಕು ರೈಲಿನಾಟ| ಕಲಿತ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಆಟಪಾಠದಲ್ಲಿ ತಲ್ಲೀನಳಾದ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ| ಬಾಗಲಕೋಟೆ ನಗರದ ಸರ್ಕಾರಿ ಶಾಲೆ ನಂ.4ಕ್ಕೆ ಭೇಟಿ ನೀಡಿ ಗುರುವೃಂದಕ್ಕೆ ನಮೋನಮ: ಎಂದ ಬಾಯಕ್ಕ| ಅಧ್ಯಕ್ಷೆ ಭೇಟಿಯಿಂದ ಸಂತಸಗೊಂಡ ಮಕ್ಕಳಿಂದ ಚುಕುಬುಕು ರೈಲಿನ ಆಟ|
ಮಲ್ಲಿಕಾರ್ಜುನ ಹೊಸಮನಿ
ಬಾಗಲಕೋಟೆ(ಮೇ.31): ಇವರು ಈಗ ಜಿಲ್ಲಾ ಪಂಚಾಯತಿ ನೂತನ ಅಧ್ಯಕ್ಷೆ, ಅಧ್ಯಕ್ಷೆ ಆದರೂ ತಾವು ಕಲಿತ ಶಾಲೆಗೆ ಭೇಟಿ ನೀಡಿದಾಗ ಅವರಿಗೆ ಇನ್ನಿಲ್ಲದ ಆನಂದ. ಮಗುವಾಗಿದ್ದಾಗ ಶಾಲೆಯಲ್ಲಿ ತಾವು ಕೂರುವ ಜಾಗದಲ್ಲಿ ಕುಳಿತು, ಮಕ್ಕಳೊಂದಿಗೆ ಬೆರೆತು ಚುಕುಬುಕು ರೈಲಿನ ಆಟವಾಡಿ, ಆಟದೊಂದಿಗೆ ಪಾಠವನ್ನೂ ಕಲಿತರು. ವಿಶೇಷ ಅಂದರೆ ಕೊನೆಗೆ ಇಡೀ ಗುರುವೃಂದವನ್ನು ಸಾಲಾಗಿ ನಿಲ್ಲಿಸಿ ಅವರಿಗೆ ನಮಸ್ಕರಿಸಿ ಜಿಪಂ ಅಧ್ಯಕ್ಷೆ ಆಶೀರ್ವಾದ ಪಡೆದರು.
ಹೀಗೆ ಶಾಲಾ ತರಗತಿಯಲ್ಲಿ ಮಗುವಾಗಿ ಕುಳಿತಿರೋ ಜಿಲ್ಲಾ ಪಂಚಾಯತಿ ಅಧ್ಯಕ್ಷೆ. ಅಧ್ಯಕ್ಷೆಯನ್ನು ಅಭಿಮಾನದಿಂದ ಕಂಡು ಸನ್ಮಾನಿಸುತ್ತಿರುವ ಶಾಲಾ ಸಿಬ್ಬಂದಿ, ಸರ್ಕಾರಿ ಶಾಲೆ ಮಕ್ಕಳೊಂದಿಗೆ ಗಿಡವನ್ನು ಸುತ್ತುತ್ತಾ ಚುಕುಬುಕ ರೈಲಿನ ಆಟವಾಡ್ತಿರೋ ಜಿಪಂ ಅಧ್ಯಕ್ಷೆ.
"
ಇಂತಹವೊಂದು ದೃಶ್ಯ ಕಂಡು ಬಂದಿದ್ದು ಬಾಗಲಕೋಟೆಯಲ್ಲಿ. ಜಿಲ್ಲಾ ಪಂಚಾಯತಿ ನೂತನ ಅಧ್ಯಕ್ಷೆಯಾಗಿ ಮಾಜಿ ಸಚಿವ ಎಚ್.ವೈ.ಮೇಟಿ ಅವರ ಪುತ್ರಿ ಬಾಯಕ್ಕ ಮೇಟಿ ನೇಮಕವಾಗಿದ್ದು, ಇತ್ತ ಅಧಿಕಾರ ಸ್ವೀಕರಿಸಿದ ಮರುದಿನವೇ ಬಾಯಕ್ಕ ಮೇಟಿ ತಾನು ಕಲಿತ ನಗರದ ಸರ್ಕಾರಿ ಶಾಲೆ ನಂಬರ್ 04ಕ್ಕೆ ಭೇಟಿ ನೀಡಿದರು. ಇತ್ತ ಶಾಲೆಗೆ ಭೇಟಿ ನೀಡಿದ್ದೇ ತಡ ಅಲ್ಲಿದ್ದ ಶಿಕ್ಷಕರಿಗೆ, ಮಕ್ಕಳಿಗೆ ಸಿಬ್ಬಂದಿಗೆ ಇನ್ನಿಲ್ಲದ ಹರ್ಷವೋ ಹರ್ಷ.
ಹೀಗಾಗಿ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ತರಗತಿಯಲ್ಲಿ ತಾವು ಕೂರುತ್ತಿದ್ದ ಸ್ಥಳದಲ್ಲೇ ಹೋಗಿ ಕುಳಿತು ಹಿಂದಿನ ಬಾಲ್ಯದ ನೆನಪುಗಳನ್ನ ಸ್ಮರಿಸಿಕೊಂಡ್ರು. ಅಕ್ಕಪಕ್ಕದಲ್ಲಿದ್ದ ಮಕ್ಕಳೊಂದಿಗೆ ಚಿನ್ನಾಟ ಆಡ್ತಾ ಪರಿಚಯ ಮಾಡಿಕೊಂಡ್ರು. ಬಳಿಕ ತಂದಿದ್ದ ಸಿಹಿಯನ್ನ ತರಗತಿ ಎಲ್ಲಾ ಮಕ್ಕಳಿಗೆ ನೀಡಿದ್ರು. ಇದ್ರಿಂದ ಅಲ್ಲಿದ್ದ ಮಕ್ಕಳಿಗೆ ಪಾರವೇ ಇರಲಿಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಶಾಲಾ ಮಕ್ಕಳೊಂದಿಗೆಯೇ ಮೈದಾನಕ್ಕೆ ಬಂದ ಬಾಯಕ್ಕ ಮೇಟಿ ಚಿಕ್ಕ ಚಿಕ್ಕ ಮಕ್ಕಳೊಂದಿಗೆ ಚುಕುಬುಕು ರೈಲಿನ ಆಟವಾಡಿದರು.
ಈ ಮಧ್ಯೆ ಜಿಪಂ ಅಧ್ಯಕ್ಷೆಗೆ ಜಿಲ್ಲಾ ಪಂಚಾಯತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತಾ ಸಿಂಗಾಡೆ ಸಹ ಸಾಥ್ ನೀಡಿದ್ರು. ಒಟ್ಟಿನಲ್ಲಿ ಇದೊಂದು ಬಾಲ್ಯದ ಸವಿಸವಿ ನೆನಪು ತಮ್ಮ ಜೀವನದಲ್ಲಿ ಮರೆಯಲಾಗದ ಕ್ಷಣ ಅಂದ್ರು.
"
ಇನ್ನು ತಾವು ಕಲಿತ ಶಾಲೆಯಲ್ಲಿನ ಭೇಟಿಗೆ ಒಂದು ಕ್ಷಣ ಭಾವುಕರಾದ ಬಾಯಕ್ಕ ಮೇಟಿ, ಶಾಲೆಯಲ್ಲಿನ ಎಲ್ಲ ಶಿಕ್ಷಕ, ಶಿಕ್ಷಕಿಯರನ್ನ ಕರೆಯಿಸಿ ಅವರನ್ನ ಸಾಲಂಕೃತವಾಗಿ ನಿಲ್ಲಿಸಿ ಅವರಿಗೆ ಬಾಗಿ ನಮಸ್ಕರಿಸಿ ಆಶೀರ್ವಾದ ಬೇಡಿದ್ದು ಗಮನ ಸೆಳೆಯಿತು.
ಹಿಂದೆ ಕಲಿಸಿದ ಶಿಕ್ಷಕರು ಈಗಿರಲಿಲ್ಲ ಹೀಗಾಗಿ ಕಲಿತ ಶಾಲೆಯಲ್ಲಿ ಇದ್ದ ಶಿಕ್ಷಕರಿಗೆ ನಮಸ್ಕರಿಸಿ ಆಶೀರ್ವಾದ ಬೇಡಲು ಬಾಯಕ್ಕ ಮುಂದಾದ್ರು. ಇನ್ನು ಶಾಲಾ ತರಗತಿಯಲ್ಲಿ ಮಕ್ಕಳೊಂದಿಗೆ ಇದ್ದ ಅಧ್ಯಕ್ಷೆ ಬಳಿಕ ಮಕ್ಕಳೊಂದಿಗೆ ಶಾಲೆ ಆವರಣಕ್ಕೆ ಬಂದಾಗ ಮಕ್ಕಳೊಂದಿಗೆ ಆಟವಾಡಿದ್ದಷ್ಟೇ ಅಲ್ಲದೆ ಮರದ ಕೆಳೆಗೆ ಶಿಕ್ಷಕಿಯೊಬ್ಬರು ಕಲಿಸಿದ ನಲಿಕಲಿ ಹಾಡಿಗೆ ಮಕ್ಕಳೊಂದಿಗೆ ಹೆಜ್ಜೆ ಹಾಕಿ ಗಮನ ಸೆಳೆದ್ರು.
ಇನ್ನು ಶಾಲೆಯಲ್ಲಿ ಸರಸ್ವತಿ ದೇವಿಗೆ ಪೂಜೆ ಸಲ್ಲಿಸಿದ್ರು. ಇದಾದ ಬಳಿಕ ಶಾಲೆಗೆ ಬಂದ ಹಳೆ ವಿದ್ಯಾರ್ಥಿ ಈಗಿನ ಜಿಪಂ ಅಧ್ಯಕ್ಷೆಗೆ ಶಾಲೆ ವತಿಯಿಂದ ಸನ್ಮಾನ ಮಾಡಲಾಯಿತು. ಬೆಳಗಿನಿಂದ ಎರಡ್ಮೂರು ಗಂಟೆಗೆಯವರೆಗೆ ಅಧ್ಯಕ್ಷೆ ಬಾಯಕ್ಕ ಮೇಟಿ ಎಲ್ಲ ಜಂಜಾಟ ಮರೆತು ತಾವು ಕಲಿತ ಶಾಲೆಯಲ್ಲಿಯೇ ಉಳಿದುಕೊಂಡಿದ್ದು ಶಾಲೆ ಮೇಲಿನ ಅವರ ಅಭಿಮಾನಕ್ಕೆ ಸಾಕ್ಷಿಯಾಯಿತು.
"
ಒಟ್ಟಿನಲ್ಲಿ ಕಲಿತ ಸರ್ಕಾರಿ ಶಾಲೆಗೆ ತೆರಳಿ ಅಲ್ಲಿನ ಮಕ್ಕಳೊಂದಿಗೆ ಮಕ್ಕಳಾಗಿ ಆಟ ಪಾಠವಾಡಿ ಬೆರೆತು ಗುರುವೃಂದಕ್ಕೆ ಗೌರವ ಸಲ್ಲಿಸಿದ ಬಾಗಲಕೋಟೆ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ನಡೆ ಅತ್ತ ಶಾಲೆ ಶಿಕ್ಷಕರಿಗೆ ಮತ್ತು ಮಕ್ಕಳಿಗೂ ಅಭಿಮಾನ ಮೂಡಿಸುವಂತೆ ಮಾಡಿದ್ದಂತು ಸುಳ್ಳಲ್ಲ. ಇದರೊಟ್ಟಿಗೆ ಕಲಿತ ಶಾಲೆ ಅಭಿವೃದ್ಧಿಗೆ ಮುಂದಾಗ್ತೀನಿ ಅಂದಿರೋ ಜಿಪಂ ಅಧ್ಯಕ್ಷೆ ಇಚ್ಚೆಯಂತೆ ಕೆಲ್ಸ ಆದಷ್ಟು ಶೀಘ್ರ ಕೈಗೂಡುವಂತಾಗಲಿ ಅನ್ನೋದೆ ಎಲ್ಲರ ಆಶಯ.